ADVERTISEMENT

ಅಣ್ಣಿಗೇರಿಯಲ್ಲಿ ನೀರಿಗೆ ಮತ್ತೆ ಪರದಾಟ!

ಜಗದೀಶ ಎಂ.ಗಾಣಿಗೇರ
Published 8 ಆಗಸ್ಟ್ 2017, 5:10 IST
Last Updated 8 ಆಗಸ್ಟ್ 2017, 5:10 IST
ಅಣ್ಣಿಗೇರಿ ಅಂಬಿಗನ ಕೆರೆ ನೀರಿಲ್ಲದೆ ಬತ್ತಿ ಹೋಗಿರುವುದು
ಅಣ್ಣಿಗೇರಿ ಅಂಬಿಗನ ಕೆರೆ ನೀರಿಲ್ಲದೆ ಬತ್ತಿ ಹೋಗಿರುವುದು   

ಅಣ್ಣಿಗೇರಿ: ಪಟ್ಟಣದಲ್ಲಿರುವ ಕುಡಿಯುವ ನೀರಿನ ಕೆರೆಯಲ್ಲಿ ಮೂರ್ನಾಲ್ಕು ದಿನಕ್ಕೆ ಮಾತ್ರ ಆಗುವಷ್ಟು ನೀರಿದೆ. ಇದ ರಿಂದ ಜನರು ನೀರಿಗಾಗಿ ಮತ್ತೆ ಪರದಾ ಡುವ ಸ್ಥಿತಿ ಉಂಟಾಗುವ ಸಂಭವವಿದೆ. ಪಟ್ಟಣದಲ್ಲಿ 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಇಲ್ಲಿನ ಅಂಬಿಗೇರಿ ಕೆರೆ ನೀರಿಗೆ ಮೂಲಾಧಾರವಾಗಿದೆ. ಆದರೆ, ಸದ್ಯ ಅದರಲ್ಲಿ ನೀರಿಲ್ಲ. ಹೀಗಾಗಿ, ಅಲ್ಲದೆ ಪ್ರಸ್ತುತ 20 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.

ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಟ್ಟಾಗ ಅದನ್ನು ಕೆರೆಗೆ ತುಂಬಿಸಿಕೊಳ್ಳದಿರುವುದರಿಂದ ಈ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂದಿನ ವಾರ ಕಾಲುವೆಗೆ ನೀರು ಬಿಡುವ ನಿರೀಕ್ಷೆ ಇದ್ದು, ಆಗ ಕೆರೆ ತುಂಬಿಸಿಕೊಂಡರೆ ನೀರಿನ ಸಮಸ್ಯೆ ನೀಗಲಿದೆ. ಹೀಗಾಗಿ ಕಾಲುವೆಯಲ್ಲಿ ನೀರು ಬರುವವರೆಗೂ ನೀರಿನ ಸಮಸ್ಯೆ ಉಂಟಾಗಲಿದೆ.

‘ಅಂಬಿಗೇರಿ ಕೆರೆಯಲ್ಲಿ ಈಗಿರುವ ನೀರು 2–3 ದಿನಗಳವರೆಗೆ ಮಾತ್ರ ಆಗುತ್ತದೆ. ಕುಡಿಯುವುದಕ್ಕೆ ಮಾತ್ರ ಮಲಪ್ರಭಾ ಬಲದಂಡೆ ಕಾಲುವೆ ನೀರು ಬಿಟ್ಟಾಗ ಕೆರೆ ತುಂಬಿಸಿಕೊಳ್ಳಲಾಗುವುದು. ಮುಂದಿನ ಒಂದು ವಾರದೊಳಗೆ ಮಲಪ್ರಭಾ ನೀರನ್ನು ಬಿಡಲಾಗುವುದು. ಆದರೆ ದಿನ ಬಳಕೆಗೆ ಸ್ಥಳೀಯವಾಗಿ ಸ್ವಚ್ಛಗೊಳಿಸಿದ ಬಾವಿಗಳ  ನೀರನ್ನು ಗ್ರಾಮಸ್ಥರು ಬಳಸುತ್ತಿದ್ದಾರೆ’ ಎಂದು ಅಣ್ಣಿಗೇರಿ ಪುರಸಬೆ ಮುಖ್ಯಾಧಿಕಾರಿ ಬಿ.ಎಫ್.ಜಿಡ್ಡಿ ತಿಳಿಸಿದರು.

ADVERTISEMENT

ಈ ಹಿಂದೆ ನೀರಿನ ಸಮಸ್ಯೆ ಉದ್ಭವಿಸಿದಾಗ, ಸ್ಥಳೀಯವಾಗಿ  ಸಮಸ್ಯೆ ಬಗೆಹರಿಸಲು ಹಂತ ಹಂತವಾಗಿ ₹ 62.12 ಲಕ್ಷಗಳಲ್ಲಿ ಪುರಸಭೆ ಆಡಳಿತ ಕೊಳವೆಬಾವಿ ಕೊರೆಸಿತ್ತು. ಅದರಿಂದ ಅಂಬಿಗೇರಿ ಕೆರೆಗೆ ಬಿಟ್ಟು ನಂತರ, ಫಿಲ್ಟರ್‌ ಮಾಡಿ ಜನರಿಗೆ ಬಿಡುವ ವ್ಯವಸ್ಥೆ ಮಾಡಿತ್ತು. ಪಟ್ಟಣದಲ್ಲಿ 2016–17ನೇ ಸಾಲಿನಲ್ಲಿ 16 ಬೋರವೆಲ್‌ಗಳನ್ನು ಕೊರೆಸಲಾಗಿದೆ. ಅದರಲ್ಲಿ  8 ಕೊಳವೆಬಾವಿಗಳಲ್ಲಿ ನೀರು ಬಿದ್ದಿಲ್ಲ. 8 ಕೊಳವೆಬಾವಿಗಳಲ್ಲಿ 1 ಮತ್ತು 2 ಇಂಚಿನಷ್ಟು ನೀರು ಮಾತ್ರ ಬಿದ್ದಿವೆ. 

ಅಂತರ್ಜಲ ಮಟ್ಟ ಕುಸಿದಿರುವುದರಿಂದ  ಒಂದರಲ್ಲಿ ಸಿಹಿ ಮತ್ತು ಮತ್ತೊಂದರಲ್ಲಿ ಉಪ್ಪು ನೀರು ಇದೆ. ಸವಳು ಮತ್ತು ಸಿಹಿ ನೀರನ್ನು ಮಿಶ್ರಣ ಮಾಡಿ ಕೆರೆಗೆ ಬಿಟ್ಟು, ಆ ನೀರನ್ನು ಸಂಸ್ಕರಣೆ ಮಾಡಿ ಪುರಸಭೆ ಆಡಳಿತ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದೆ.

ಸ್ವಚ್ಛತೆ: ನೀರಿನ ಸಮಸ್ಯೆ ಉದ್ಭವಿಸಿದಾಗ ಜಿಲ್ಲಾಡಳಿತದ ಸೂಚನೆಯಂತೆ ಪುರಸಭೆ ಆಡಳಿತ ಇಲ್ಲಿನ 14 ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿತ್ತು. ಅವುಗಳಿಗೆ ಮೋಟಾರ್‌ ಅಳವಡಿಸಿ ನೀರನ್ನು ಮೇಲೆತ್ತಿ  ಆ ನೀರನ್ನು ದಿನ ಬಳಕೆಗೆ ಬಳಸುವಂತೆ ಅನಕೂಲ ಮಾಡಿಕೊಟ್ಟಿದೆ. ಆದರೆ ಕೆಲ ವೊಂದು ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ‘ಪಟ್ಟಣದಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಪುರಸಭೆಯವರು ಅದನ್ನು ಚಾಲನೆಯಲ್ಲಿ ಇಟ್ಟಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಸಾ ಪೂರ ಸಮೀಪ ನಿರ್ಮಾಣವಾಗುತ್ತಿರುವ 76 ಎಕರೆ ಕೆರೆಯ ಕಾಮಗಾರಿಯನ್ನು ತೀವ್ರ ಗತಿಯಲ್ಲಿ ಮಾಡಬೇಕೆಂದು ಸ್ಥಳೀ ಯರು ಹಲವು ಬಾರಿ ಆಗ್ರಹಿಸಿದ್ದರೂ ಆಮೆಗತಿಯಲ್ಲಿ ಕಾಮಗಾರಿ ಸಾಗು ತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ.

* * 

ಅಂಬಿಗೇರಿ ಕೆರೆಯಲ್ಲಿ ಈಗಿರುವ ನೀರು 2–3 ದಿನಕ್ಕೆ ಮಾತ್ರ ಆಗುತ್ತದೆ. ಆದರೆ ದಿನ ಬಳಕೆಗೆ ಸ್ಥಳೀಯವಾಗಿ ಸ್ವಚ್ಛಗೊಳಿಸಿದ  ಬಾವಿ  ನೀರನ್ನು ಗ್ರಾಮಸ್ಥರು ಬಳಸುತ್ತಿದ್ದಾರೆ
ಬಿ.ಎಫ್.ಜಿಡ್ಡಿ
ಪುರಸಭೆ ಮುಖ್ಯಾಧಿಕಾರಿ ಅಣ್ಣಿಗೇರಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.