ADVERTISEMENT

ದಾವಣಗೆರೆ: ಜಿಲೇಬಿ ತಯಾರಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಅಶೋಕ ಟಾಕೀಸ್ ಬಳಿಯ ರೈಲ್ವೆ ಕೆಳಸೇತುವೆ ಅವೈಜ್ಞಾನಿಕ ಕಾಮಗಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 16:21 IST
Last Updated 7 ಏಪ್ರಿಲ್ 2024, 16:21 IST
ಅಶೋಕ ಟಾಕೀಸ್ ರೈಲ್ವೆ ಕೆಳಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ವತಿಯಿಂದ ದಾವಣಗೆರೆಯ ರೈಲ್ವೆ ಗೇಟ್‌ಬಳಿ ಜಿಲೇಬಿ ತಯಾರಿಸಿ ಪ್ರತಿಭಟನೆ ನಡೆಸಿದರು.
ಅಶೋಕ ಟಾಕೀಸ್ ರೈಲ್ವೆ ಕೆಳಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ವತಿಯಿಂದ ದಾವಣಗೆರೆಯ ರೈಲ್ವೆ ಗೇಟ್‌ಬಳಿ ಜಿಲೇಬಿ ತಯಾರಿಸಿ ಪ್ರತಿಭಟನೆ ನಡೆಸಿದರು.    

ದಾವಣಗೆರೆ: ಅಶೋಕ ಟಾಕೀಸ್ ರೈಲ್ವೆ ಕೆಳಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ವತಿಯಿಂದ ಭಾನುವಾರ ಇಲ್ಲಿನ ರೈಲ್ವೆ ಗೇಟ್‌ಬಳಿ ಜಿಲೇಬಿ ತಯಾರಿಸಿ ಪ್ರತಿಭಟನೆ ನಡೆಸಿದರು.

ವಾಹನ ಸವಾರರಿಗೆ ಜಿಲೇಬಿಗಳನ್ನು ವಿತರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

‘ರೈಲ್ವೆ ಕೆಳಸೇತುವೆಯಲ್ಲಿ ಸಂಚರಿಸಲು ಹರಸಾಹಸಪಡಬೇಕಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಜಿಲೇಬಿಯಂತೆ ಸುತ್ತು ಹಾಕಿ ಸಂಚರಿಸಬೇಕಿದೆ. ದಾವಣಗೆರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿರುವ ಕೆಲಸ ಬೆರಳಣಿಕೆಯಷ್ಟು ಮಾತ್ರ. ಅವುಗಳೂ ಅವೈಜ್ಞಾನಿಕವಾಗಿವೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪ್ರತಿಮೆಯನ್ನು ದಾವಣಗೆರೆಯ ಅಶೋಕ ಟಾಕೀಸ್ ರೈಲ್ವೆ ಗೇಟ್ ಬಳಿ ಸ್ಥಾಪಿಸಬೇಕು’ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ವ್ಯಂಗ್ಯವಾಡಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ‘ಇಂತಹ ಕಾಮಗಾರಿಗಳಿಂದ ದಾವಣಗೆರೆಗೆ ಕಳಂಕವಾಗಿವೆ’ ಎಂದು ದೂರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್ ಮಾತನಾಡಿ ‘ಸಂಸದರು ನಾಲ್ಕು ಬಾರಿ ಆಯ್ಕೆಯಾದರೂ ಜಿಲ್ಲೆಯಲ್ಲಿ ಒಂದೇ ಒಂದು ಶಾಶ್ವತ ಕೆಲಸಗಳನ್ನು ಮಾಡಲಿಲ್ಲ. ಅವರ ಪತ್ನಿಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದಕ್ಕೆ ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಮಹಿಳಾ ಕಾಂಗ್ರೆಸ್‍ನ ಕವಿತಾ ಚಂದ್ರಶೇಖರ್, ಉಮಾ ಕುಮಾರ್, ದ್ರಾಕ್ಷಾಯಣಮ್ಮ, ಮಂಗಳಮ್ಮ, ಮಂಜಮ್ಮ, ಶುಭಮಂಗಳ, ರಾಜೇಶ್ವರಿ, ಕಾವ್ಯಾ, ಜಯಮ್ಮ, ಕಮಲಮ್ಮ, ಸಲ್ಮಾ, ಶಿಲ್ಪ, ಕಾವೇರಿ, ರಂಗಸ್ವಾಮಿ, ಮೊಟ್ಟೆ ದಾದಾಪೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.