ADVERTISEMENT

ಕ್ಲಾಸ್‌ರೂಂನಲ್ಲಿನ್ನು ಆನ್‌ಲೈನ್‌ ಉಪನ್ಯಾಸ..

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 7:38 IST
Last Updated 8 ಏಪ್ರಿಲ್ 2014, 7:38 IST

ಧಾರವಾಡ: ಅಮೆರಿಕದಲ್ಲಿರುವ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿರುವ ವಿದುಷಿಯ ಮನೆಯಿಂದಲೇ ಸಂಗೀತ ಕಲಿಯು­ತ್ತಾರೆ. ಮೈಸೂರಿನ ಯೋಗಪಟುವೊಬ್ಬರು ತನ್ನ ವಿದೇಶದ ಶಿಷ್ಯರಿಗೆ ಮನೆಯಿಂದಲೇ ಯೋಗ ಹೇಳಿಕೊಡುತ್ತಾರೆ. ಇದೆಲ್ಲ ಆನ್‌ಲೈನ್ ವೆಬ್‌ಕ್ಯಾಂ ಮೂಲಕ ಸಾಧ್ಯ. ಅಂತಹದ್ದೇ ಪ್ರಯೋಗವನ್ನು ಕರ್ನಾಟಕ ವಿಶ್ವವಿದ್ಯಾಲಯ ಇದೀಗ ತನ್ನ ತರಗತಿಗಳಲ್ಲಿ ಅಳವಡಿಸಲು ಮುಂದಾಗಿದೆ.

ಹೌದು. ಅಂದುಕೊಂಡಂತೆ ಎಲ್ಲವೂ ಆದರೆ, ಇದೇ 20ರ ಒಳಗಾಗಿ ವಿಶ್ವವಿದ್ಯಾಲಯದ ಡಾ.ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ವಿದ್ಯಾರ್ಥಿಗಳು ತಮ್ಮ ‘ವಿಶ್ವಚೇತನ’ ಸಭಾಂಗಣದಲ್ಲಿಯೇ ಬೆಂಗಳೂರಿನಿಂದ ಡಾ.­ಯು.­ಆರ್‌.­ಅನಂತಮೂರ್ತಿ ಅವರ ಭಾಷಣ­ವನ್ನು ಆಲಿಸಬಹುದು. ಮೈಸೂರಿನಿಂದ ದೇವನೂರು ಮಹಾದೇವ ಅವರ ಮಾತು­ಗಳನ್ನೂ ಆಲಿಸಿ ‘ಅಕ್ಷರಗಳನ್ನು ಎದೆಗೆ ಇಳಿಸಿಕೊಳ್ಳಬಹುದು’.

ಈ ಪ್ರಯತ್ನಕ್ಕೆ ಕರ್ನಾಟಕ ವಿ.ವಿ.ಯು ಶೀಘ್ರವೇ ನೀಡಲಿದೆ. ಅದೇ ಪ್ರೊಫೆಸರ್‌ಗಳ ಮುಖವನ್ನು ನೋಡುತ್ತಾ, ಅವರ ಉಪ­ನ್ಯಾಸವನ್ನು ಕೇಳಿ ಕೇಳಿ ಬೇಸರವಾದವರಿಗೆ ‘ಫಾರ್‌ ಎ ಚೇಂಜ್‌’ ಹೊರಗಿನ ಉಪನ್ಯಾಸಕ­ರಿಂದ ಮಾತುಗಳನ್ನು ಕೇಳುವ ಅವಕಾಶ ದೊರೆಯಲಿದೆ.

ವಿ.ವಿ.ಯಲ್ಲಿ ಪ್ರಸ್ತುತ 40ಕ್ಕೂ ಅಧಿಕ ವಿಭಾಗಗಳಿದ್ದು, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ನಿಕಾಯಗಳಿವೆ. ವಿಜ್ಞಾನದ ವಿದ್ಯಾರ್ಥಿ­ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂತರ­ರಾಷ್ಟ್ರೀಯ ವಿದ್ವಾಂಸರ ವೈಜ್ಞಾನಿಕ ಸಂಶೋ­ಧನೆಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಇದಕ್ಕೆ ದುಡ್ಡೇನೂ ಕೊಡಬೇಕಾಗಿಲ್ಲ. ಏಕೆಂದರೆ, ಭಾರತ ಸರ್ಕಾರ ತನ್ನ ವಿವಿಧ ಯೋಜನೆಗಳಡಿ ಅಂತಹ ವಿದ್ವಾಂಸರಿಂದ ಭಾಷಣ ಮಾಡಿಸುತ್ತದೆ. ಸಾಧ್ಯವಾದರೆ ಆನ್‌ಲೈನ್‌ನಲ್ಲಿ, ಇಲ್ಲದಿದ್ದರೆ ಮುದ್ರಿತ ಭಾಷಣವನ್ನು ಎಲ್‌ಸಿಡಿ ಪರದೆಯಲ್ಲಿ ವಿದ್ಯಾರ್ಥಿಗಳು ವೀಕ್ಷಿಸುವುದನ್ನು ವಿ.ವಿ. ಉತ್ತೇಜಿಸಲಿದೆ.

ಈಗಾಗಲೇ ವಿ.ವಿ. ಆವರಣದಲ್ಲಿರುವ ಭಾಷಾ ಭವನದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಸ್ಟುಡಿಯೊ ಇದೆ. ಪ್ರಸ್ತುತ ಅದನ್ನು ಎಲೆಕ್ಟ್ರಾನಿಕ್‌ ಮಾಧ್ಯಮ ಅಧ್ಯಯನ ಮಾಡುವ ವಿದ್ಯಾರ್ಥಿ­ಗಳು ತಮ್ಮ ಪ್ರಾಯೋಗಿಕ ಅಧ್ಯಯನಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ವಾರದಲ್ಲಿ ಮೂರು ದಿನ ಅದನ್ನು ಆಸಕ್ತ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿಸುವ ಬಗ್ಗೆಯೂ ವಿ.ವಿ. ಅಂತಿಮ ನಿರ್ಧಾರ ಕೈಗೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಕವಿವಿ ಕುಲಪತಿ ಪ್ರೊ.ಎಚ್‌.ಬಿ.ವಾಲೀಕಾರ, ‘ವಿದ್ಯಾರ್ಥಿ­ಗಳು ಬರೀ ಪಠ್ಯದ ಉಪನ್ಯಾಸಕಗಳನ್ನು ತಮ್ಮ ಪ್ರಾಧ್ಯಾಪಕರಿಂದಲೇ ಕೇಳುವುದು ರೂಢಿ. ಅದನ್ನು ತಪ್ಪಿಸಿ, ಆ ವಿಷಯದ ಬಗ್ಗೆ ಪರಿಣತಿ ಪಡೆದಿರುವ ಇತರ ವಿದ್ವಾಂಸರಿಂದ ಉಪನ್ಯಾಸಗಳನ್ನು ಆನ್‌ಲೈನ್‌ ಮೂಲಕ ಕೇಳಿಸುವ ಉದ್ದೇಶವಿದೆ. ವಿ.ವಿ. ಒಂದಷ್ಟು ವಿದ್ವಾಂಸರ ಪಟ್ಟಿಯನ್ನು ತಯಾರಿಸಲಿದೆ. ಆಸಕ್ತ ವಿದ್ಯಾರ್ಥಿಗಳು ತಮಗೆ ಬೇಕೆನಿಸಿದವರ ಹೆಸರನ್ನು ಕೊಟ್ಟರೆ ಅದನ್ನೂ ಪರಿಗಣಿಸಲಾಗುವುದು. ಈ ಯೋಜನೆ ಏ 20ರಂದು ಜಾರಿಗೆ ತರಲು ನಿರ್ಧರಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.