ADVERTISEMENT

ಸುಂದರ ಕಲ್ಯಾಣಿಯಾಗುತ್ತಿದೆ ದಾವಣಗೆರೆಯ ಹೊಂಡ

ನಗರವಾಸಿಗಳನ್ನು ಆಕರ್ಷಿಸಲು ಸನ್ನದ್ಧವಾಗುತ್ತಿರುವ ಜಲಮೂಲ

ಸ್ಮಿತಾ ಶಿರೂರ
Published 29 ಜುಲೈ 2022, 3:52 IST
Last Updated 29 ಜುಲೈ 2022, 3:52 IST
ಹಳೇ ದಾವಣಗೆರೆಯ ಹೊಂಡದ ವೃತ್ತದ ಬಳಿ ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣಿ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಹಳೇ ದಾವಣಗೆರೆಯ ಹೊಂಡದ ವೃತ್ತದ ಬಳಿ ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣಿ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಹಳೇ ದಾವಣಗೆರೆಯ ಹೊಂಡದ ವೃತ್ತದಲ್ಲಿ ಇದ್ದ ಹೊಂಡ ಈಗ ಸುಂದರ ಕಲ್ಯಾಣಿಯಾಗಿ ರೂಪುಗೊಂಡಿದ್ದು, ಜನಮನ ಸೆಳೆಯುತ್ತಿದೆ. ಕಲ್ಯಾಣಿ ನಿರ್ಮಾಣದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಇನ್ನು 2–3 ತಿಂಗಳುಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಹಳೇ ದಾವಣಗೆರೆ ಭಾಗದಲ್ಲಿ ಆಕರ್ಷಣೆಯ ಕೇಂದ್ರಗಳಾಗಿರುವ ಆನೆಕೊಂಡ ಬಸವೇಶ್ವರ ದೇವಸ್ಥಾನ, ದುರ್ಗಾಂಬಿಕಾ ದೇವಾಲಯಗಳ ಜೊತೆ ಇನ್ನೇನು ಕೆಲವೇ ದಿನಗಳಲ್ಲಿ ಹೊಂಡದ ವೃತ್ತದ ಈ ಕಲ್ಯಾಣಿಯೂ ಸೇರ್ಪಡೆಗೊಳ್ಳಲಿದೆ. ದುರ್ಗಾಂಬಿಕಾ ದೇಗುಲದ ಬಳಿ, ಮದಕರಿ ನಾಯಕ ಪ್ರತಿಮೆಯ ಹಿಂಭಾಗದಲ್ಲಿ ಇರುವ ಈ ಸುಂದರ ಕಲ್ಯಾಣಿ ಈಗಾಗಲೇ ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ. ಆಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇಷ್ಟಪಡುತ್ತಿದ್ದು, ಸೆಲ್ಫಿ ಹಾಗೂ ಫೋಟೊ ಶೂಟ್‌ಗೆ ನೆಚ್ಚಿನ ತಾಣವಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.

‘ಪುರಾತನವಾದ ಈ ಹೊಂಡದಲ್ಲಿ 60–70ರ ದಶಕದಲ್ಲಿ ನಾವೆಲ್ಲ ಪೈಲ್ವಾನರು ಈಜು ಕಲಿತಿದ್ದೆವು. ಈ ಜಾಗದಲ್ಲಿ ಎತ್ತು, ಎಮ್ಮೆ ಹಾಗೂ ಕುರಿಗಳ ಸಂತೆ ನಡೆಯುತ್ತಿತ್ತು. ಈ ಕೊಳದ ನೀರನ್ನು ಕುಡಿಯಲಿಕ್ಕಾಗಿಯೂ ಬಳಸುತ್ತಿದ್ದರು. ಅಂದು ಆಡಳಿತ ನಡೆಸುತ್ತಿದ್ದ ಸ್ಥಳೀಯ ಸಂಸ್ಥೆಯೇ ಇದನ್ನು ನಿರ್ಮಿಸಿತ್ತು. ದಾವಣಗೆರೆ ನಗರದಲ್ಲಿ ಬೇರೆ ಎಲ್ಲಿಯೂ ಕಲ್ಯಾಣಿ ಕಂಡು ಬರುವುದಿಲ್ಲ. ಇಲ್ಲಿಯ ಜಲ ಯಾವಾಗಲೂ ಬತ್ತಿದ್ದೇ ಇಲ್ಲ’ ಎಂದು ಪೈಲ್ವಾನ್‌ ಯಶವಂತರಾವ್‌ ಜಾಧವ್‌ ನೆನಪಿಸಿಕೊಂಡರು.

ADVERTISEMENT

‘ಕಾಲ ಕ್ರಮೇಣ ಕಂಡುಬಂದ ಬದಲಾವಣೆಗಳಿಂದ ಈ ಹೊಂಡ ಪಾಳುಬಿತ್ತು. ಗಿಡಗಂಟಿಗಳು ಬೆಳೆದವು. ಕಸದ ತೊಟ್ಟಿಯಾಗಿ ಬದಲಾಯಿತು. 5–6 ವರ್ಷಗಳ ಹಿಂದೆ ನಾವೆಲ್ಲ ಸ್ಥಳೀಯರು ಹಾಗೂ ಶಾಸಕರು ಸೇರಿ ಸಂಸದರ ಬಳಿ ಈ ಕೊಳದ ಪುನರುಜ್ಜೀವನಕ್ಕಾಗಿ ಮನವಿ ಮಾಡಿದ್ದೆವು. ಅದಕ್ಕೆ ಒಪ್ಪಿಗೆ ದೊರೆತು, ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಡಿ ಪೇಟೆಯಲ್ಲಿರುವ ಕ್ಲಾಕ್‌ ಟವರ್‌ ನವೀಕರಣ ಹಾಗೂ ಹೊಂಡದ ವೃತ್ತದ ಕಲ್ಯಾಣಿಯ ಪುನರ್‌ ನಿರ್ಮಾಣ ಕಾಮಗಾರಿಯನ್ನು ₹ 3.10 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕಾಮಗಾರಿ ಅಂತಿಮ ಹಂತ ತಲುಪಿದೆ. ಜನರಿಗೆ ಕುಳಿತುಕೊಳ್ಳಲು ಬೆಂಚ್‌ ಅಳವಡಿಕೆ, ಅಲಂಕಾರಿಕ ದೀಪಗಳ ವ್ಯವಸ್ಥೆ ಹಾಗೂ ಗಿಡಗಳನ್ನು ನೆಟ್ಟು ಸೌಂದರ್ಯೀಕರಣ ಮಾಡುವುದಷ್ಟೇ ಬಾಕಿ ಇದೆ. ₹ 55 ಲಕ್ಷ ವೆಚ್ಚದಲ್ಲಿ ಪಾಥ್‌ವೇ ಹಾಗೂ ₹ 65 ಲಕ್ಷ ಅಂದಾಜು ವೆಚ್ಚದಲ್ಲಿ ಅಲಂಕಾರಿಕ ಬೆಳಕಿನ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗುವುದು. ವಿದ್ಯುದೀಕರಣ ಸಂಬಂಧಿತ ಸಾಮಗ್ರಿಗಳನ್ನು ಇಡಲು ಕೊಠಡಿಯೊಂದನ್ನು ನಿರ್ಮಿಸಲಾಗುತ್ತಿದೆ. ಕಲ್ಯಾಣಿಯ ನಟ್ಟನಡುವೆ, ನೀರಿನಲ್ಲಿ ಒಂದು ಚಿಕ್ಕ ಕಾರಂಜಿಯನ್ನೂ ಅಳವಡಿಸಲಾಗುತ್ತಿದೆ. ಇವೆಲ್ಲ ಮುಗಿಯಲು ಇನ್ನೂ 2ರಿಂದ 3 ತಿಂಗಳು ಅಗತ್ಯವಿದೆ’ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದರು.

‘ನೆಲ ಮಟ್ಟದಿಂದ ಕಲ್ಯಾಣಿಯು 4.25 ಮಿಟರ್‌ಗಳಷ್ಟು ಆಳದಲ್ಲಿದೆ. ಸಾದರಹಳ್ಳಿಯ ಗ್ರಾನೈಟ್‌ ಕಲ್ಲುಗಳನ್ನು ಕಲ್ಯಾಣಿ ನಿರ್ಮಾಣಕ್ಕೆ
ಅಂದ ಹೆಚ್ಚಿಸುವುದಕ್ಕೆ ಬಳಸಲಾಗಿದೆ.

88 ಕಂಬಗಳು, 154 ಕಲ್ಲಿನ ಪ್ಯಾರಾಗೋಲಾಗಳು, 80 ತೊಲೆಗಳು ಇವೆ. 4 ಗೋಪುರ, 4 ಕಳಸಗಳು ಇವೆ. ವಿದ್ಯುದೀಕರಣ ಹಾಗೂ ಲೇಸರ್‌ ಲೈಟಿಂಗ್‌ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಸುತ್ತಲೂ ಚಿಕ್ಕ ಉದ್ಯಾನ ನಿರ್ಮಾಣಕ್ಕಾಗಿ ಗೊಬ್ಬರ ಹಾಕುವ ಕಾರ್ಯವೂ ನಡೆದಿದೆ. ಈ ಕಲ್ಯಾಣಿಯ ಪುನರ್ ನಿರ್ಮಾಣದಿಂದಾಗಿ ಸುತ್ತಲಿನ ಅಂತರ್ಜಲವು ಮರುಪೂರಣಗೊಳ್ಳಲಿದೆ. ಹತ್ತಿರದಲ್ಲೇ ಸ್ಮಾರ್ಟ್‌
ಸಿಟಿ ಯೋಜನೆ ಅಡಿ ನಿರ್ಮಿಸಲಾಗಿರುವ ಸಮುದಾಯ ಭವನದಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಇದೇ ಕಲ್ಯಾಣಿಗೆ ಬರುವಂತೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಮಾಡಿದ್ದೇವೆ. ಇದರಿಂದ ಮಳೆ ನೀರು ಇಲ್ಲೇ ಇಂಗಿ ಬೇಸಿಗೆಯಲ್ಲೂ ನೀರು ಬತ್ತದಂತಾಗುತ್ತದೆ’ ಎಂದು
ಸ್ಮಾರ್ಟ್‌ಸಿಟಿ ಯೋಜನೆಯ ಜೂನಿಯರ್‌ ಎಂಜಿನಿಯರ್‌ ರೋಹಿತ್‌ ಎನ್‌. ವಿವರಿಸಿದರು.

*
ಪ್ರಮುಖ ಕಾಮಗಾರಿಗಳು ಮುಗಿದಿವೆ. 5 ವರ್ಷಗಳ ಕಾಲ ಗುತ್ತಿಗೆ ಪಡೆದಿರುವ ಕಂಪನಿಯೇ ನಿರ್ವಹಣೆ ಮಾಡಲಿದೆ. ಇನ್ನು 2–3 ತಿಂಗಳಲ್ಲಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗುತ್ತದೆ.
–ರವೀಂದ್ರ ಮಲ್ಲಾಪುರ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ.

*
ಹಳೇ ದಾವಣಗೆರೆಯ ದುರ್ಗಾಂಬಿಕಾ ಗುಡಿಗೆ ದೂರದೂರದಿಂದ ಭಕ್ತರು ಬರುತ್ತಾರೆ. ಈಗ ಹತ್ತಿರದಲ್ಲೇ ಸುಂದರವಾದ ಕಲ್ಯಾಣಿಯೂ ನಿರ್ಮಾಣಗೊಂಡಿರುವುದರಿಂದ ದೇವಸ್ಥಾನಕ್ಕೆ ಬಂದವರು ಅದನ್ನೂ ನೋಡಿ ಸಂತಸ ಪಡಬಹುದು.
– ಯಶವಂತರಾವ್‌ ಜಾಧವ್‌, ಬಿಜೆಪಿ ಮುಖಂಡರು

*
ಕಲ್ಯಾಣಿ ಇರುವ ಜಾಗ 7 ಹಾಗೂ 8 ನೇ ವಾರ್ಡ್‌ ವ್ಯಾಪ್ತಿಗೆ ಬರುತ್ತದೆ. ಪಾಲಿಕೆಗೆ ಹಸ್ತಾಂತರವಾದ ನಂತರ ನಿರ್ವಹಣೆಯ ಬಗ್ಗೆ ಯೋಜನೆ ಮಾಡಲಾಗುತ್ತದೆ. ಹಳೇ ದಾವಣಗೆರೆ ಭಾಗದಲ್ಲಿ ಒಂದು ಸುಂದರ, ನೆಮ್ಮದಿಯ ತಾಣ ನಿರ್ಮಾಣವಾದಂತಾಗಿದೆ.
– ಗಾಯತ್ರಿಬಾಯಿ ಖಂಡೋಜಿರಾವ್‌, ಉಪಮೇಯರ್‌ ಹಾಗೂ 8ನೇ ವಾರ್ಡ್‌ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.