ಹೊನ್ನಾಳಿ: ಮನೆಮನೆಯಿಂದ ಕಸ ಸಂಗ್ರಹಿಸುವ ವಾಹನಗಳಿಗೆ ಲೋಡರ್ಸ್ ಕೊರತೆ ಇರುವ ಕಾರಣ ಜನರು ಹಸಿ ಕಸ, ಒಣ ಕಸ ಬೇರ್ಪಡಿಸಿದರೂ ಒಟ್ಟಿಗೇ ಸುರಿಯಬೇಕಾದ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಘನ ತ್ಯಾಜ್ಯ ನಿರ್ವಹಣೆ ನಿಯಮದ ಪ್ರಕಾರ ಹಸಿ ಕಸ, ಒಣ ಕಸ, ಎಲೆಕ್ಟ್ರಾನಿಕ್ ವೇಸ್ಟ್, ಸ್ಯಾನಿಟರಿ ವೇಸ್ಟ್ ಎಂದು ಮನೆಗಳಲ್ಲಿಯೇ ವಿಂಗಡಿಸಿ ಸಂಗ್ರಹಿಸಲು ಬರುವ ವಾಹನಗಳಿಗೆ ನೀಡಬೇಕು. ಸದ್ಯ ಪಟ್ಟಣದಲ್ಲಿ ಕಸ ಸಂಗ್ರಹಿಸಲು ಬರುವ ವಾಹನಗಳಲ್ಲಿ ಚಾಲಕರಿರುತ್ತಾರೆಯೇ ಹೊರತು, ಕಸವನ್ನು ಜನರಿಂದ ಪಡೆದುಕೊಂಡು ಕಸವನ್ನು ಬೇರ್ಪಡಿಸಿರುವಂತೆಯೇ ಬೇರೆ ಬೇರೆಯಾಗಿ ಸುರುವಿಕೊಳ್ಳಲು ಲೋಡರ್ಸ್ ಇಲ್ಲ. ಹಾಗಾಗಿ ಜನರು ಕಸವನ್ನು ಬೇರ್ಪಡಿಸಿದ್ದರೂ ಒಟ್ಟಿಗೇ ಹಾಕಬೇಕಾದ ಅನಿವಾರ್ಯತೆ ಇದೆ.
ಈ ಬಗ್ಗೆ ವಾಹನ ಚಾಲಕನನ್ನು ಪ್ರಶ್ನಿಸಿದರೆ, ‘ಲೋಡರ್ಸ್‌ಗಳು ಇಲ್ಲ. ವಾಹನವನ್ನೂ ಚಲಾಯಿಸಿಕೊಂಡು ಕಸವನ್ನೂ ನಾನೇ ಪ್ರತ್ಯೇಕವಾಗಿ ಸಂಗ್ರಹಿಸಲು ಆಗುವುದಿಲ್ಲ’ ಎನ್ನುತ್ತಾರೆ. ಹೀಗಾಗಿ ಪುರಸಭೆ ವ್ಯಾಪ್ತಿಯಲ್ಲಿ ನಿಯಮದ ಉದ್ದೇಶ ಮಣ್ಣು ಪಾಲಾಗಿದೆ.
ವಾಹನಗಳಲ್ಲಿ ಕೆಲವರು ಮುಸುರಿಯಂತಹ ದ್ರವರೂಪದ ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದು, ವಾಹನಗಳಿಂದ ಸೋರಿಕೆಯಾಗಿ ರಸ್ತೆಯುದ್ದಕ್ಕೂ ಹರಡುತ್ತಿದೆ. ಇದರಿಂದ ಗಬ್ಬು ವಾಸನೆ ಉಂಟಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗಿದೆ. ಲೋಡರ್ಸ್ ವಾಹನಗಳ ಜೊತೆಗೆ ಇದ್ದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ದುರ್ಗಿಗುಡಿ ನಿವಾಸಿ ಮಂಜುಳಾ ತಿಳಿಸಿದ್ದಾರೆ.
ಪುರಸಭೆಯಲ್ಲಿ ನಾಲ್ಕು ವಾಹನಗಳಿದ್ದು, ಅದರಲ್ಲಿ ಒಂದು ದುರಸ್ತಿಯಲ್ಲಿದೆ. ಮೂರು ಟ್ರ್ಯಾಕ್ಟರ್‌ಗಳಿವೆ. ಇನ್ನೂ ಒಂದೆರಡು ವಾಹನಗಳ ಅಗತ್ಯವಿದೆ. ಲೋಡರ್ಸ್ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಜೊತೆಗೆ ಯಂತ್ರೋಪಕರಣಗಳ ಖರೀದಿ ಪ್ರಕ್ರಿಯೆ ಆಗಬೇಕಾಗಿದೆ. ಈ ಎರಡೂ ಪ್ರಕ್ರಿಯೆಗಳು ನಡೆದ ನಂತರ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ನಿರೀಕ್ಷಕ ಹರ್ಷವರ್ಧನ್ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕರ ಸಭೆ ಕರೆದು ಕಸ ವಿಂಗಡಿಸಿ ನೀಡುವ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಲಾಗುವುದು. ಲೋಡರ್ಸ್ ನೇಮಕ ಕುರಿತು ಮಾಹಿತಿ ಪಡೆದು ಕ್ರಮ ವಹಿಸಲಾಗುವುದು.
-ವಿ. ಅಭಿಷೇಕ್ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.