ADVERTISEMENT

ಜಗಳೂರು | 57 ಕೆರೆಗಳಿಗೆ ಶೀಘ್ರ ನೀರು: ಶಾಸಕ ಬಿ. ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:19 IST
Last Updated 16 ಜೂನ್ 2024, 16:19 IST
ಜಗಳೂರಿನಲ್ಲಿ ಭಾನುವಾರ ಶಾಸಕ ಬಿ. ದೇವೇಂದ್ರಪ್ಪ ಅವರು ಕೆರೆ ಹಿನ್ನೀರಿನಿಂದ ಮನೆ ಕಳೆದುಕೊಂಡ ಸಂತ್ರಸ್ತರ ಅಹವಾಲು ಆಲಿಸಿದರು
ಜಗಳೂರಿನಲ್ಲಿ ಭಾನುವಾರ ಶಾಸಕ ಬಿ. ದೇವೇಂದ್ರಪ್ಪ ಅವರು ಕೆರೆ ಹಿನ್ನೀರಿನಿಂದ ಮನೆ ಕಳೆದುಕೊಂಡ ಸಂತ್ರಸ್ತರ ಅಹವಾಲು ಆಲಿಸಿದರು   

ಜಗಳೂರು: ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ದೇವಿಕೆರೆ ಸಮೀಪ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಳೆಗಾಲದಲ್ಲಿ ಎಲ್ಲಾ ಕೆರೆಗಳಿಗೆ ನೀರು ಬರಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಪಟ್ಟಣದಲ್ಲಿ ಪಂಚಾಯಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದ ನಂತರ ಸಾರ್ವಜನಿಕರ ಅಹವಾಲು ಆಲಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಶೀಘ್ರ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತ್ವರಿತ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ADVERTISEMENT

ಪಟ್ಟಣದಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ನಿರ್ಮಾಣಕ್ಕಾಗಿ ₹ 5 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಪಟ್ಟಣದ ಕೆರೆಗೆ ಹೊಂದಿಕೊಂಡಿರುವ ಜೋಗಪ್ಪನ ಗುಡಿ ಪ್ರದೇಶದಲ್ಲಿ ಎರಡು ವರ್ಷದ ಹಿಂದೆ ಕೆರೆಗೆ ಹೆಚ್ಚು ನೀರು ಹರಿದು ಬಂದಿದ್ದರಿಂದ ತೆರವುಗೊಳಿಸಲಾಗಿದ್ದ 40ಕ್ಕೂ ಹೆಚ್ಚು ಮನೆಗಳ ನಿವಾಸಿಗಳ ಸಂತ್ರಸ್ತರು ತಮಗೆ ಶಾಶ್ವತ ಮನೆಗಳನ್ನು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು.

‘ಎಲ್ಲ ಸಂತ್ರಸ್ತರೂ ಒಟ್ಟಿಗೆ ಬನ್ನಿ. ಚರ್ಚೆ ಮಾಡಿ ಪರಿಹಾರದ ಬಗ್ಗೆ ಯೋಚಿಸೋಣ’ ಎಂದು ಶಾಸಕರು ಹೇಳಿದರು.

ಪಟ್ಟಣದ ಹೊಸ ಹಾಗೂ ಹಳೆ ಬಸ್ ನಿಲ್ದಾಣಗಳಲ್ಲಿರುವ ಶೌಚಾಲಯ ಹಾಗೂ ಆವರಣವನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಯೊಂದಿಗೆ ಸೇರಿ ಶಾಸಕರು ಸ್ವಚ್ಛಗೊಳಿಸಿದರು. ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸೇವಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸದಸ್ಯರಾದ ರವಿಕುಮಾರ್, ರಮೇಶ್, ಅಹಮದ್ ಅಲಿ, ಬ್ಲಾಕ್ ಕಾಂಗ್ರೆ‌ಸ್ ಅಧ್ಯಕ್ಷ ಷಂಷೀರ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಮಂಜುನಾಥ್, ಹಟ್ಟಿ ತಿಪ್ಪೇಸ್ವಾಮಿ, ಎ.ಎಲ್. ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.