ADVERTISEMENT

ದಾವಣಗೆರೆ | ಮಹಿಳಾ ದಿನಾಚರಣೆ: ‘ರೇಷ್ಮೆ’ಯಿಂದ ಬದುಕು ಕಟ್ಟಿಕೊಂಡ ಮಂಗಳಮ್ಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 0:29 IST
Last Updated 8 ಮಾರ್ಚ್ 2024, 0:29 IST
ಜಗಳೂರು ತಾಲ್ಲೂಕಿನ ಮುಷ್ಟೂರು ಗ್ರಾಮದ ಕೆ.ಎಂ.ಮಂಗಳಮ್ಮ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ನಡೆಯುತಿರುವ ಮೇಳದಲ್ಲಿ ರೇಷ್ಮೆಯಿಂದ ತಯಾರಿಸಿದ ವಸ್ತುಗಳ ಮಾರಾಟದಲ್ಲಿ ತೊಡಗಿರುವುದು
ಜಗಳೂರು ತಾಲ್ಲೂಕಿನ ಮುಷ್ಟೂರು ಗ್ರಾಮದ ಕೆ.ಎಂ.ಮಂಗಳಮ್ಮ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ನಡೆಯುತಿರುವ ಮೇಳದಲ್ಲಿ ರೇಷ್ಮೆಯಿಂದ ತಯಾರಿಸಿದ ವಸ್ತುಗಳ ಮಾರಾಟದಲ್ಲಿ ತೊಡಗಿರುವುದು   

ದಾವಣಗೆರೆ: ‘ನನಗೀಗ 60 ವರ್ಷ, ಇಬ್ಬರೂ ಮಕ್ಕಳು ಉದ್ಯೋಗದಲ್ಲಿರುವುದರಿಂದ ಹಣಕಾಸಿನ ಸಮಸ್ಯೆಯೂ ಇಲ್ಲ. ಬದುಕು ಸಾಗಿಸಲು ಯಜಮಾನರ ಪಿಂಚಣಿಯೂ ಬರುತ್ತಿದೆ. ಮನೆಯಲ್ಲೇ ಆರಾಮವಾಗಿ ಕಾಲ ಕಳೆಯಬಹುದು.‌ ಆದರೆ, ಕೆಲಸವಿಲ್ಲದೇ  ಮನೆಯಲ್ಲಿರಲು ಮನಸ್ಸು ಒಪ್ಪಲ್ಲ.‌ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿದರೆ ಮಾತ್ರ ನೆಮ್ಮದಿ. ಹೀಗಾಗಿಯೇ ಈ ವಯಸ್ಸಿನಲ್ಲೂ ಬೆಂಗಳೂರು, ಬಳ್ಳಾರಿ ಎನ್ನದೇ ಹಲವೆಡೆ ಸುತ್ತಾಡಿ ರೇಷ್ಮೆಗೂಡು ಬಳಸಿ ನಾವೇ ತಯಾರಿಸಿದ‌ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತೇ‌ನೆ..’

ಜಗಳೂರು ತಾಲ್ಲೂಕಿನ ಮುಷ್ಟೂರು ಗ್ರಾಮದ ಕೆ.ಎಂ.ಮಂಗಳಮ್ಮ ಅವರು ತಮ್ಮಿಷ್ಟದ ಕಾಯಕದ ಬಗ್ಗೆ ಉತ್ಸಾಹದಿಂದ ಹೇಳಿಕೊಂಡಿದ್ದು ಹೀಗೆ.

‘ರೇಷ್ಮೆ ಬಳಸಿ ತಾವೇ ತಯಾರಿಸಿದ ಹಾರ, ಬೊಕ್ಕೆ, ಬಾಗಿಲು ತೋರಣ, ಗೊಂಬೆಗಳನ್ನು ಹೆಚ್ಚಿನ ಜನ ಸೇರುವಂತಹ ಸಮಾವೇಶ, ಕಾರ್ಯಕ್ರಮಗಳಲ್ಲಿ ಮಾರಾಟ ಮಾಡುತ್ತೇನೆ. ಇದರಿಂದ ನನ್ನೊಬ್ಬಳಿಗೆ ಮಾತ್ರವಲ್ಲ, ನನ್ನೂರಿನ ಹತ್ತಾರು ಮಹಿಳೆಯರಿಗೆ ಆರ್ಥಿಕ ಬಲ ದೊರೆಯುತ್ತದೆ. ಈ ಸದುದ್ದೇಶದ ಕಾರಣಕ್ಕಾಗಿಯೇ ಕಾಯಕ ನಿಲ್ಲಿಸಿಲ್ಲ’ ಎನ್ನುತ್ತಾರೆ ಅವರು.

ADVERTISEMENT

‘ಎಸ್ಸೆಸ್ಸೆಲ್ಸಿ ನಂತರ 1980 - 81ರಲ್ಲಿ ಟಿಸಿಎಚ್‌ ಮುಗಿಸಿದೆ. ಮರುವರ್ಷವೇ ಮನೆಯಲ್ಲಿ ಮದುವೆ ಮಾಡಿದರು. ಅಷ್ಟೊತ್ತಿಗಾಗಲೇ ಟೇಲರಿಂಗ್ ಕಲಿತಿದ್ದೆ. ಬಳಿಕ ಗೊಂಬೆ ತಯಾರಿಸುವುದನ್ನೂ ಕಲಿತೆ. ‘ಜನಶಿಕ್ಷಣ ಸಂಸ್ಥೆ’ ಎಂಬ ಎನ್‌ಜಿಒ ಸೇರಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದೆ. ಟೇಲರಿಂಗ್, ಗೊಂಬೆ, ಎಂಬ್ರಾಯಿಡರಿ, ಜ್ಯುವೆಲರಿ ವರ್ಕ್ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಿದೆ’ ಎಂದು ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು ಮಂಗಳಮ್ಮ.

‘2014ರಲ್ಲಿ ರೇಷ್ಮೆಗೂಡಿನಿಂದ ಹಾರ, ಬೊಕ್ಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ತಯಾರಿಸುವುದನ್ನು ಕಲಿತೆ‌. ಆ ಕಲೆಯನ್ನು ಇತರರಿಗೂ ಕಲಿಸಿದ್ದರಿಂದ, ಇಂದು ಹತ್ತಾರು ಸದಸ್ಯೆಯರಿರುವ ಸ್ವಸಹಾಯ ಸಂಘ ಸ್ಥಾಪಿಸಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ಮಂಗಳಮ್ಮ.

‘ರೇಷ್ಮೆ‌ಗೂಡು ಖರೀದಿಗೆ ರೇಷ್ಮೆ ಇಲಾಖೆ ಶೇ 90 ರಷ್ಟು ಸಬ್ಸಿಡಿ ನೀಡುತ್ತಿದೆ. ರೇಷ್ಮೆಗೂಡಿನಿಂದ ತಯಾರಿಸಿದ ವಸ್ತುಗಳನ್ನು ಮಾರಲು ‘ಸಂಜೀವಿನಿ’ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ ಸಾಕಷ್ಟು ಪ್ರೋತ್ಸಾಹ, ನೆರವು ನೀಡುತ್ತಿದೆ.‌ ಉಚಿತವಾಗಿ ಮಳಿಗೆ ನೀಡಿ, ಪ್ರಯಾಣ ವೆಚ್ಚ, ಊಟ, ವಸತಿಯನ್ನೂ ಕಲ್ಪಿಸುತ್ತಿದೆ’ ಎಂದು ಅವರು ಸಂತಸ ಹಂಚಿಕೊಂಡರು.

‘ಗ್ರಾಮದಲ್ಲಿ ರೇಷ್ಮೆಗೂಡಿನಿಂದ ವಸ್ತುಗಳನ್ನು ತಯಾರಿಸುವ ಮಹಿಳೆಯರೆಲ್ಲ ಸೇರಿ ‘ಶಾಶ್ವತ’ ಎಂಬ ಸಂಘ ರಚಿಸಿಕೊಂಡಿದ್ದೇವೆ. ಸಂಘದಿಂದ ವಿವಿಧೆಡೆ ತೆರಳಿ ವಸ್ತುಗಳ ಮಾರಾಟ ಮಾಡುತ್ತೇವೆ. ಬಡ ಯುವತಿಯರು, ಮಹಿಳೆಯರಿಗೆ ಉಚಿತವಾಗಿ ಟೇಲರಿಂಗ್ ಹಾಗೂ ರೇಷ್ಮೆ ವಸ್ತುಗಳ ತಯಾರಿಸುವ ಬಗ್ಗೆ ತರಬೇತಿ ನೀಡಿದ್ದೇನೆ‌. ಗಾರ್ಮೆಂಟ್ಸ್ ಸ್ಥಾಪಿಸಿ, ಮಹಿಳೆಯರಿಗೆ ಉದ್ಯೋಗ ನೀಡುತ್ತೇನೆ’ ಎಂದು ತಮ್ಮ ಕನಸು ಬಿಚ್ಚಿಟ್ಟರು ಮಂಗಳಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.