ADVERTISEMENT

ದಾವಣಗೆರೆ: ಬಿಜೆಪಿ ಕಾರ್ಯಕರ್ತರಿಂದ ಶ್ರೀರಾಮನಿಗೆ ಪೂಜೆ

‌ಅಯೋಧ್ಯೆಯಲ್ಲಿ ಶಿಲಾನ್ಯಾಸ: ವಿಘ್ನಗಳು ಬಾರದಂತೆ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 10:23 IST
Last Updated 5 ಆಗಸ್ಟ್ 2020, 10:23 IST
ಅಯೋಧ್ಯೆಯಲ್ಲಿ ನೆರವೇರುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಾರ್ಥಿಸಿ ದಾವಣಗೆರೆಯ ಹೊಂಡದ ವೃತ್ತದ ಬಳಿ ರಾಮ ಮಂದಿರದ ಮಾದರಿಗೆ ಬಿಜೆಪಿ ಮುಖಂಡರು ಬುಧವಾರ ಪೂಜೆ ಸಲ್ಲಿಸಿದರು. 
ಅಯೋಧ್ಯೆಯಲ್ಲಿ ನೆರವೇರುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಾರ್ಥಿಸಿ ದಾವಣಗೆರೆಯ ಹೊಂಡದ ವೃತ್ತದ ಬಳಿ ರಾಮ ಮಂದಿರದ ಮಾದರಿಗೆ ಬಿಜೆಪಿ ಮುಖಂಡರು ಬುಧವಾರ ಪೂಜೆ ಸಲ್ಲಿಸಿದರು.    

ದಾವಣಗೆರೆ: ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಯಾವುದೇ ವಿಘ್ನಗಳು ಬಾರದಂತೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ನಗರದ ಪಿ.ಜೆ.ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪೂಜೆ ಸಲ್ಲಿಸಿದರು.

ಪೂಜೆ ನೆರವೇರಿಸಿದ ಬಳಿಕ ವಾಹನಗಳಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿರುವ ಬಸವೇಶ್ವರ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ರಾಜ ವೀರಮದಕರಿ ನಾಯಕ, ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಕೊನೆಯಲ್ಲಿ ಶಿವಾಜಿ ವೃತ್ತದ ಬಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ವಿತರಿಸಲಾಯಿತು. ಅಲ್ಲದೇ ಹೊಂಡದ ವೃತ್ತದ ನಿರ್ಮಿಸಿರುವ ಬಳಿ 30 ಅಡಿ ಎತ್ತರದ ರಾಮನ ಕಟೌಟ್ ಹಾಗೂ ರಾಮ ಮಂದಿರದ ಮಾದರಿಗೆ ಪೂಜೆ ನೆರವೇರಿಸಿದರು.

ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಆನಂದರಾವ್ ಶಿಂಧೆ, ಗೋಪಾಲರಾವ್ ಮಾನೆ, ಆರ್.ಎಲ್.ಶಿವಪ್ರಕಾಶ್, ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಪಾಲಿಕೆ ಸದಸ್ಯರಾದ ಎಲ್‌.ಡಿ.ಗೋಣೆಪ್ಪ, ನರೇಂದ್ರ, ಸೋಗಿ ಶಾಂತಕುಮಾರ್, ರಾಕೇಶ್ ಜಾಧವ್ ಪಾಲ್ಗೊಂಡಿದ್ದರು.

ADVERTISEMENT

ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದು, ನಗರದ ಜಯದೇವ, ವಿದ್ಯಾರ್ಥಿಭವನ, ಗುಂಡಿ ಸರ್ಕಲ್, ಗಾಂಧಿ ವೃತ್ತಗಳು ಸೇರಿ, ರಾಮ ದೇವಾಲಯಗಳ ಮುಂಭಾಗ ಬಿಗಿಭದ್ರತೆ ಕಲ್ಪಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್‌ಪಿ ರಾಜೀವ್, ಡಿವೈಎಸ್‌ಪಿ ನಾಗೇಶ್ ಐತಾಳ್ ಅವರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭದ್ರತೆಯನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.