ದಾವಣಗೆರೆ: ‘ಸುಸ್ಥಿರ ನಾಗರಿಕತೆಗೆ ಆರೋಗ್ಯ ಹಾಗೂ ಶಕ್ತಿಯ ಭದ್ರತೆ, ಆಹಾರ ಭದ್ರತೆ ಎಂಬ ಮೂರು ಮಂತ್ರಗಳಿವೆ. ಈ ಮೂರರಲ್ಲೂ ನೀರು ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಎಸ್. ಮಂಜಪ್ಪ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ಬಾಲಭವನ ಸಮಿತಿ, ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘1993ರಿಂದ ವಿಶ್ವ ಜಲ ದಿನ ಆಚರಿಸಲಾಗುತ್ತಿದೆ. ಈ ವರ್ಷ ‘ಶಾಂತಿಗಾಗಿ ನೀರಿನ ಸದ್ಭಳಕೆ’ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಜಲದಿನವ ಆಚರಿಸಲಾಗುತ್ತಿದೆ. ನಾವಿಂದು ಪ್ರಯೋಗ ಶಾಲೆಯಲ್ಲಿಯೂ ನೀರನ್ನು ತಯಾರಿಸಬಹುದು. ಆದರೆ ಅದು ನಮ್ಮ ಬಳಕೆಯ ಪ್ರಮಾಣದಷ್ಟಲ್ಲ. ಇರುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಕಲ ಜೀವಚರಗಳಿಗೆಲ್ಲ ನೀರೇ ಮೂಲಾಧಾರ. ನೀರಿನ ಸದ್ಭಳಕೆ ಮತ್ತು ಜಾಗೃತಿಗಾಗಿ ವಿಶ್ವ ಜಲದಿನ ಆಚರಿಸುತ್ತಿರುವುದು ಸಂತೋಷದಾಯಕ’ ಎಂದು ತಿಳಿಸಿದರು.
‘ನೀರು ನಮಗಷ್ಟೇ ಸೀಮಿತವಲ್ಲ. ಇದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನೀರು ಅಪರಿಮಿತ ಸಂಪನ್ಮೂಲ ಎಂದು ಬೋಧಿಸುತ್ತೇವೆ. ಆದರೆ ಬಳಸಲು ಯೋಗ್ಯವಾದ ನೀರು ಮಾತ್ರ ಪರಿಮಿತ ಸಂಪನ್ಮೂಲವಾಗಿದೆ. ಭೂಮಿಯ ಮೇಲೆ ಶೇ 70ಕ್ಕಿಂತ ಹೆಚ್ಚು ಭಾಗ ನೀರು ಆವರಿಸಿದ್ದರೂ ಕುಡಿಯಲು ಮತ್ತು ಬಳಕೆಗೆ ಯೋಗ್ಯವಾದ ನೀರು 0.0003ರಷ್ಟು ಮಾತ್ರ. ಹೀಗಾಗಿ ನದಿ, ಕೆರೆ, ಅಂತರ್ಜಲ ಹಾಗೂ ವಾಯುಮಂಡಲ ಸಂರಕ್ಷಣೆಯತ್ತ ಗಮನ ಹರಿಸಬೇಕು’ ಎಂದು ಉಪನ್ಯಾಸ ನೀಡಿದ ಕೆ. ಸಿದ್ದೇಶ್ ಸಲಹೆ ನೀಡಿದರು.
‘ನೀರಿನ ಕೊರತೆ ಉಂಟಾದಾಗ ನಾವು ನೀರಿನ ಲಭ್ಯತೆಯ ಹೊಸ ಆಕರದ ಬಗ್ಗೆ ಚಿಂತಿಸುತ್ತೇವೆಯೇ ಹೊರತು ನೀರನ್ನು ಸಂರಕ್ಷಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಇದರಿಂದ ಮತ್ತಷ್ಟು ನೀರಿನ ಅಭಾವ ಎದುರಿಸುವಂತಾಗಿದೆ. ಪ್ರತಿ ಬಾರಿ ಸರ್ಕಾರ ಜಲನಿರ್ವಹಣೆಗೆ ಮೀಡಲಿಡುವ ನೂರಾರು ಕೋಟಿಯ ಬಹುಭಾಗ ಹೊಸ ಕೊಳವೆಬಾವಿ ಕೊರೆಸುವುದಕ್ಕೆ ವಿನಿಯೋಗವಾಗುತ್ತದೆ. ಇದು ತಾತ್ಕಾಲಿಕ ಪರಿಹಾರ ನೀಡಿದರೂ ಮುಂದೆ ಸಮಸ್ಯೆ ಹೆಚ್ಚಿಸಿ, ಜಲಕ್ಷಾಮವನ್ನು ತರುತ್ತದೆ’ ಎಂದು ಅವರು ಎಚ್ಚರಿಸಿದರು.
‘ಜಲಕ್ಷಾಮ ನಿವಾರಿಸುವ ಸಲುವಾಗಿ ಮೋಡಬಿತ್ತನೆಯಂತಹ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆದರೆ ರಾಸಾಯನಿಕ ಬಳಕೆಗಳಿಂದ ತರಿಸಿದ ಮಳೆ ಎಷ್ಟು ಉಪಯೋಗಕಾರಿ? ಇದು ವೆಚ್ಚದಾಯಕ. ಕುಡಿಯುವ ನೀರಿಗಾಗಿ ಈಗ ವಾಯುಮಂಡಲದಲ್ಲಿನ ನೀರಾವಿ ತಣಿಸಿ, ಶುದ್ಧ ಕುಡಿಯುವ ನೀರನ್ನು ನೀಡುವ ಯಂತ್ರಗಳು ಬರುತ್ತಿವೆ. 2005ರಲ್ಲಿಯೇ ಮುಂಬೈಯಲ್ಲಿ ವಾಟರ್ ಮೇಕರ್ ಹೆಸರಿನ ಯಂತ್ರ ಈ ಕಾರ್ಯವನ್ನು ಸಾಧಿಸಿತ್ತು. ಆದರೆ ಇದು ಸಹ ನೀರಿನ ಇನ್ನೊಂದು ಆಕರಕ್ಕೆ ಕೈಹಾಕುವ ದುಸ್ಸಾಹಸವಾಗಿದೆಯೇ ಹೊರತು ಜಲಸಂರಕ್ಷಣೆಯಾಗುವುದಿಲ್ಲ’ ಎಂದು ಮುಖ್ಯಅತಿಥಿ ಜೆ.ಬಿ. ರಾಜ್ ಆತಂಕ ವ್ಯಕ್ತಪಡಿಸಿದರು.
ಮಾಗನೂರು ಬಸಪ್ಪ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗ ಎಂ.ಬಿ. ಸಂಗಮೇಶ್ವರಗೌಡ ಅಧ್ಯಕ್ಷತೆ ವಹಿಸಿದ್ದರು.
ನಿಮ್ಹಾನ್ಸ್‌ನ ಯುವ ಸ್ಪಂದನ ಕಾರ್ಯಕ್ರಮದ ರಾಜ್ಯ ಸಂಯೋಜಕ ನಾಗರಾಜ ರಂಗಣ್ಣನವರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕ ಎಸ್.ಬಿ. ಶಿಲ್ಪಾ, ಕಾಲೇಜಿನ ಪ್ರಾಚಾರ್ಯರಾದ ಎಂ.ಪಿ. ಪ್ರೇಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.