ADVERTISEMENT

ದಾವಣಗೆರೆ: ತೇವಾಂಶದ ಕೊರತೆ, ಹೆಚ್ಚಿದ ಬಿಸಿಲ ಝಳ-ಹೈರಾಣದ ಜನ

ಚಂದ್ರಶೇಖರ ಆರ್‌.
Published 29 ಮಾರ್ಚ್ 2024, 6:43 IST
Last Updated 29 ಮಾರ್ಚ್ 2024, 6:43 IST
<div class="paragraphs"><p>ದಾವಣಗೆರೆ ನಗರದಾದ್ಯಂತ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಬಿಸಿಲಿನಿಂದ ಪಾರಾಗಲು ಮಕ್ಕಳು ನಗರದ ಪಂಪ್‌ಹೌಸ್ ಬಳಿಯ ಭದ್ರಾ ನಾಲೆಯಲ್ಲಿ ಈಜಾಡುತ್ತಿದ್ದುದು ಗುರುವಾರ ಕಂಡುಬಂತು–</p></div>

ದಾವಣಗೆರೆ ನಗರದಾದ್ಯಂತ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಬಿಸಿಲಿನಿಂದ ಪಾರಾಗಲು ಮಕ್ಕಳು ನಗರದ ಪಂಪ್‌ಹೌಸ್ ಬಳಿಯ ಭದ್ರಾ ನಾಲೆಯಲ್ಲಿ ಈಜಾಡುತ್ತಿದ್ದುದು ಗುರುವಾರ ಕಂಡುಬಂತು–

   

 –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದಾವಣಗೆರೆ: ಜಿಲ್ಲೆಯಲ್ಲಿ ಮಾರ್ಚ್‌ ಕೊನೆಯ ವಾರದಲ್ಲೇ ಬಿಸಿಲ ಬೇಗೆ ಮಿತಿಮೀರಿದೆ. ವಾತಾವರಣದಲ್ಲಿ ತೇವಾಂಶ ಇಲ್ಲದಿರುವುದರಿಂದ ಒಣಹವೆ ಹೆಚ್ಚಿದೆ. ಬೆಳಿಗ್ಗೆ 8ರ ಹೊತ್ತಿಗೇ ಸೂರ್ಯ ಕೆಂಡವಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.

ADVERTISEMENT

ಮಾರ್ಚ್‌ ಕೊನೆಯಲ್ಲೇ ಈ ರೀತಿಯ ಬಿಸಿಲು ಇದೆ. ಏಪ್ರಿಲ್‌, ಮೇ ತಿಂಗಳಲ್ಲಿ ಉಷ್ಣಾಂಶ ಇನ್ನೂ ಹೆಚ್ಚಾಗಲಿದೆ ಎಂಬ ಹವಾಮಾನ ಮುನ್ಸೂಚನೆ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಸಿಲ ಬೇಗೆಗೆ ಉಷ್ಣಾಂಶ ಅತಿಯಾಗಿದ್ದು, ಮನೆಯಿಂದ ಹೊರಬರಲಾಗದ ಸ್ಥಿತಿ ಇದೆ. ಫ್ಯಾನ್‌, ಎ.ಸಿ, ಕೂಲರ್‌ ಇಲ್ಲದೇ ಇರಲು ಸಾಧ್ಯವಾಗದ ಸ್ಥಿತಿ ಇದೆ. ಜನರು ಬಿಸಿಲಿನ ತಾಪ ತಣಿಸಿಕೊಳ್ಳಲು ತಂಪು ಪಾನೀಯ, ಎಳನೀರು, ಕಬ್ಬಿನ ರಸ, ಹಣ್ಣುಗಳ ಮೊರೆ ಹೋಗಿದ್ದಾರೆ.

ಮಧ್ಯಾಹ್ನ ಅಥವಾ ಮಧ್ಯ ರಾತ್ರಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಲ್ಲಿ ಮನೆಯಲ್ಲಿ ಇರುವುದೇ ದುಸ್ತರ ಎಂಬ ಸ್ಥಿತಿ ಇದೆ. ಕೆಲವು ದಿನಗಳಿಂದ ವಿದ್ಯುತ್‌ ಕಣ್ಣಾಮುಚ್ಚಾಲೆ ಮುಂದುವರಿದಿದ್ದು, ಜನರು ಮನೆಯಲ್ಲಿ ಇರಲಾಗದೇ ವಿಲವಿಲ ಒದ್ದಾಡುವಂತಾಗುತ್ತಿದೆ ಎಂದು ಜಿಲ್ಲೆಯ ಜನ ಅಲವತ್ತುಕೊಳ್ಳುತ್ತಿದ್ದಾರೆ.

ದಿನದಿಂದ ದಿನಕ್ಕೆ ‌ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ಶುಕ್ರವಾರ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಒಂದು ವಾರದಿಂದ ಉಷ್ಣಾಂಶ 39 ಡಿಗ್ರಿ ಆಸುಪಾಸಿನಲ್ಲೇ ಇದ್ದ ಉಷ್ಣಾಂಶದಿಂದಾಗಿ ದಾವಣಗೆರೆಯು ‘ಬಿಸಿಲನಾಡು’ ಆಗಿ ಪರಿವರ್ತನೆಗೊಂಡಿದೆ. ಬಿಸಿಲು ಹೆಚ್ಚಾಗಿರುವುದರಿಂದ ಕಾರ್ಮಿಕರು, ತರಕಾರಿ, ಹಣ್ಣು ಮಾರಾಟಗಾರರು ಸೇರಿದಂತೆ ಉದ್ಯೋಗಿಗಳು ಪರದಾಡುವಂತಾಗಿದೆ.

ಬಿಸಿಲಿಗೆ ಬೆಳೆಗಳು ಒಣಗುತ್ತಿವೆ. ಬರ ಇರುವ ಕಾರಣ ತೋಟ, ಜಮೀನು ಉಳಿಸಿಕೊಳ್ಳಲು ರೈತರು ‌‌‌‌ಪರದಾಡುತ್ತಿದ್ದಾರೆ. ಇತ್ತ ಜನರು ಬಿಸಿಲಿಗೆ ಹೊರಬರಲಾರದೇ ತೊಂದರೆ ಎದುರಿಸುತ್ತಿದ್ದಾರೆ. ಬಿಸಿಲು ಧಗೆ, ನೀರಿನ ಸಮಸ್ಯೆ ಸಾಂಕ್ರಾಮಿಕ ಕಾಯಿಲೆಗಳಿಗೂ ಕಾರಣವಾಗಬಹುದು ಎಂಬ ಆತಂಕ ಎದುರಾಗಿದೆ.

2016ರ ಏಪ್ರಿಲ್‌ ತಿಂಗಳ 27ರಂದು 40.5 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದು ಜಿಲ್ಲೆಯ ಮಟ್ಟಿಗೆ ದಾಖಲಾದ ಈವರೆಗಿನ ಅತಿ ಹೆಚ್ಚಿನ ಉಷ್ಣಾಂಶ. ಇದನ್ನು ಹೊರತುಪಡಿಸಿದರೆ ಪ್ರತಿ ವರ್ಷ 39 ಡಿಗ್ರಿಯ ಗಡಿ ದಾಟಿರಲಿಲ್ಲ. ಆದರೆ ಈ ವರ್ಷ ಮಾರ್ಚ್‌ನಲ್ಲೇ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿರುವುದು ಜನರ ತಲ್ಲಣ ಹೆಚ್ಚಿಸಿದೆ.

‘ಹಿಂದೆ ಮಾರ್ಚ್‌ ತಿಂಗಳಲ್ಲಿ ಬಿಸಿಲು ಇಷ್ಟೊಂದು ಇರಲಿಲ್ಲ. ಆದರೆ ಈಗ ನೋಡಿದರೆ ಭಯವಾಗುತ್ತಿದೆ. ಎಲ್ಲವೂ ಪರಿಸರ ನಾಶದ ಪರಿಣಾಮ’ ಎಂದು ಕಳವಳ ವ್ಯಕ್ತಪಡಿಸಿದರು ಹಿರಿಯರಾದ ಸರಸ್ವತಿ ನಗರದ ಶಿವಣ್ಣ.

‘ಬಿಸಿಲು ಹೆಚ್ಚಾಗಿರುವುದರಿಂದ ತರಕಾರಿ ಸಂಗ್ರಹಿಸುವುದು ಸವಾಲಾಗಿದೆ. ಬಿಸಿಲು ಮುಂದುವರಿದರೆ ವ್ಯಾಪಾರದಲ್ಲಿ ನಷ್ಟ ಅನುಭವಿಸುವ ಆತಂಕ ಇದೆ’ ಎನ್ನುತ್ತಾರೆ ವ್ಯಾಪಾರಿ ಅಶೋಕ್ ಬೇತೂರು.

‘ಕೆರೆ– ಕಟ್ಟೆಗಳ ನೀರು ಆವಿಯಾಗಿ ವಾತಾವರಣದಲ್ಲಿ ತೇವಾಂಶ ಇರುತ್ತಿತ್ತು. ಆದರೆ, ಈಗ ನೀರಿಲ್ಲದೇ ಕೆರೆಗಳು ಬತ್ತಿದ್ದರಿಂದ ತೇವಾಂಶದ ಕೊರತೆ ಹೆಚ್ಚಿದೆ. ಹವಾಮಾನ ವೈಪರೀತ್ಯ ಮಳೆಯ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಒಣ ಹವೆ ಇದೆ. ಸಹಜವಾಗಿ ಬಿಸಿಲು ಏರಿಕೆಯಾಗಿದೆ’ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

‘ಪರಿಸರ ನಾಶ ಎಲ್ಲದಕ್ಕೂ ಕಾರಣ. ಈ ಬಗ್ಗೆ ನಾವು ಗಂಭೀರವಾಗಿ ಆಲೋಚಿಸುವ ಅಗತ್ಯ ಇದೆ’ ಎಂದು ತಜ್ಞರು ಎಚ್ಚರಿಸುತ್ತಾರೆ.

ದಾವಣಗೆರೆ ನಗರದಾದ್ಯಂತ ಬಿಸಿಲ ಬೇಗೆ ಹೆಚ್ಚುತ್ತಿದ್ದು ಬಿಸಿಲಿನಿಂದ ಪಾರಾಗಲು ಮಕ್ಕಳು ನಗರದ ಪಂಪ್‌ಹೌಸ್ ಬಳಿಯ ಭದ್ರಾ ನಾಲೆಯಲ್ಲಿ ಈಜಾಡುತ್ತಿದ್ದುದು ಗುರುವಾರ ಕಂಡುಬಂತು   

ದಾವಣಗೆರೆ ನಗರದಾದ್ಯಂತ ಬಿಸಿಲ ಬೇಗೆ ಹೆಚ್ಚುತ್ತಿದ್ದು ಬಿಸಿಲಿನಿಂದ ಪಾರಾಗಲು ಮಕ್ಕಳು ನಗರದ ಪಂಪ್‌ಹೌಸ್ ಬಳಿಯ ಭದ್ರಾ ನಾಲೆಯಲ್ಲಿ ಈಜಾಡುತ್ತಿದ್ದುದು ಗುರುವಾರ ಕಂಡುಬಂತು .

ತೇವಾಂಶದ ಕೊರತೆಯ ಕಾರಣ

‘ಮಳೆಯ ಕೊರತೆಯ ಕಾರಣ ಸಹಜವಾಗಿ ಬಿಸಿಲಿನ ಝಳ ಹೆಚ್ಚಾಗಿದೆ. ವಾತಾವರಣದಲ್ಲಿ ತೇವಾಂಶ ಇಲ್ಲದ ಕಾರಣ ಬಿಸಿಲು ಹೆಚ್ಚಳವಾಗುವುದು ಸಾಮಾನ್ಯ ವಿದ್ಯಮಾನ. ತೇವಾಂಶ ಇದ್ದರೆ ಉಷ್ಣಾಂಶವನ್ನು ತಗ್ಗಿಸುತ್ತದೆ. ಒಂದು ಮಳೆಯಾದರೆ ಉಷ್ಣಾಂಶ ಇಳಿಯಲಿದೆ. ಈ ಬಾರಿ ಮಳೆ ಉತ್ತಮವಾಗಿ ಬರುವ ಅಂದಾಜಿದೆ. ಬಿಸಿಲು ಇದ್ದರೆ ಕಡಿಮೆ ಒತ್ತಡದಿಂದ ಗಾಳಿಯನ್ನು ಸೆಳೆಯುತ್ತದೆ. ಆಗ ಮಳೆ ಉತ್ತಮವಾಗುತ್ತದೆ’ ಎಂದು ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಅಮಿತ್ ಮಾಹಿತಿ ನೀಡಿದರು. ಎಚ್ಚರಿಕೆ ವಹಿಸಿ ‘ಸದ್ಯ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯ ಪ್ರಕರಣಗಳು ವರದಿಯಾಗಿಲ್ಲ. ಬಿಸಿಲು ಹೆಚ್ಚಿರುವುದರಿಂದ ಜನರು ಹೆಚ್ಚು ನೀರು ಕುಡಿಯಬೇಕು. ವೃದ್ಧರು ಮಕ್ಕಳು ಗರ್ಭಿಣಿಯರು ರೋಗದಿಂದ ಬಳಲುತ್ತಿರುವವರು ಮಧ್ಯಾಹ್ನದ ಬಿಸಿಲಿಗೆ ಒಡ್ಡಿಕೊಳ್ಳಬಾರದು. ಸಂಜೆ ಬೆಳಿಗ್ಗಿನ ಹೊತ್ತು ಓಡಾಡಬಹುದು. ದ್ರವ ರೂಪದ ಆಹಾರವನ್ನೇ ಹೆಚ್ಚು ಸೇವಿಸಬೇಕು. ತಣ್ಣನೆಯ ವಾತಾವರಣದಲ್ಲಿ ಹೆಚ್ಚು ಇದ್ದರೆ ಒಳಿತು. ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆ ಕಂಡುಬಂದರೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಸಲಹೆ ಪಡೆದು ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್‌. ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.