ಜಗಳೂರು: ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಖಾಸಗಿ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪ್ರತಿನಿತ್ಯ ಮಾರಾಟವಾಗುತ್ತಿದ್ದು, ಬಹುತೇಕ ಸಣ್ಣ ಹಿಡುವಳಿದಾರರು ತಮ್ಮ ಅಲ್ಪಸ್ವಲ್ಪ ಭೂಮಿಯನ್ನು ಮಾರಾಟ ಮಾಡುವ ಮೂಲಕ ಕೃಷಿಯಿಂದ ವಿಮುಖರಾಗಿ ಅತಂತ್ರರಾಗುತ್ತಿದ್ದಾರೆ.
₹ 1,500 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಹಾಗೂ ₹ 650 ಕೋಟಿ ವೆಚ್ಚದ 57 ಕೆರೆ ತುಂಬಿಸುವ ಯೋಜನೆಗಳು ತಾಲ್ಲೂಕಿನ ಜನರ ದಶಕಗಳ ನೀರಾವರಿ ಕನಸು ನನಸಾಗುವ ಹೊಸ್ತಿಲಲ್ಲಿದೆ. ಆದರೆ, ಇಲ್ಲಿನ ಕೃಷಿ ಜಮೀನುಗಳು ಖಾಸಗಿ ಕಂಪನಿಗಳ ಪಾಲಾಗುತ್ತಿವೆ. ಸಾವಿರಾರು ಕೋಟಿ ವೆಚ್ಚದ ಮಹತ್ವದ ನೀರಾವರಿ ಯೋಜನೆಗಳು ಜಾರಿಯಾದರೂ ಪ್ರಯೋಜನವೇನು ಎಂಬ ಪ್ರಶ್ನೆ ಎದುರಾಗಿದೆ.
ಮೂರ್ನಾಲ್ಕು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಭೂಮಿ ಪರಭಾರೆ ಪ್ರಕ್ರಿಯೆ ಇಂದು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಪವನ ವಿದ್ಯುತ್ ಘಟಕ ಮತ್ತು ಸೌ ವಿದ್ಯುತ್ ಉತ್ಪಾದನಾ ಕಂಪನಿಗಳಾದ ರಿನ್ಯೂ, ಜೆ.ಎಸ್.ಡಬ್ಲ್ಯು, ಕ್ಲೀನ್ ಮ್ಯಾಕ್ಸ್ ಮುಂತಾದ ಖಾಸಗಿ ಕಂಪನಿಗಳು ಈಗಾಗಲೇ ತಾಲ್ಲೂಕಿನಲ್ಲಿ ಅಂದಾಜು 3,000 ಎಕೆರೆಗೂ ಹೆಚ್ಚು ಕೃಷಿ ಭೂಮಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಮತ್ತಷ್ಟು ಭೂಮಿಯನ್ನು ಖರೀದಿಸಲು ಸಜ್ಜಾಗಿವೆ.
ಗಾಳಿಯಿಂದಾಗಿ ಬೇಡಿಕೆ: ಜಗಳೂರು ತಾಲ್ಲೂಕು ರಾಜ್ಯದಲ್ಲೇ ಅತಿಹೆಚ್ಚು, ಅತಿವೇಗ ಹಾಗೂ ಒತ್ತಡ ಭರಿತ ಗಾಳಿ ಬೀಸುವ ಪ್ರದೇಶಗಳಲ್ಲೊಂದು. ಅಂತೆಯೇ ಪವನ ವಿದ್ಯುತ್ ಉತ್ಪಾದಿಸುವ ಮತ್ತು ಸೌರ ಶಕ್ತಿ ಉತ್ಪಾದನಾ ಕಂಪನಿಗಳು ಪೈಪೋಟಿಯಲ್ಲಿ ಇಲ್ಲಿ ಬಂದು ಬೀಡುಬಿಟ್ಟಿವೆ.
ಇಲ್ಲಿನ ಗಾಳಿಯ ಒತ್ತಡ ಮತ್ತು ವೇಗದ ಪ್ರಮಾಣ ಪ್ರತಿ ತಾಸಿಗೆ 7.5 ಕೆಪಿಎಚ್ ಪ್ರಮಾಣದಲ್ಲಿದೆ. ವಿದ್ಯುತ್ ಉತ್ಪಾದನೆಗೆ ಕನಿಷ್ಠ 6.5 ಕೆಪಿಎಚ್ ಪ್ರಮಾಣ ಬೇಕಾಗುತ್ತದೆ. ಇದರಿಂದ ಉತ್ಕೃಷ್ಟ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದ್ದರಿಂದ ಕಂಪನಿಗಳು ಇಲ್ಲಿಗೆ ಲಗ್ಗೆಯಿಟ್ಟು ರೈತರ ಜಮೀನುಗಳನ್ನು ಖರೀದಿಸಲು ಎಲ್ಲ ತಂತ್ರಗಳನ್ನು ಬಳಸುತ್ತಿವೆ.
ದೈತ್ಯ ಘಟಕಗಳ ಅಳವಡಿಕೆ: ಈ ಹಿಂದೆ ತಾಲ್ಲೂಕಿನಲ್ಲಿ 2.3 ಮೆಗಾ ವ್ಯಾಟ್ ಸಾಮರ್ಥ್ಯದ ಫ್ಯಾನ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಹೆಚ್ಚು ವಿದ್ಯುತ್ ಉತ್ಪಾದನೆಯ ಮೂಲಕ ಹೆಚ್ಚೆಚ್ಚು ಲಾಭ ಪಡೆಯುವ ದೃಷ್ಟಿಯಿಂದ ಎಲ್ಲ ಕಂಪನಿಗಳು 2.3 ಮೆಗಾವ್ಯಾಟ್ ಬದಲಾಗಿ 3.3 ಮೆಗಾವ್ಯಾಟ್ ಸಾಮರ್ಥ್ಯದ ದೈತ್ಯ ಘಟಕಗಳನ್ನು ಅಳವಡಿಸುತ್ತಿದ್ದು, ಇದಕ್ಕೆ ವಿಶಾಲವಾದ ರೆಕ್ಕೆಗಳಿದ್ದು, ಹೆಚ್ಚಿನ ಪ್ರಮಾಣದ ಸ್ಥಳಾವಕಾಶ ಬೇಕಾಗುತ್ತದೆ. ಪ್ರತಿ ಫ್ಯಾನ್ ಘಟಕ ನಿರ್ಮಾಣಕ್ಕೆ ಕನಿಷ್ಠ 6 ಎಕರೆ ಜಮೀನು ಬೇಕಾಗುತ್ತದೆ. ಒಂದೆರಡು ಎಕರೆಯನ್ನು ಖರೀದಿಸಿ ಉಳಿದ ನಾಲ್ಕು ಎಕೆರೆಯನ್ನು 30 ವರ್ಷಗಳವರೆಗೆ ಗುತ್ತಿಗೆ ಪಡೆಯುತ್ತಿವೆ.
ನಿತ್ಯ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಂಪನಿಗಳ ನೌಕರರು ಮತ್ತು ದಲ್ಲಾಳಿಗಳ ದಂಡೇ ನೆರೆದಿರುತ್ತದೆ. ಪವನ ವಿದ್ಯುತ್ ಕಂಪನಿಗಳಿಗೆ ಜಮೀನು ಪರಭಾರೆ ಮಾಡುವ ರೈತರನ್ನು ಹೊರತುಪಡಿಸಿದಂತೆ ಇಲ್ಲಿಗೆ ಬರುವ ಸಾಮಾನ್ಯ ಜನರು ತಮ್ಮ ನೋಂದಣಿಗಾಗಿ ವಾರಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.
‘ಪವನ ವಿದ್ಯುತ್ ಉತ್ಪಾದನಾ ಕಂಪನಿಗಳು ಎರಡು ವರ್ಷಗಳ ಹಿಂದೆ ಕೇವಲ ಮೂರ್ನಾಲ್ಕು ಲಕ್ಷ ರೂಪಾಯಿಗೆ ಒಂದು ಎಕರೆ ಜಮೀನು ಖರೀದಿಸುತ್ತಿದ್ದವು. ಈಗ ಏಳು, ಎಂಟು ಲಕ್ಷ ಕೊಡುತ್ತಿವೆ. ಬಡ ರೈತರ ಆರ್ಥಿಕ ಸಂಕಷ್ಟ ಮತ್ತು ಅಸಹಾಯಕತೆಯ ಲಾಭ ಪಡೆದು ಕವಡೆ ಕಾಸಿಗೆ ಖರೀದಿಸಿ ಘಟಕ ಸ್ಥಾಪಿಸಿ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಿವೆ. ಸ್ಥಳೀಯರಿಗೆ ಉದ್ಯೋಗವನ್ನೂ ಕೊಡುತ್ತಿಲ್ಲ. ವಿದ್ಯುತ್ತನ್ನೂ ದುಪ್ಪಟ್ಟು ದರಕ್ಕೆ ಮಾರಿಕೊಂಡು ಲಾಭ ಮಾಡುತ್ತಿರುವ ಕಂಪನಿಗಳಿಂದ ತಾಲ್ಲೂಕಿನ ಜನರಿಗೆ ಯಾವುದೇ ಲಾಭವಿಲ್ಲ’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಆರೋಪಿಸುತ್ತಾರೆ.
‘22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಇಲ್ಲದೆ ನಿಯಮ ಬಾಹಿರವಾಗಿ ಫ್ಯಾನ್ ಅಳವಡಿಸಲಾಗುತ್ತಿದೆ. ಪಂಚಾಯಿತಿಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಸೋರಿಕೆಯಾಗುತ್ತಿದೆ. ಬೃಹತ್ ವಾಹನಗಳ ಓಡಾಟದಿಂದ ರಸ್ತೆಗಳು ಕಿತ್ತು ಹಾಳಾಗುತ್ತಿವೆ. ಆದರೂ ಯಾವುದೇ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲೆಡೆ ಅಣಬೆಗಳಂಣತೆ ಫ್ಯಾನ್‌ಗಳು ತಲೆ ಎತ್ತಿದ್ದು, ಇದಕ್ಕೆ ಕಡಿವಾಣ ಇಲ್ಲವೇ?’ ಎಂಬುದು ಅವರ ಪ್ರಶ್ನೆ.
‘ದೈತ್ಯ ಫ್ಯಾನ್‌ಗಳ ಬಿರುಸಾದ ತಿರುಗುವಿಕೆಯಿಂದ ಕೆಳಮಟ್ಟದಲ್ಲಿರುವ ಮೋಡಗಳು ಚದುರಿ ಹೋಗುತ್ತವೆ. ಫ್ಯಾನ್‌ಗಳ ಭೀಕರ ಶಬ್ಧಕ್ಕೆ ಕಾಡು ಪ್ರಾಣಿಗಳು ಬೆದರಿ ಪಲಾಯನ ಮಾಡುತ್ತವೆ. ರಾತ್ರಿ ಸಮಯದಲ್ಲಿ ಹಳ್ಳಿಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಿಲ್ಲದೆ ಗ್ರಾಮಸ್ಥರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ವಿಂಡ್ ಮಿಲ್ ಘಟಕಗಳ ಸ್ಥಾಪನೆಗೆ ಅವಕಾಶ ನೀಡಬಾರದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿರಂಜೀವಿ ಒತ್ತಾಯಿಸಿದ್ದಾರೆ.
ಶೀಘ್ರವೇ ಪವನ ವಿದ್ಯುತ್ ಉತ್ಪಾದನಾ ಘಟಕ ಅಳವಡಿಕೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸುತ್ತೇನೆ. ತಾಲ್ಲೂಕಿನಲ್ಲಿ ಇದುವರೆಗೆ ಅಳವಡಿಸಿರುವ ಘಟಕಗಳು ಮತ್ತು ಕಂಪನಿಗಳ ಸಂಪೂರ್ಣ ವಿವರವನ್ನು ಸಂಗ್ರಹಿಸುತ್ತೇನೆ.–ಕಲೀಂ ಉಲ್ಲಾ, ತಹಶೀಲ್ದಾರ್ ಜಗಳೂರು
ರೈತರು ಎಚ್ಚೆತ್ತುಕೊಳ್ಳಬೇಕು. ಅಮೂಲ್ಯ ಭೂಮಿ ಕಳೆದುಕೊಂಡಲ್ಲಿ ಮತ್ತೆ ಸಿಗುವುದಿಲ್ಲ. ಖಾಸಗಿ ಕಂಪನಿಗಳ ಆಸೆ ಆಮಿಷಗಳಿಗೆ ರೈತರು ಬಲಿಯಾಗುವುದು ಬೇಡ. ತಾಲ್ಲೂಕಿನಲ್ಲಿ ವಿಂಡ್ ಫ್ಯಾನ್ ಹಾವಳಿಗೆ ಕಡಿವಾಣ ಹಾಕಲಾಗುವುದು.–ಬಿ.ದೇವೇಂದ್ರಪ್ಪ, ಶಾಸಕ
ಮಾಹಿತಿ ಪಡೆದು ಕ್ರಮ
‘ಪವನ ವಿದ್ಯುತ್ ಉತ್ಪಾದನಾ ಕಂಪನಿಗಳು ಘಟಕ ಸ್ಥಾಪಿಸಲು ಎಲ್ಲಿಂದ ಪರವಾನಗಿ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ಪರವಾನಗಿ ನೀಡಿರಬಹುದು. ಯಾವ ಕಂಪನಿಗಳಿವೆ? ಎಷ್ಟು ಫ್ಯಾನ್ ಅಳವಡಿಸಲಾಗುತ್ತದೆ? ಭೂ ಪರಿವರ್ತನೆ ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ದಾವಣಗೆರೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.