ADVERTISEMENT

ಜಗಳೂರು | ಭರಮಸಮುದ್ರ ಕೆರೆ ತೂಬಿನಲ್ಲಿ ಸೋರಿಕೆ: ರೈತರಲ್ಲಿ ಆತಂಕ

50 ವರ್ಷದ ನಂತರ ಮೈದುಂಬಿ ಐತಿಹಾಸಿಕ ಕೆರೆ; ದುರಸ್ತಿ ಆರಂಭ

ಡಿ.ಶ್ರೀನಿವಾಸ
Published 24 ಅಕ್ಟೋಬರ್ 2024, 7:19 IST
Last Updated 24 ಅಕ್ಟೋಬರ್ 2024, 7:19 IST
 ಜಗಳೂರು ತಾಲ್ಲೂಕಿನ ಭರಮಸಮುದ್ರ ಕೆರೆಯ ತೂಬಿನಲ್ಲಿ ನೀರು ಸೋರಿಕೆಯಾಗುತ್ತಿದ್ದು, ಮಂಗಳವಾರ ನುರಿತ ಕೆಲಸಗಾರರು ದುರಸ್ತಿ ಕಾಮಗಾರಿ ಕೈಗೊಂಡರು.
 ಜಗಳೂರು ತಾಲ್ಲೂಕಿನ ಭರಮಸಮುದ್ರ ಕೆರೆಯ ತೂಬಿನಲ್ಲಿ ನೀರು ಸೋರಿಕೆಯಾಗುತ್ತಿದ್ದು, ಮಂಗಳವಾರ ನುರಿತ ಕೆಲಸಗಾರರು ದುರಸ್ತಿ ಕಾಮಗಾರಿ ಕೈಗೊಂಡರು.   

ಜಗಳೂರು: ಚಿತ್ರದುರ್ಗದ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ತಾಲ್ಲೂಕಿನ ಐತಿಹಾಸಿಕ ಭರಮಸಮುದ್ರ ಕೆರೆ 50 ವರ್ಷದಗಳ ನಂತರ ತುಂಬಿದ್ದು, ಯಾವುದೇ ಕ್ಷಣದಲ್ಲಿ ಕೋಡಿ ಹರಿಯುವ ಸಾಧ್ಯತೆ ಇದೆ. ಆದರೆ, ಕೆರೆಯ ತೂಬಿನಲ್ಲಿ ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಆ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ.

ತಾಲ್ಲೂಕಿನ ಅತಿದೊಡ್ಡ ಕೆರೆಗಳಲ್ಲೊಂದಾಗಿರುವ ಭರಮಸಮುದ್ರ ಕೆರೆ ಸುಮಾರು 300 ಎಕರೆ ವಿಸ್ತೀರ್ಣ ಹೊಂದಿದ್ದು, 400 ಹೆಕ್ಟೇರ್‌ಗೂ ಹೆಚ್ಚು ಭೂಮಿಗೆ ನೀರಾವರಿ ಒದಗಿಸುತ್ತದೆ. ತುಂಗಭದ್ರಾ ನದಿಯಿಂದ 57 ಕೆರೆಗಳನ್ನು ತುಂಬಿಸುವ ಯೋಜನೆಯಡಿ 15 ದಿನದ ಹಿಂದೆ ಪೈಪ್‌ಲೈನ್ ಕಾಮಗಾರಿ ಪೂರ್ಣವಾಗಿದ್ದು, ನಿರಂತರವಾಗಿ ಕೆರೆಗೆ ನೀರು ಹರಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, 5 ದಶಕಗಳ ನಂತರ ಮೊದಲ ಬಾರಿಗೆ ಕೆರೆ ತುಂಬಿದೆ.

2002ರಲ್ಲಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ಕೆರೆಯ ಮಧ್ಯ ಭಾಗದಲ್ಲಿ ಕೆರೆ ಏರಿ ಒಡೆದು ನೂರಾರು ಎಕರೆ ಪ್ರದೇಶಕ್ಕೆ ನೀರು ನಿಗ್ಗಿ ಅಪಾರ ಪ್ರಂಆಣದ ಹಾನಿಯಾಗಿತ್ತು.

ADVERTISEMENT

ಕಳೆದ 10 ದಿನಗಳಿಂದ ಕೆರೆಯ ತೂಬಿನಿಂದ ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿದು ಪೋಲಾಗುತ್ತಿದ್ದು, ಅಕ್ಕಪಕ್ಕದ ಹಳ್ಳಿಗಳ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಮೂಲ್ಯ ನೀರು ಪೋಲಾಗುತ್ತಿರುವ ಕಾರಣ ಶಾಸಕ ಬಿ. ದೇವೇಂದ್ರಪ್ಪ ಅವರು ಎರಡು ದಿನದ ಹಿಂದೆ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೂಡಲೇ ತೂಬಿನಿಂದ ನೀರು ಸೋರಿಕೆಯನ್ನು ತಡೆಗಟ್ಟಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕೆರೆಯ ಪ್ರಮುಖ ತೂಬಿನ ಕೆಳಭಾಗದಲ್ಲಿ ನಿರಂತರವಾಗಿ ಸೋರಿಕೆಯಾಗಿ ನೀರು ಹೊರ ಭಾಗಕ್ಕೆ ಹರಿದು ಹೋಗುತ್ತಿದ್ದರಿಂದ ಮಂಗಳವಾರ ತುರ್ತಾಗಿ ದುರಸ್ತಿ ಕಾರ್ಯ ಪ್ರಾರಂಭಿಸಲಾಗಿದೆ. ಹರಪನಹಳ್ಳಿಯಿಂದ ಆಗಮಿಸಿರುವ ಕಾರ್ಮಿಕರು ಮಂಗಳವಾರ ಜೆಸಿಬಿ ಯಂತ್ರದ ಸಹಾಯದಿಂದ ತೂಬಿನ ತಳ ಭಾಗದಲ್ಲಿ ದುರಸ್ತಿ ಕಾರ್ಯ ಕೈಗೊಂಡರು.

2002ರಲ್ಲಿ ಈ ಕೆರೆ ಒಡೆದು, ಸಾಕಷ್ಟು ಹಾನಿಯಾಗಿತ್ತು. ಅಂದಿನಿಂದ ಇದುವರೆಗೆ ಕನಿಷ್ಠ ಒಂದೆರೆಡು ಅಡಿಯಷ್ಟೂ ನೀರು ಸಂಗ್ರಹವಾಗಿರಲಿಲ್ಲ. ಇದೀಗ ತುಂಬಿರುವ ಕೆರೆಯಿಂದ ನೀರು ಸೋರಿಕೆಯಾಗುತ್ತಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.