ಧಾರವಾಡ: ತಮಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಗುರುವಾರವೂ ಮುಂದುವರೆಯಿತು. ಗುರುವಾರ ಪ್ರತಿಭಟನಾ ಸ್ಥಳದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಅವರು ತಮ್ಮ ಪ್ರತಿಭಟನೆ ಮುಂದುವರೆಸಿದರು.
ಅತಿಥಿ ಉಪನ್ಯಾಸಕ ಎಂಬ ಪದವನ್ನು ತೆಗೆದು ಹಾಕಿ ಸೇವಾ ಭದ್ರತೆ ಒದಗಿಸಿ ಈಗಿರುವ 8 ಗಂಟೆ ಕಾರ್ಯಭಾರವನ್ನು 16 ಗಂಟೆಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶಿಕ್ಷಕರು ಧರಣಿ ನಡೆಸುತ್ತಿದ್ದಾರೆ.
ಶುಕ್ರವಾರ ಶಿಕ್ಷಕರ ಈ ಪ್ರತಿಭಟನೆಗೆ ಬಿಜೆಪಿ ಬೆಂಬಲ ಸೂಚಿಸಿತು. ಈ ವೇಳೆ ಮಾತನಾಡಿದ ಎಂಎಲ್‌ಸಿ ಸ್ಥಾನದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮ.ನಾಗರಾಜ, ‘ಶಿಕ್ಷಣ ಕ್ಷೇತ್ರದಿಂದ ಸಮಾಜವಿದೆ ಅಂತೆಯೇ ಸಮಾಜದಿಂದ ಸರ್ಕಾರ ನಡೆಯುತ್ತಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಿದ್ದಾರೆ. ಕೂಡಲೇ ಅತಿಥಿ ಉಪನ್ಯಾಸಕರ ನ್ಯಾಯಯುತವಾದ ಬೇಡಿಕೆ ಈಡೇರಿಸಲು ಮುಂದಾಗಬೇಕು’ ಎಂದರು.
ಶಿಕ್ಷಕರಾದ ಸುಶೀಲ ಜಾಧವ, ಎಂ.ಎನ್. ಭಜಂತ್ರಿ, ಮಹಾದೇವ ಬಿಡನಾಳ, ಎಂ.ಸಿ.ಕಳ್ಳಿಮನಿ ಸೇರಿದಂತೆ ಬಿಜೆಪಿಯ ರಂಗಾ ಬದ್ದಿ, ವಿಜಯಾನಂದ ಶೆಟ್ಟಿ, ಪ್ರಕಾಶ ಗೊಡಬೋಲೆ, ಈರೇಶ ಅಂಚಟಗೇರಿ, ಸಂಜಯ ಕಪಟಕರ, ಮೋಹನ ರಾಮದುರ್ಗ, ಅಭಜಿತ್ ಲಾಡ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.