ಬಸವಾಪಟ್ಟಣ: ಮನುಷ್ಯರೊಂದಿಗೆ ಸಹಸ್ರಾರು ವರ್ಷಗಳಿಂದ ಅವಿನಾಭಾವ ಸಂಬಂಧ ಹೊಂದಿದ್ದ ಗುಬ್ಬಿಗಳು ಇಂದು ಕಣ್ಮರೆಯಾಗುತ್ತಿವೆ. ಅವುಗಳನ್ನು ರಕ್ಷಿಸಿದರೆ ಪ್ರಕೃತಿ ಸಂರಕ್ಷಣೆ ಸಾಧ್ಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.
50 ವರ್ಷಗಳ ಹಿಂದೆ ಗುಬ್ಬಿಗಳು ಹೊಲ ಗದ್ದೆ, ತೋಟ, ಕಣಗಳು, ಮನೆ, ಮಠ, ದೇವಾಲಯ ಮತ್ತು ಶಾಲಾ ಪರಿಸರದಲ್ಲಿ ಕಂಡುಬರುತ್ತಿದ್ದವು. ಆದರೆ ಈಗ ಅವುಗಳ ಸಂತತಿ ಕಡಿಮೆಯಾಗಿದೆ. ಇದಕ್ಕೆ ಆಧುನಿಕ ಜೀವನ ಶೈಲಿಯೇ ಕಾರಣ.
ಮನೆಗಳಲ್ಲಿ ಮಹಿಳೆಯರು ದವಸ ಧಾನ್ಯಗಳನ್ನು ಸ್ವಚ್ಛಗೊಳಿಸಿ ಉಳಿದವುಗಳನ್ನು ಮನೆಯ ಅಂಗಳದಲ್ಲಿ ಚೆಲ್ಲುತ್ತಿದ್ದರು. ಈಗ ಎಲ್ಲಾ ಪದಾರ್ಥಗಳು ಸ್ವಚ್ಛಗೊಳಿಸಿದ ಪಾಕೆಟ್‌ಗಳಲ್ಲಿ ಸಿಗುವುದರಿಂದ ಗುಬ್ಬಿಗಳಿಗೆ ಆಹಾರವಿಲ್ಲದಂತಾಗಿದೆ. ಇನ್ನು ರೈತರು ಒಕ್ಕಲು ಮಾಡುತ್ತಿದ್ದ ಕಣಗಳು ಈಗ ಇಲ್ಲದಂತಾಗಿದೆ. ಒಂದು ಧಾನ್ಯವೂ ನೆಲಕ್ಕೆ ಬೀಳದಂತೆ ಟಾರ್ಪಾಲಿನ್ ಮೇಲೆ ಹೊಲಗಳಲ್ಲಿಯೇ ಒಕ್ಕಲು ಮಾಡಿ ಅಲ್ಲಿಯೇ ಮಾರಾಟ ಮಾಡುವುದರಿಂದ ಗುಬ್ಬಿಗಳಿಗೆ ಆಹಾರ ಇಲ್ಲವಾಗಿದೆ.
ಮೊಟ್ಟೆ ಒಡೆದು ಹೊರಬರುವ ಮರಿಗಳಿಗೆ ತಾಯಿ ಗುಬ್ಬಿಗಳು ಕಂಬಳಿ ಹುಳುಗಳಂತಹ ಜೀವಿಗಳನ್ನು ಆಹಾರವಾಗಿ ತಂದು ಕೊಡುತ್ತಿದ್ದವು. ಈಗ ಕೀಟನಾಶಕ ಸಿಂಪಡಣೆಯಿಂದ ಕಂಬಳಿ ಹುಳುಗಳ ಸಂತತಿ ನಾಶವಾಗಿದೆ. ಹೀಗಾಗಿ ಗುಬ್ಬಿಮರಿಗಳು ಬದುಕುತ್ತಿಲ್ಲ. ಆಧುನಿಕ ಮನೆಗಳ ನಿರ್ಮಾಣದಿಂದ ಗುಬ್ಬಿಗಳು ಗೂಡು ಕಟ್ಟಿಕೊಳ್ಳಲು ಅವಕಾಶವಿಲ್ಲ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಅಲ್ಲದೇ ಜನರು ಮೊಬೈಲ್ ಫೋನ್ ಮತ್ತು ಟಿ.ವಿ. ವೀಕ್ಷಣೆಗೆ ಗುಬ್ಬಿಗಳ ಚಿಲಿಪಿಲಿಯಿಂದ ಕಿರಿಕಿರಿಯಾಗುತ್ತಿದೆ ಎಂದು ದೂರ ಓಡಿಸತೊಡಗಿದ್ದರಿಂದ ಗುಬ್ಬಿಗಳು ಮನುಷ್ಯರಿಂದ ದೂರವಾದವು ಎನ್ನುತ್ತಾರೆ ಇಲ್ಲಿನ ಪರಿಸರ ಪ್ರೇಮಿ ಡಾ.ಬಸವನಗೌಡ ಕುಸಗೂರ್.
ಹಿಂದೆ ಮಕ್ಕಳು ಗುಬ್ಬಿಗಳನ್ನು ನೋಡಿ ಸಂತೋಷಪಡುತ್ತಿದ್ದರು. ಅಮ್ಮ ಹೇಳುವ ಗುಬ್ಬಿಗಳ ಕಥೆ ಮಕ್ಕಳ ಮನಸೂರೆಗೊಳ್ಳುತ್ತಿತ್ತು. ಆದರೆ ಈಗ ಗುಬ್ಬಿಗಳನ್ನು ನೋಡಬೇಕೆಂದರೂ ಸಿಗುತ್ತಿಲ್ಲ. ಇದರಿಂದ ಸೊಳ್ಳೆಗಳು ಸೇರಿ ಇತರ ಕೀಟಗಳ ಹಾವಳಿ ಹೆಚ್ಚಾಗಿದೆ. ಹೊಲಗಳಲ್ಲಿನ ಬೆಳೆಗಳನ್ನು ತಿನ್ನುವ ಕೀಟಗಳು ಗುಬ್ಬಿಗಳಿಗೆ ಆಹಾರವಾಗಿದ್ದವು. ಆದರೆ ಕ್ರಿಮಿನಾಶಕ ಸಿಂಪಡಣೆಯಿಂದ ಗುಬ್ಬಿಗಳು ಅತ್ತ ಸುಳಿಯದಂತಾಯಿತು. ಪುಟ್ಟ ಪಕ್ಷಿ ಕಣ್ಮರೆಯಾಗುತ್ತಿರುವುದರಿಂದ ಪ್ರಾಕೃತಿಕ ಅಸಮತೋಲನವುಂಟಾಗುತ್ತಿದೆ. ಆದರೆದವಸ ಧಾನ್ಯಗಳನ್ನು ಹಾಕುವವರ ಮನೆಗಳ ಮುಂದೆ, ದಿನಸಿ ಅಂಗಡಿಗಳ ಮುಂದೆ ಗುಬ್ಬಿಗಳು ಕಾಣುತ್ತಿರುವುದು ಸಮಾಧಾನದ ವಿಷಯ ಎಂದರು ಬಸವ ಸಮಿತಿ ಅಧ್ಯಕ್ಷ ಡಾ.ಬಿ.ಎನ್. ರಂಗಪ್ಪ.
‘ಗುಬ್ಬಿಗಳು ಸೇರಿ ಇತರ ಪಕ್ಷಿಗಳು ಬದುಕಲು ನಾವು ಅವಕಾಶ ನೀಡಬೇಕು. ಭಾರತದಲ್ಲಿ ಈಗ ಶೇ 50 ರಷ್ಟು ಗುಬ್ಬಿಗಳು ಕಡಿಮೆಯಾಗಿವೆ. ಇಂಗ್ಲೆಂಡಿನಲ್ಲಿ ಶೇ 85ರಷ್ಟು ಕಡಿಮೆಯಾಗಿವೆ. ಗುಬ್ಬಿಗಳ ರಕ್ಷಣೆಗಾಗಿ ಮಾರ್ಚ್ 20ರಂದು ಮಾತ್ರ ಕೂಗು ಹಾಕದೇ ಮನೆಗಳ ಮುಂದೆ ಗಿಡಗಳನ್ನು ಬೆಳೆಸಿ, ಅವುಗಳು ಗೂಡು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಕುಡಿಯಲು ಚಿಕ್ಕ ಮಣ್ಣಿನ ಪಾತ್ರೆಗಳಲ್ಲಿ ಪ್ರತಿದಿನ ಶುದ್ಧವಾದ ನೀರನ್ನು ಇಡಿ. ಇದರಿಂದ ಸಹಜವಾಗಿ ಗುಬ್ಬಿಗಳ ಸಂಖ್ಯೆ ಹೆಚ್ಚಾಗುತ್ತದೆ. ನಮ್ಮ ಮಠದ ಪರಿಸರದಲ್ಲಿ ಇದಕ್ಕಾಗಿ ಸಾಕಷ್ಟು ಮರಗಿಡಗಳನ್ನು ಬೆಳೆಸಿ ಗುಬ್ಬಿಗಳು ಸೇರಿ ಎಲ್ಲಾ ಪಕ್ಷಿಗಳಿಗೆ ಆಶ್ರಯ ಒದಗಿಸಿದ್ದೇವೆ’ ಎನ್ನುತ್ತಾರೆ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಸ್ವಾಮೀಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.