ಹುಬ್ಬಳ್ಳಿ: ಭಾರತೀಯ ಹಣಕಾಸು ಇಲಾಖೆಯು 1994ರಲ್ಲಿ ಮುದ್ರಣ ಸ್ಥಗಿತಗೊಳಿಸಿದ್ದ ಒಂದು ರೂಪಾಯಿ ನೋಟುಗಳನ್ನು ಮತ್ತೆ ಬಿಡುಗಡೆ ಮಾಡಿದ್ದು, ಇನ್ನು ಕೆಲ ದಿನಗಳಲ್ಲಿ ದೇಶದಾದ್ಯಂತ ಚಲಾವಣೆಗೆ ಬರಲಿವೆ.
ಕರ್ನಾಟಕ ರಾಜ್ಯ ನಾಣ್ಯ ಸಂಗ್ರಹಕಾರರ ಸಂಘದ ಹಿರಿಯರ ಸದಸ್ಯರಾದ, ನಗರದ ಎ.ಸಿ. ಗೋಪಾಲ ಅವರು ಈ ನೋಟನ್ನು ಭಾರತೀಯ ರಿಜರ್ವ್ ಬ್ಯಾಂಕ್‌ನಿಂದ ತರಿಸಿಕೊಂಡಿದ್ದಾರೆ. ಹಳೆಯ ನೋಟಿಗಿಂತ ಹೆಚ್ಚು ಸುರಕ್ಷಿತವಾಗಿ, ನೀರಿನಲ್ಲಿ ಬಿದ್ದರೂ ಹಾಳಾಗದ ಈ ನೋಟನ್ನು ಸದ್ಯ ಸಾರ್ವಜನಿಕ ಬಳಕೆಗೆ ಬಿಟ್ಟಿಲ್ಲ. ಆದರೆ, ನಾಣ್ಯ ಸಂಗ್ರಹಕಾರರಿಗೆ ವಿಶೇಷ ಕೋರಿಕೆಯ ಮೇರೆಗೆ ಕಳಿಸಿಕೊಡಲಾಗಿದೆ.
ನೋಟಿನ ಒಂದು ಬದಿಯಲ್ಲಿ ಭಾರತ ಸರ್ಕಾರ ಎಂದು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದು, ಎಡಬದಿಯಲ್ಲಿ 1 ಎಂಬ ಅಂಕಿಯಿದೆ. ಬಲಬದಿಯಲ್ಲಿ ಈಗ ನಾವು ಬಳಸುತ್ತಿರುವ ಒಂದು ರೂಪಾಯಿ ನಾಣ್ಯದ ಚಿತ್ರವನ್ನು ಅಚ್ಚು ಮಾಡಲಾಗಿದೆ. ನಾಣ್ಯದ ಚಿತ್ರದ ಕೆಳಭಾಗದಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಗಳ ಸಹಿ ಇದೆ (ಒಂದು ರೂಪಾಯಿ ನಾಣ್ಯ ಹಾಗೂ ನೋಟನ್ನು ಹಣಕಾಸು ಇಲಾಖೆಯೇ ಟಂಕಿಸುತ್ತದೆ. ಉಳಿದ ನೋಟುಗಳನ್ನು ಆರ್‌ಬಿಐ ಮುದ್ರಿಸುತ್ತದೆ). ಅದರ ಕೆಳಭಾಗದಲ್ಲಿ 2015 ಎಂದು ಬರೆಯಲಾಗಿದೆ.
ಹೊಸ ನೋಟು ಚಲಾವಣೆಗೆ ಬಂದ ಬಗ್ಗೆ ಮಾಹಿತಿ ನೀಡಿದ ಗೋಪಾಲ, ‘ಆರ್‌ಬಿಐ ಈ ನೋಟನ್ನು ಚಲಾವಣೆಗೆ ತರಲಿದ್ದು, ಮೊದಲು ಮುಂಬೈನಲ್ಲಿ ಬರಲಿದೆ. ಬಳಿಕ ಉಳಿದ ನಗರಗಳಲ್ಲಿ ಚಲಾವಣೆಯಲ್ಲಿ ತರಲಾಗುತ್ತದೆ’ ಎಂದರು. 2014ರ ಡಿಸೆಂಬರ್‌ನಲ್ಲಿ ಹೊಸ ನೋಟಿನ ಬಗ್ಗೆ ಗೆಜೆಟ್‌ನಲ್ಲಿ ಪ್ರಕಟಿಸಿದ್ದ ಹಣಕಾಸು ಸಚಿವಾಲಯ 6 ಮಾರ್ಚ್ 2015ರಂದು ರಾಜಸ್ತಾನದ ನಾಥದ್ವಾರದ ಶ್ರೀನಾಥಜಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಿತ್ತು.
ಮುಖಬೆಲೆ ಒಂದು ರೂಪಾಯಿ ಇದ್ದರೂ, ಇದರ ಉತ್ಪಾದನಾ ವೆಚ್ಚ ₨ 1.14 ಆಗುತ್ತದೆ ಎಂದು ಹಣಕಾಸು ಸಚಿವಾಲಯವು ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷಚಂದ್ರ ಅಗರವಾಲ್ ಅವರು ಕೇಳಿದ್ದ ಮಾಹಿತಿಗೆ ಪ್ರತಿಕ್ರಿಯೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.