ಹುಬ್ಬಳ್ಳಿ: ‘ಕಸಬಾಪೇಟೆ ಮಿನಿ ಪಾಕಿಸ್ತಾನವಾಗಿದೆ. ಇಲ್ಲಿರುವ ಮಸೀದಿಗಳಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಶಂಕೆ ಇದ್ದು, ತಪಾಸಣೆ ನಡೆಸಬೇಕು’ ಎಂಬ ಹೇಳಿಕೆ ನೀಡಿರುವ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಮುಸ್ಲಿಮರು ಶುಕ್ರವಾರ ಪ್ರತಿಭಟನೆ ನಡೆಸಿದರು. ಹಳೇ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನಾಕಾರರು ಜೋಶಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಂಸದರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ, ಡಿಸಿಪಿ ರೇಣುಕಾ ಸುಕುಮಾರ್ ಅವರಿಗೆ ಮುಖಂಡರು ದೂರು ನೀಡಿದರು.
‘ವೈಯಕ್ತಿಕ ದ್ವೇಷದಿಂದ ಕೊಲೆಯಾದ ಗೌಸಿಯಾ ಟೌನ್‌ನ ಗುರುಸಿದ್ಧಪ್ಪ ಅಂಬಿಗೇರ ಕುಟುಂಬಕ್ಕೆ ಸಾಂತ್ವನ ಹೇಳಲು ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಸದರು, ಅಲ್ಲಿಯ ಜನರನ್ನು ಉದ್ರೇಕಿಸುವ ಹಾಗೂ ಕೋಮು ಗಲಭೆಗೆ ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.‘ನಮಾಜ್, ಕುರಾನ್ ಪಠಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನಡೆಯುವ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿಡಲಾಗಿದೆ ಎಂಬ ಸುಳ್ಳು ಹೇಳಿಕೆ ನೀಡಿ, ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ’ ಎಂದು ಹೇಳಿದರು.
ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಹಳ್ಳೂರ, ಮುಖಂಡರಾದ ಬಸೀರ್ ಗುಡಮಲ್, ವಹಬ್ ಮುಲ್ಲಾ, ಮಹಮ್ಮದ್ ಕೋಳೂರ, ಜಾಫರ್ ಸಾಬ್ ಉಸ್ಮಾನ್ ಸಾಬ್ ಖಾಜಿ, ಮಹಮ್ಮದ್ ಹನೀಫ್ ಹಾಗೂ ಸದರಸೋಫಾ, ಮಸ್ತಾನಸೋಫಾ, ಕಸಬಾ ಮೊಹಲ್ಲಾ ಮಸೀದಿ, ರಜಾಟೌನ್ ಮಸೀದಿ, ಇಬ್ರಾಹಿಂಪುರ ಮಸೀದಿ ಮುತುವಲ್ಲಿಗಳು ಹಾಗೂ ಹೊನ್ನಳ್ಳಿ ಪ್ಲಾಟ್ ಜಮಾತ್, ನಾರಾಯಣ ಸೋಫಾ ಜಮಾತ್, ಇಸ್ಲಾಂಪುರ ಜಮಾತ್, ಅಹಮ್ಮದ್‌ನಗರ ಜಮಾತ್, ಪಡದಯ್ಯನ ಹಕ್ಕಲ ಜಮಾತ್ ಮತ್ತ ಬಾಣತಿಕಟ್ಟಾ ಜಮಾತ್‌ನ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕ್ಷಮೆಯಾಚನೆಗೆ ಆಗ್ರಹ: ‘ಕಸಬಾಪೇಟೆ ಮಿನಿ ಪಾಕಿಸ್ತಾನವಿದ್ದಂತೆ’ ಎಂಬ ಹೇಳಿಕೆ ನೀಡಿರುವ ಸಂಸದ ಜೋಶಿ ತಕ್ಷಣ ಮುಸ್ಲಿಮರ ಕ್ಷಮೆಯಾಚಿಸಬೇಕು ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಮ್ರಾನ ಯಲಿಗಾರ ಆಗ್ರಹಿಸಿದ್ದಾರೆ.ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ, ಚುನಾವಣೆ ಹತ್ತಿರವಿರುವುದರಿಂದ ರಾಜಕೀಯ ಲಾಭಕ್ಕಾಗಿ ಸಂಸದರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.