ದಾವಣಗೆರೆ: ‘ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ತಾಳ್ಮೆ, ಆತ್ಮಸ್ಥೈರ್ಯ, ಸಮಯಪ್ರಜ್ಞೆ ಕಲಿಯಬಹುದು’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕರ್ನಾಟಕದ ಉಪಾಧ್ಯಕ್ಷೆ ಜಸ್ಟಿನ್ ಡಿಸೋಜ ಹೇಳಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕರ್ನಾಟಕ, ದಾವಣಗೆರೆ ಜಿಲ್ಲಾ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಜ್ಯಮಟ್ಟದ ಗೈಡ್ಸ್ ಆಯುಕ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವದಾದ್ಯಂತ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಎಂದರೆ ಅದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಾಗಿದೆ. ಮಕ್ಕಳು, ಯುವಕರು ಮೊಬೈಲ್‌ನಿಂದ ದೂರವಿದ್ದು, ಅವಶ್ಯಕತೆಗೆ ತಕ್ಕಂತೆ ಅದನ್ನು ಮಿತವಾಗಿ ಬಳಕೆ ಮಾಡಬೇಕು’ ಎಂದು ಹೇಳಿದರು.
‘ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ನಾವು ಮೇಲ್ಪಂಕ್ತಿಯಲ್ಲಿದ್ದು, ಸ್ಕೌಟ್ ಮತ್ತು ಗೈಡ್ಸ್‌ನ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಬೇಕು. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದವರು ಶಿಕ್ಷಣ, ಆರೋಗ್ಯಕ್ಕಾಗಿ ಬಹಳ ದೊಡ್ಡ ಕೊಡುಗೆ ನೀಡಿ ವಿಶ್ವಮಟ್ಟದಲ್ಲಿ ದಾವಣಗೆರೆ ಗುರುತಿಸುವಂತೆ ಮಾಡಿದ್ದಾರೆ’ ಎಂದು ಹೇಳಿದರು.
‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವ ಸ್ಥಾನ ಇದ್ದು, ಅಮ್ಮ, ಅವ್ವ, ಅಜ್ಜಿ, ಅಕ್ಕ, ತಂಗಿ ಎಂಬುದು ನಮ್ಮ ಸಂಸ್ಕೃತಿಯಲ್ಲಿಯೇ ಬಂದಿದೆ. ಇತ್ತೀಚಿನ ಮತದಾನ ನೋಂದಣಿ ಪ್ರಕಾರ ಮಹಿಳಾ ಮತದಾರರು ಹೆಚ್ಚು ಇದ್ದಾರೆ. ಅಷ್ಟೇ ಅಲ್ಲದೇ ನಮ್ಮ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಜಂಟಿ ಕಾರ್ಯದರ್ಶಿ, ಕೋ ಆರ್ಡಿನೇಟರ್ ಸಹಾ ಮಹಿಳೆಯರೇ ಇದ್ದಾರೆ. ಅವರೆಲ್ಲರೂ ಹೊಂದಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ’ ಎಂದು ಸ್ಕೌಟ್ ಅಂಡ್ ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ವಯಸ್ಕ ಸಂಪನ್ಮೂಲದ ರಾಜ್ಯ ಆಯುಕ್ತ(ಗೈಡ್ಸ್)ರಾದ ಬಿ.ವಿ.ರಾಮಲತಾ ‘ಸೇರ್ಪಡೆಗೆ ಪ್ರೇರಣೆ ಧ್ಯೇಯವಾಕ್ಯ’ ಕುರಿತು ಮಾತನಾಡಿ, ‘ಇಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ಇದರ ಅನುಭವ ಆಗುತ್ತದೆ. ಎಲ್ಲರಿಗೂ ಪ್ರೇರಣೆ ನೀಡುವುದು ನಮ್ಮೆಲ್ಲರ ಕರ್ತವ್ಯ. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅವಕಾಶಗಳಿದ್ದು, ಯುವಕರು ಪಾಲ್ಗೊಳ್ಳಬೇಕು. ನಾವು ಅಂತಹವರಿಗೆ ಪ್ರೇರಣೆ, ಪ್ರೋತ್ಸಾಹ ತುಂಬಬೇಕು’ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತೆ (ಗೈಡ್ಸ್) ಗೀತಾ ನಟರಾಜ ಅಧ್ಯಕ್ಷತೆವಹಿಸಿ ಮಾತನಾಡಿ, ‘ಮಹಿಳೆಯರು ಸಬಲರು, ಸಾಧಕರಿಯರು, ಕಲಾವಿದರು, ಸಂಶೋಧಕರಾಗಿ ಸೇರಿದಂತೆ ಸರ್ವಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜಯಗಳಿಸಿ ಕೀರ್ತಿ ಪತಾಕೆಯನ್ನು ಹಾರಿಸುವಲ್ಲಿ ಮುಂದಾಗಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಮಾಡುತ್ತಾಳೆ ಸಾಧಿಸುತ್ತಾಳೆ’ ಎಂದರು.
ಗೈಡ್ಸ್ ಆಯುಕ್ತೆ ಶಾರದಾ ಮಾಗಾನಹಳ್ಳಿ, ಸ್ಕೌಟ್ ಆಯುಕ್ತ ಷಡಾಕ್ಷರಪ್ಪ, ಸಹಾಯಕ ಆಯುಕ್ತ ಎನ್.ಕೆ. ಕೊಟ್ರೇಶ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳು ಇದ್ದರು. ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಜಿಲ್ಲೆಗಳ 33 ಗೈಡ್ ಸಾಧಕರಿಗೆ ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಂಗಳೂರಿನ ಮುಕ್ತ ಕಾಗಲೆ, ರಾಧಾ ವೆಂಕಟೇಶ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.