ADVERTISEMENT

ಕನ್ನಡಕ್ಕೆ ಕುಠಾರಸ್ವಾಮಿ ಆಗಬೇಡಿ: ಮುಖ್ಯಮಂತ್ರಿಗೆ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 6:37 IST
Last Updated 5 ಜನವರಿ 2019, 6:37 IST
   

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಕನ್ನಡವೆಂಬುದು ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಒಂದು ಬೃಹತ್‌ ವೃಕ್ಷ. ನಮ್ಮ ಪ್ರೀತಿಯ ಮುಖ್ಯಮಂತ್ರಿಯವರಾದ ಎಚ್‌.ಡಿ.ಕುಮಾರಸ್ವಾಮಿ ಅವರು ಕನ್ನಡ ವೃಕ್ಷದ ಪಾಲಿಗೆ ಎಂದಿಗೂ ‘ಕುಠಾರಸ್ವಾಮಿ’ ಆಗಬಾರದು’ ಎಂದು ನಿಕಟಪೂರ್ವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಆಗ್ರಹಿಸಿದರು.

ಶುಕ್ರವಾರ ಇಲ್ಲಿ ಆರಂಭವಾದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಬಲವಾಗಿ ವಿರೋಧಿಸಿದರು. ಈ ವಿಷಯದಲ್ಲಿ ಸರ್ಕಾರದ ಖಚಿತ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.

‘ಕುಮಾರಸ್ವಾಮಿಯವರು ಈ ನಾಡಿನ ಮಣ್ಣಿನ ಮಗ. ಪ್ರಾದೇಶಿಕ ಪಕ್ಷದ ವರಿಷ್ಠರು. ಅವರ ತಂದೆ ಈ ದೇಶದ ಪ್ರಧಾನಿ ಆಗಿದ್ದವರು. ಕುಮಾರಸ್ವಾಮಿ ಈಗ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಕನ್ನಡದ ಅಳಿವು, ಉಳಿವು ಮತ್ತು ನಮ್ಮ ಜನಭಾಷೆಯ ಅಸ್ಮಿತೆಯ ರಕ್ಷಣೆಯ ವಿಷಯದಲ್ಲಿ ಈ ಸರ್ಕಾರದ ನಿಲುವು ಏನಾದರೂ ಇದ್ದರೆ ಅದು ಏನು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

62 ವರ್ಷದ ಹಿಂದೆ ಧಾರವಾಡದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕುವೆಂಪುರವರು, ‘ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು’ ಎಂದು ಹೇಳಿದ್ದರು. ಆರು ದಶಕ ಕಳೆದರೂ ಅವರ ಕನಸು ನನಸಾಗಿಲ್ಲ. ಇದು ಕನ್ನಡದ ಪಾಲಿಗೆ ಜ್ವಲಂತ ಸಮಸ್ಯೆ ಎಂದರು.

ಇಂಗ್ಲಿಷ್‌ ಕಲಿಕೆಗೆ ಅನಗತ್ಯ ಒಲವು ಬೆಳೆಯುತ್ತಿದೆ. ಅದು ದ್ರಾವಿಡ ಭಾಷೆಯ ಜಾಯಮಾನಕ್ಕೆ ಒಗ್ಗುವುದಿಲ್ಲ. ಇಂಗ್ಲಿಷ್‌ ಕಲಿಕೆಗೆ ಯಾರ ವಿರೋಧವೂ ಇಲ್ಲ. ವಿರೋಧಿಸಬಾರದು, ಅದು ಸಾಧ್ಯವೂ ಇಲ್ಲ. ಆದರೆ, ಪ್ರಾಥಮಿಕ ಶಿಕ್ಷಣದ ಹಂತದಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುವುದಕ್ಕೆ ಆತುರದ ನಿರ್ಧಾರ ಸಲ್ಲದು ಎಂದು ಪ್ರತಿಪಾದಿಸಿದರು.

1,000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಗೊಂಡಿದೆ. ಅದಕ್ಕೂ ಮೊದಲು ಶಿಕ್ಷಣ ತಜ್ಞರು ಮತ್ತು ಕನ್ನಡಪರ ಹೋರಾಟಗಾರರ ಜೊತೆ ಚರ್ಚಿಸಿಲ್ಲ. ಆ ಬಳಿಕ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಿದಾಗ, ‘ಕಣ್ತಪ್ಪಿನಿಂದ ಬಜೆಟ್‌ನಲ್ಲಿ ಹಾಗೆ ‍ಪ್ರಕಟವಾಗಿದೆ’ ಎಂದು ಸ್ಪಷ್ಟನೆ ನೀಡಿದ್ದರು. ಕೆಲವೇ ದಿನಗಳಲ್ಲಿ ಬೆಳಗಾವಿ ಅಧಿವೇಶನದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆಗೆ ಹಣಕಾಸು ಒದಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಇದು ಆತಂಕ ಹುಟ್ಟಿಸಿದೆ ಎಂದರು.

ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಪ್ರಸ್ತಾವಕ್ಕೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಲವರು ವಿರೋಧಿಸಿದ್ದಾರೆ. ಈಗಿನ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಅವರ ನಿಲುವು ಸ್ವಾಗತಾರ್ಹ ಎಂದು ಶ್ಲಾಘಿಸಿದರು.

ಕನ್ನಡ ಮಾಧ್ಯಮ ಶಿಕ್ಷಣದ ಸುಧಾರಣೆ ಮತ್ತು ಭಾಷೆಗೆ ಬಲ ತುಂಬುವ ಕುರಿತು ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ ಮಾನ್ಯ ಮಾಡಿತ್ತು. ಪೂರಕವಾಗಿ ಕೆಲವು ಕಾರ್ಯಕ್ರಮಗಳ ಜಾರಿಗೂ ಮುಂದಾಗಿತ್ತು. ಮೈತ್ರಿ ಸರ್ಕಾರದ ಆಡಳಿತ ಇರುವುದರಿಂದ ಮೈತ್ರಿ ಧರ್ಮ ಪಾಲನೆಯ ಭಾಗವಾಗಿ ಕುಮಾರಸ್ವಾಮಿಯವರು ಆ ಯೋಜನೆಯನ್ನು ಜಾರಿಗೆ ತರಬೇಕು. ಮೈತ್ರಿ ಧರ್ಮದ ಭಾಗವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸ್ಥಾಪಿಸುವ ಯೋಚನೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.

‘ನಾನು ವಿಧೇಯತೆಯಿಂದ ಅಲ್ಲ, ವಿನಯದಿಂದ ಕೇಳುತ್ತಿದ್ದೇನೆ. ಈ ವಿಷಯದಲ್ಲಿ ನಿಮ್ಮ ನಿಲುವು ಏನಾದರೂ ಇದ್ದರೆ ಬಹಿರಂಗಪಡಿಸಿ. ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಗೆ ಧಕ್ಕೆ ಬಂದರೆ ಅದಕ್ಕೆ ವಿರುದ್ಧವಾಗಿ ಹೋರಾಟ ನಡೆಸಲು ಜನರು ಸದಾ ಸಿದ್ಧರಾಗಿದ್ದಾರೆ. ಮುಂದೆಯೂ ಅಂತಹ ಹೋರಾಟಕ್ಕೆ ನಾವು ಸಿದ್ಧ’ ಎಂದು ಎಚ್ಚರಿಸಿದರು.

* ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.