ADVERTISEMENT

ಅಚ್ಚೇದಿನ್ ಬರುವುದು ಯಾವಾಗ: ಶಾಸಕ ಬಿ. ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 15:49 IST
Last Updated 4 ಏಪ್ರಿಲ್ 2024, 15:49 IST
ಜಗಳೂರಿನಲ್ಲಿ ಗುರುವಾರ ಶಾಸಕ ಬಿ. ದೇವೇಂದ್ರಪ್ಪ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು
ಜಗಳೂರಿನಲ್ಲಿ ಗುರುವಾರ ಶಾಸಕ ಬಿ. ದೇವೇಂದ್ರಪ್ಪ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು   

ಜಗಳೂರು: ‘ಮತದಾರರಿಗೆ ಭರಪೂರ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10 ವರ್ಷ ಕಳೆದಿದೆ. ದೇಶಕ್ಕೆ ಅಚ್ಚೇದಿನ್ ಬರುವುದು ಯಾವಾಗ’ ಎಂದು ಶಾಸಕ ಬಿ. ದೇವೇಂದ್ರಪ್ಪ ಪ್ರಶ್ನಿಸಿದರು.

ಪಟ್ಟಣದಲ್ಲಿ ಗುರುವಾರ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅದಾನಿ, ಅಂಬಾನಿಪರ ಆಡಳಿತ ನಡೆಸುವ ಮೂಲಕ ಬಡವರು, ಕೂಲಿಕಾರ್ಮಿಕರು ಹಾಗೂ ಸಾಮಾನ್ಯ ಜನರನ್ನು ಬೀದಿಗೆ ತಳ್ಳುತ್ತಿದ್ದಾರೆ. ದೇಶದ ಜನರು ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಖಚಿತ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಪಡೆಯುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ನನ್ನ ಆಡಳಿತಾವಧಿಯಲ್ಲಿ ರಾಮರಾಜ್ಯದ ಕನಸಿನೊಂದಿಗೆ ವಿಧಾನ‌ಸಭಾ ಕ್ಷೇತ್ರವನ್ನು ಅಭಿವೃದ್ದಿಪಡಿಸುವೆ. ಈಗಾಗಲೇ ಕ್ಷೇತ್ರದಲ್ಲಿ ₹100 ಕೋಟಿ ಅನುದಾನ ಬಿಡುಗಡೆಯಾಗಿದೆ. 57 ಕೆರೆ ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಚುನಾವಣೆಯ ನಂತರ ಅಭಿವೃದ್ಧಿ ಯೋಜನೆಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿವೆ. ಕಾಂಗ್ರೆಸ್ ಪಕ್ಷದಿಂದ ಮೊದಲ ಭಾರಿಗೆ ಗೆದ್ದು ರಾಜಕೀಯ ಭವಿಷ್ಯ ರೂಪಿಸಿಕೊಂಡ ಸ್ಥಳೀಯ ಇಬ್ಬರು ಮಾಜಿ ಶಾಸಕರು ಸ್ವಾರ್ಥಕ್ಕಾಗಿ ಬಿಜೆಪಿಗೆ ಸೇರಿಕೊಂಡು ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಸಮರ್ಥ ಅಭ್ಯರ್ಥಿಯಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕ್ಷೇತ್ರದ ಸೊಕ್ಕೆಹೋಬಳಿ ವ್ಯಾಪ್ತಿಯಿಂದ ಏಪ್ರಿಲ್ 7‌ರಿಂದ‌ ಮೂರು ದಿನಗಳ ಕಾಲ ಮತಯಾಚಿಸಲಿದ್ದಾರೆ. ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎಂಬ ಬಿಜೆಪಿ ಪಕ್ಷದವರು ಹಬ್ಬಿಸಿರುವ ವದಂತಿಗಳು ಸತ್ಯಕ್ಕೆ ದೂರವಾಗಿದೆ. ಸುಳ್ಳುಗಳನ್ನೇ ಹೇಳುವ ಬಿಜೆಪಿಯವರ ಮಾತುಗಳನ್ನು ಯಾರೂ ನಂಬುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುವ ಮೂಲಕ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮನವಿ ಮಾಡಿದರು.

‘ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 6 ಜನ ಮಹಿಳೆಯರಿಗೆ ಟಿಕೆಟ್ ನೀಡಿದ್ದು, ಎಲ್ಲಾ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಮಾನ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಹೇಳಿದರು.

ವಿವಿ ಪಕ್ಷಗಳ 300ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಬಿದರಕೆರೆ ಮಲ್ಲಿಕಾರ್ಜುನ್ ಬಾಬು, ಬಿ.ಮಹೇಶ್ವರಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್, ಅರ್ಜುನಪ್ಪ, ಗೌಸ್‌ಪೀರ್, ಪ್ರಕಾಶ್ ರೆಡ್ಡಿ, ತಿಪ್ಪೇಸ್ವಾಮಿಗೌಡ, ಅಹಮದ್ ಅಲಿ, ಎಂ.ಎಸ್. ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.