ADVERTISEMENT

ಗ್ಯಾರಂಟಿ ಹೊರತುಪಡಿಸಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮೆರಿಟ್ ಏನು: ಮಂಜುಳಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 5:36 IST
Last Updated 12 ಏಪ್ರಿಲ್ 2024, 5:36 IST
ಮಂಜುಳಾ
ಮಂಜುಳಾ   

ದಾವಣಗೆರೆ: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸದಿದ್ದರೆ ಗ್ಯಾರಂಟಿ ಯೋಜನೆ ರದ್ದು ಮಾಡುವುದಾಗಿ ರಾಜ್ಯದ ಕಾಂಗ್ರೆಸ್‌ ನಾಯಕರು ಮಹಿಳೆಯರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಗ್ಯಾರಂಟಿ ಹೊರತುಪಡಿಸಿ ಕಾಂಗ್ರೆಸ್‌ ಅಭ್ಯರ್ಥಿಗಳ ಮೆರಿಟ್‌ ಏನು’ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ಪ್ರಶ್ನಿಸಿದರು.

‘ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ನಮ್ಮ ಮಹಿಳೆಯರು ಮೋದಿ ಪರ ಇದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆ ಮುಂದಿಟ್ಟುಕೊಂಡು ಮಹಿಳೆಯರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ. ಇದರಿಂದ ಮತ ಪಡೆಯಲು ಆಗದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬಗ್ಗೆ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅಡುಗೆ ಮಾಡಲು ಲಾಯಕ್ಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದು ಖಂಡನೀಯ. ಮೊದಲಿನಿಂದಲೂ ಕಾಂಗ್ರೆಸ್‌ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಆದರೆ ಬಿಜೆಪಿ ಅವಮಾನಕ್ಕೊಳಗಾದ ಮಹಿಳೆಯರಿಗೂ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡುವ ಮೂಲಕ ನಾರಿ ಶಕ್ತಿಯನ್ನು ಗೌರವಿಸಿದೆ‘ ಎಂದರು.

ADVERTISEMENT

‘100 ವರ್ಷದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಾಕತ್ತು ಇಲ್ಲ. ದೇಶ ನಡೆಸಲು ಶಕ್ತಿ ಇಲ್ಲ, ನಾಯಕರೂ ಇಲ್ಲ. ಇಂತಹ ಪಕ್ಷಕ್ಕೆ ಮಹಿಳೆಯರು ಮತ ಹಾಕಬೇಕಾ‘ ಎಂದು ಪ್ರಶ್ನಿಸಿದರು.

‘ಅಲ್ಪಸಂಖ್ಯಾತರ ಓಲೈಕೆ ಮೂಲಕ ಕಾಂಗ್ರೆಸ್‌ ರಾಜ್ಯದಲ್ಲಿ ಗಲಭೆ ಸೃಷ್ಟಿಸುತ್ತಿದೆ. ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರದಂತೆ ತಡೆಯಲಾಗುತ್ತಿದೆ’ ಎಂದು ದೂರಿದರು.

‘ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಕೃಷಿ ನ್ಯಾಯ್‌ ಘೋಷಿಸಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೇಂದ್ರದ ಕೃಷಿ ಸಮ್ಮಾನ್‌ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ಸಹಾಯಧನ ಸ್ಥಗಿತಗೊಳಿಸಿದೆ. ಇದು ಇವರ ಕೃಷಿ ನ್ಯಾಯ್‌’ ಎಂದು ವ್ಯಂಗ್ಯವಾಡಿದರು.

ಮಹಿಳಾ ನ್ಯಾಯ ಘೋಷಿಸಿರುವ ಕಾಂಗ್ರೆಸ್‌, ಸಂಧ್ಯಾ ಸುರ‌‌ಕ್ಷಾ ಯೋಜನೆಗೆ ಹಣ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ನೀಡುತ್ತಿಲ್ಲ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಹಲವು ಯೋಜನೆ ಮೂಲಕ ಮಹಿಳೆಯರಿಗೆ ನೆರವಾಗುತ್ತಿದೆ. ಸ್ವಚ್ಛ ಭಾರತ್‌ ಅಡಿ ಶೌಚಾಲಯ ಹಾಗೂ ಬೇಟಿ ಪಡಾವೋ ಕಾರ್ಯಕ್ರಮದ ಮೂಲಕ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿರುವುದರಿಂದ ಅಲ್ಪಸಂಖ್ಯಾತ ವರ್ಗ ಹಾಗೂ ಸಾಮಾನ್ಯ ವರ್ಗದ ಹೆಣ್ಣು ಮಕ್ಕಳು ಶಾಲೆಗೆ ಸೇರುತ್ತಿರುವುದು ಹೆಚ್ಚಳವಾಗಿದೆ. ಈ ಮೊದಲು ಶಾಲೆಯಿಂದ ಹೊರಗುಳಿಯುತ್ತಿದ್ದರು ಎಂದು ಹೇಳಿದರು.

ಮಹಿಳಾ ಘಟಕದ ಸುಧಾ ಜಯರುದ್ರೇಶ್‌, ಭಾಗ್ಯ ಪಿಸಾಳೆ, ಕುಮಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.