ಧಾರವಾಡ: ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷ (ಆ. 30) ಪೂರ್ಣಗೊಂಡಿದ್ದರೂ ಇದುವರೆಗೂ ಹಂತಕರು ಪತ್ತೆಯಾಗಿಲ್ಲ. ಇಂಥ ಸಂದರ್ಭದಲ್ಲಿ ತನಿಖೆಯು ಹೈಕೋರ್ಟ್‌ನ ಸುಪರ್ದಿಯಲ್ಲಿ ನಡೆಯುವುದೇ ಉತ್ತಮ ಎಂದು ವಿಚಾರವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಡಾ. ಕಲಬುರ್ಗಿ ಕುಟುಂಬ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ತಮ್ಮ ತಂದೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರಿಂದ ತನಿಖೆಯಲ್ಲಿ ಪ್ರಗತಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ಕಲಬುರ್ಗಿ ಅವರ ಕುಟುಂಬವೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಮಹಾರಾಷ್ಟ್ರದ ಚಿಂತಕ ಗೋವಿಂದ ಪಾನ್ಸರೆ ಅವರ ಪುತ್ರಿ ಮೇಘನಾ ಪಾನ್ಸರೆ ಅಭಿಪ್ರಾಯಪಟ್ಟಿದ್ದಾರೆ.
‘ಮಹಾರಾಷ್ಟ್ರದ ಡಾ.ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಅವರ ಹತ್ಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎರಡು ಪ್ರತ್ಯೇಕ ದೂರುಗಳನ್ನು ಒಗ್ಗೂಡಿಸಿರುವ ಬಾಂಬೆ ಹೈಕೋರ್ಟ್, ಪ್ರಕರಣಗಳ ತನಿಖೆ ಮೇಲೆ ನಿಗಾ ಇಟ್ಟಿದೆ. ಇದರಿಂದ ತನಿಖೆಯಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಕಂಡುಬರುತ್ತಿದೆ. ಇದೇ ರೀತಿ ಕಲಬುರ್ಗಿ ಕುಟುಂಬವೂ ಹೈಕೋರ್ಟ್ ಮೊರೆ ಹೋಗಿದ್ದಲ್ಲಿ ತನಿಖೆ ಮತ್ತಷ್ಟು ಪ್ರಗತಿ ಕಾಣುತ್ತಿತ್ತು’ ಎಂದು ಅವರು ‘ಪ್ರಜಾವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.
‘ದಾಬೋಲ್ಕರ್ ಹಾಗೂ ಪಾನ್ಸರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಾಗೂ ಎಸ್‌ಐಟಿ ಜತೆ ಕರ್ನಾಟಕದ ಸಿಐಡಿ ಸಮರ್ಪಕ ಸಂವಹನ ನಡೆಸದ ಕಾರಣ ಕಲಬುರ್ಗಿ ಪ್ರಕರಣದಲ್ಲಿ ಇಂದಿಗೂ ಪ್ರಗತಿ ಕಾಣುತ್ತಿಲ್ಲ. ಆದರೆ ಬಾಂಬೆ ಹೈಕೋರ್ಟ್ ಸುಪರ್ದಿಯಲ್ಲಿ ಅಲ್ಲಿನ ಎರಡು ಹತ್ಯೆ ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದರಿಂದ ಹಂತಕರ ಗುರುತು ಪತ್ತೆಯಾಗಿದೆ. ಆದರೆ ಅವರು ನಾಪತ್ತೆಯಾಗಿದ್ದಾರೆ ಎಂದು ತನಿಖಾ ತಂಡಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿವೆ’ ಎಂದು ಹೇಳಿದರು.
‘ಗೋವಾದ ಸನಾತನ ಸಂಸ್ಥೆಯೊಂದಿಗೆ ಪ್ರಕರಣ ತಳುಕು ಹಾಕಿಕೊಂಡಿರುವುದರಿಂದ ಇದು ಮೂರೂ ರಾಜ್ಯಗಳಿಗೆ ಸಂಬಂಧಪಟ್ಟಿದೆ. ಹಾಗೆಯೇ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ದೂರುಗಳು ಮಹಾರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿವೆ.
ಈಗಾಗಲೇ ಇಬ್ಬರನ್ನು ಎಸ್‌ಐಟಿ ಬಂಧಿಸಿತ್ತು. ಅದರಲ್ಲಿ ಒಬ್ಬರಿಗೆ ಜಾಮೀನು ದೊರೆತಿದೆ. ಡಾ. ವೀರೇಂದ್ರ ತಾವಡೆ ಜೈಲಿನಲ್ಲಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ನೀಡಬಾರದು ಎಂದು ಪುಣೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ’ ಎಂದೂ ವಿವರಿಸಿದರು.
‘ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರನ್ನು ಭೇಟಿ ಮಾಡಿ ಹೈಕೋರ್ಟ್‌ಗೆ ಹೋಗುವಂತೆ ಕಳೆದ ವರ್ಷ ಸಲಹೆ ನೀಡಿದ್ದೆ. ಇಷ್ಟಕ್ಕೂ ಅದು ಅವರ ವೈಯಕ್ತಿಕ ನಿರ್ಧಾರ’ ಎಂದು ಮೇಘನಾ ಹೇಳಿದರು.
‘ಪ್ರಕರಣ ಭೇದಿಸುವಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನ ಸಾಲದು. ಈ ಕುರಿತು ಆಗಸ್ಟ್ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು’ ಎಂದು ಅವರು ವಿವರಿಸಿದರು.
ಹೋರಾಟ ಅನಿವಾರ್ಯ
‘ತನಿಖೆ ನಡೆಸುವ ಸಂಬಂಧ ಮುಖ್ಯಮಂತ್ರಿ ಭರವಸೆ ನೀಡಿದ್ದು, ಮಾತಿಗೂ ಕೃತಿಗೂ ಸಾಮ್ಯತೆ ಇರುವಂತೆ ಅವರು ನೋಡಿಕೊಳ್ಳಬೇಕು’ ಎಂದು ದಕ್ಷಿಣಾಯಣದ ಮುಖ್ಯ ಸಂಚಾಲಕ ಡಾ. ಗಣೇಶ ಎನ್.ದೇವಿ ಪ್ರತಿಕ್ರಿಯಿಸಿದರು.
‘ಸೆಪ್ಟೆಂಬರ್ ಮೊದಲ ವಾರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಮೂರು ತಿಂಗಳ ಒಳಗಾಗಿ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದರು.
ಖರ್ಚು ಭರಿಸುವ ಶಕ್ತಿ ಇಲ್ಲ?
‘ಈ ಹಿಂದೆ ಕಲಬುರ್ಗಿ ಅವರ ವಿರುದ್ಧ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿದ್ದಾಗ ಸಾಕಷ್ಟು ಹಣ ಖರ್ಚು ಆಗಿದೆ. ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿರುವ ಈ ಹೊತ್ತಿನಲ್ಲಿ ಹೈಕೋರ್ಟ್ ಮೊರೆ ಹೋಗಿ ಅದಕ್ಕೆ ಆಗುವ ಖರ್ಚನ್ನು ಭರಿಸುವ ಶಕ್ತಿ ನನಗಿಲ್ಲ.
ಹೀಗಾಗಿ ಇದನ್ನು ಕುಟುಂಬದ ಸದಸ್ಯರೊಂದಿಗೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನಿಸುತ್ತೇನೆ’ ಎಂದು ಕಲಬುರ್ಗಿ ಅವರ ಪತ್ನಿ ಉಮಾದೇವಿ ಹೇಳಿದ್ದಾಗಿ ಅವರ ಕುಟುಂಬದ ಆಪ್ತವಲಯದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಕಲಬುರ್ಗಿ ಅವರ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗಲಿಲ್ಲ.
* *
ಮಹಾರಾಷ್ಟ್ರದ ಇಬ್ಬರು ವಿಚಾರವಾದಿಗಳ ಕುಟುಂಬಕ್ಕೆ ಹೋರಾಟದ ಹಿನ್ನೆಲೆ ಇದ್ದರೆ ಕಲಬುರ್ಗಿ ಕುಟುಂಬಕ್ಕೆ ಅದಿಲ್ಲ. ನ್ಯಾಯಾಲಯದ ಮೊರೆ ಹೋಗಲು ಒತ್ತಾಯಿಸಲಾಗದು
ಡಾ. ಜಿ.ಎನ್.ದೇವಿ
ದಕ್ಷಿಣಾಯಣ ಸಂಘಟನೆ ಮುಖ್ಯ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.