ADVERTISEMENT

ಅವಳಿನಗರದಲ್ಲಿ ವಾಹನ ಹೊಗೆ ಹಾವಳಿ

ಮಂಜುನಾಥ ಗೌಡರ
Published 18 ಮೇ 2017, 6:43 IST
Last Updated 18 ಮೇ 2017, 6:43 IST

ಧಾರವಾಡ: ಅವಳಿ ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಹೊಗೆಯುಗುಳುವ ವಾಹನಗಳ ತಪಾಸಣೆ ಮಾಡದ್ದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.

ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ, ಹದಗೆಟ್ಟ ರಸ್ತೆ, ಹಳೆ ಡೀಸೆಲ್ ವಾಹನಗಳ ಓಡಾಟದಿಂದಾಗಿ ಗಾಳಿಯು ಕಲುಷಿತಗೊಳ್ಳುತ್ತಿದೆ. 2017ರ ವರದಿ ಪ್ರಕಾರ ಬೆಳಗಾವಿ ವಲಯ ಮಟ್ಟದಲ್ಲಿ ಒಟ್ಟು 31 ಲಕ್ಷ ವಾಹನಗಳು ನೋಂದಣಿಯಾಗಿವೆ. ಅದರಲ್ಲಿ ಧಾರವಾಡವೊಂದರಲ್ಲೇ 5 ಲಕ್ಷಕ್ಕಿಂತ ಹೆಚ್ಚು ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳ ವಾಯುಮಾಲಿನ್ಯ ತಪಾಸಣೆಗೆ ಒಂದೇ ವಾಹನವಿದೆ. ಹಾಗಾಗಿ ವಾಹನಗಳ ತಪಾಸಣೆ ಸಾಧ್ಯವಾಗುತ್ತಿಲ್ಲ.

ಡೀಸೆಲ್ ವಾಹನಗಳ ಮಾಲಿನ್ಯ ತಪಾಸಣೆಗೆ ‘ಸ್ಮೋಕ್ ಮೀಟರ್’, ಪೆಟ್ರೋಲ್ ವಾಹನಗಳ ತಪಾಸಣೆಗೆ ‘ಗ್ಯಾಸ್ ಅನಲೈಸರ್’ ಸಾಧನ ಬಳಸಲಾಗುತ್ತದೆ. ಆದರೆ, ಅವುಗಳು ದೊರೆಯುತ್ತಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಉಗುಳುವ ಎಷ್ಟು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಇಲ್ಲ ಎಂದು ಸಂಚಾರಿ ವಿಭಾಗದ ಎಸಿಪಿ ಎಸ್‌.ಬಿ. ಖವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆರಳಣಿಕೆಯಷ್ಟು ಪ್ರಕರಣಗಳು ದಮಾತ್ರ ದಾಖಲಾಗಿವೆ. ಆದರೆ, ಮೇಲಧಿಕಾರಿಗಳ ಒಪ್ಪಿಗೆ ಇಲ್ಲದೇ ಮಾಹಿತಿ ನೀಡಲು ಬರುವುದಿಲ್ಲ’ ಎಂದು ಠಾಣೆಯ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

ವಾಯು ಮಾಲಿನ್ಯದಿಂದ ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಇದರ ತಡೆಗೆ ಗಂಭೀರ ಪ್ರಯತ್ನ ಆಗಬೇಕಾಗಿದೆ ಎಂದು ಹಿರಿಯ ವೈದ್ಯ ಡಾ.ವಿ.ಬಿ. ನಿಟಾಲಿ ಅಭಿಪ್ರಾಯ ಪಡುತ್ತಾರೆ.

‘ಆಟೊ, ಲಾರಿ, ಟಂ ಟಂ, ಬಸ್‌, ಟ್ರ್ಯಾಕ್ಟರ್ ಅಂಥ ವಾಹನಗಳ ಕಳಪೆ ನಿರ್ವಹಣೆಯಿಂದ ಮಾಲಿನ್ಯ  ಹೆಚ್ಚಳವಾಗಿದೆ. ದೂಳಿನ ಕಣಗಳ ಸಂಖ್ಯೆಯೂ ಮಂಡಳಿ ಸೂಚಿಸಿರುವ ಗರಿಷ್ಠ ಮಟ್ಟಕ್ಕಿಂತ ಹೆಚ್ಚಾಗಿದೆ’ ಎನ್ನುವುದು ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ ವಿಜಯಕುಮಾರ ಖಡಕಬಾವಿ ಹೇಳುತ್ತಾರೆ.

‘ಧಾರವಾಡದ ಕೆಎಂಎಫ್‌ ಸಮೀಪದ ಲಕ್ಕಮನಹಳ್ಳಿ ಮತ್ತು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ವಾಯುಮಾಲಿನ್ಯ ಪ್ರಮಾಣ ತಿಳಿಯುವ ಸಾಧನ ಅಳವಡಿಸಲಾಗಿದೆ. ಜೂನ್‌ ಅಂತ್ಯಕ್ಕೆ ಇಲಾಖೆಗೆ ಹೆಚ್ಚಿನ ಸಲಕರಣೆಗಳು ಬರಲಿವೆ’ ಎಂದರು.

ತಪಾಸಣೆಗೆ ದರ: ದ್ವಿಚಕ್ರ ವಾಹನಗಳ ತಪಾಸಣೆಗೆ ₹ 50, ಕಾರು ₹ 90, ಸಾರಿಗೆ ಉದ್ದೇಶಕ್ಕೆ ಬಳಸಲಾಗುವ ಡೀಸೆಲ್ ವಾಹನಕ್ಕೆ ₹ 125 ದರ ನಿಗದಿ ಮಾಡಲಾಗಿದೆ.

***

ಕಾಯ್ದೆ ಪ್ರಕಾರ ಕಡ್ಡಾಯ
ಮೋಟಾರ್ ವಾಹನ ಕಾಯ್ದೆ ಪ್ರಕಾರ 116 ಪ್ರಕಾರ ವಾಹನ ಮಾಲೀಕರ ಬಳಿ ಪಿಯುಸಿ (ಮಾಲಿನ್ಯ ನಿಯಂತ್ರಣದಲ್ಲಿದೆ) ಎಂಬ ಪ್ರಮಾಣ ಪತ್ರ ಹೊಂದುವುದು ಕಡ್ಡಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.