ADVERTISEMENT

ಜಾಗೃತಿ ಮೂಡಿಸಿದ ‘ಮತದಾನ ಉತ್ಸವ’

ಗಮನ ಸೆಳೆದ ರಂಗೋಲಿ, ಚಿತ್ರಕಲೆ; ರಂಜಿಸಿದ ದೇಸಿ ಕ್ರೀಡೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 5:01 IST
Last Updated 19 ಏಪ್ರಿಲ್ 2019, 5:01 IST
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮತದಾನ ಜಾಗೃತಿ ಉತ್ಸವ’ದಲ್ಲಿ ಚಿತ್ರಕಲಾ ಶಿಕ್ಷಕರೊಬ್ಬರು ಮತದಾನದ ಮಹತ್ವ ಸಾರುವ ಚಿತ್ರವನ್ನು ಬೃಹತ್‌ ಬಟ್ಟೆಯಲ್ಲಿ ಬಿಡಿಸಿದರು.
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮತದಾನ ಜಾಗೃತಿ ಉತ್ಸವ’ದಲ್ಲಿ ಚಿತ್ರಕಲಾ ಶಿಕ್ಷಕರೊಬ್ಬರು ಮತದಾನದ ಮಹತ್ವ ಸಾರುವ ಚಿತ್ರವನ್ನು ಬೃಹತ್‌ ಬಟ್ಟೆಯಲ್ಲಿ ಬಿಡಿಸಿದರು.   

ದಾವಣಗೆರೆ: ಒಂದು ಕಡೆ ಮತದಾರರ ವಿವೇಕದ ಕಣ್ಣು ತೆರೆಸುತ್ತಿದ್ದ ಸುಂದರ ರಂಗೋಲಿಗಳು. ಮತ್ತೊಂದು ಕಡೆ ಹೃದಯದ ಕದತಟ್ಟುತ್ತಿದ್ದ ವೈವಿಧ್ಯಮ ಚಿತ್ರಗಳು. ಇನ್ನೊಂದೆಡೆ ಮುಖದ ಮೇಲೆ ರಾಷ್ಟ್ರಧ್ವಜದ ಚಿತ್ರ ಬಿಡಿಸಿಕೊಂಡು ಮತದಾನಕ್ಕೆ ಕಾತರದಿಂದ ಕಾಯುತ್ತಿರುವ ಯುವಕ–ಯುವತಿಯರು. ದೇಸಿ ಆಟ ಪ್ರದರ್ಶಿಸಿ ಗಮನ ಸೆಳೆದ ಚಿಣ್ಣರು...

ನಗರದ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮತದಾರರ ಜಾಗೃತಿ ಉತ್ಸವ’ದಲ್ಲಿ ಕಂಡುಬಂದ ದೃಶ್ಯಗಳಿವು. ಚಿತ್ರಕಲೆ, ಜನಪದ ಗಾಯನ, ನೃತ್ಯ, ಸಾಹಸ ಕ್ರೀಡೆ ಹಾಗೂ ಗೋಣಿಚೀಲ ಓಟ, ರಂಗೋಲಿ, ಚಿತ್ರಕಲಾ ಸ್ಪರ್ಧೆಗಳು ಮತದಾನದ ಮಹತ್ವವನ್ನು ಸಾರಿದವು.

ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಮೂಹ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯ, ಹಿಮಾಲಯನ್ ಅಡ್ವೆಂಚರ್ ಆ್ಯಂಡ್‌ ಸ್ಪೋರ್ಟ್ಸ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಉತ್ಸವವು ಗಮನ ಸೆಳೆಯಿತು.

ADVERTISEMENT

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸದಸ್ಯರು ಬೃಹತ್ ಬಟ್ಟೆಯಲ್ಲಿ ಮತದಾನ ಜಾಗೃತಿ ಕುರಿತು ಹಲವು ಚಿತ್ರ ರಚಿಸಿದರು. ದಾವಣಗೆರೆ ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನ 30 ವಿದ್ಯಾರ್ಥಿಗಳು ಮತದಾನ ಜಾಗೃತಿ ಕುರಿತು ಚಿತ್ರ ಬಿಡಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಹಗ್ಗ-ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ ನಡೆಯಿತು.

ವಿದ್ಯಾರ್ಥಿನಿಯರು, ಮಹಿಳೆಯರು ಮತದಾನ ಜಾಗೃತಿ ಸಂದೇಶ ಒಳಗೊಂಡ 30ಕ್ಕೂ ಹೆಚ್ಚು ರಂಗೋಲಿ ಬಿಡಿಸಿದ್ದರು. ಇಪ್ತಾ ಕಲಾವಿದರು ಮತದಾನ ಜಾಗೃತಿ ಗೀತೆಗಳನ್ನು ಹಾಡಿದರು. ಜನಪದ ಕಲಾವಿದರು ಡೊಳ್ಳು ಕುಣಿತ ಪ್ರದರ್ಶಿಸಿದರು.

ಹೆಣ್ಣುಮಕ್ಕಳು ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿದರು. ಅಕ್ರಾಲಿಕ್ ಬಣ್ಣದಲ್ಲಿ ಕೈ ಹಾಗೂ ಮುಖದ ಮೇಲೆ ಭಾರತದ ಬಾವುಟ ಬಿಡಿಸಿಕೊಂಡು ಯುವಕ–ಯುವತಿಯರು ಮತದಾನದ ಗುರುತು ತೋರಿಸಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಚುನಾವಣಾ ಸಾಮಾನ್ಯ ವೀಕ್ಷಕ ಆನಂದ ಶರ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌. ಬಸವರಾಜೇಂದ್ರ, ಉಪ ಕಾರ್ಯದರ್ಶಿ ಭೀಮಾ ನಾಯ್ಕ, ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.