ADVERTISEMENT

ನೀರಾವರಿ ವಿಚಾರದಲ್ಲಿ ಸಂಶಯ ಬೇಡ: ಉತ್ತರ ಕರ್ನಾಟಕದ ಜನರಿಗೆ ಮುಖ್ಯಮಂತ್ರಿ ಮನವಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 15:50 IST
Last Updated 4 ಜನವರಿ 2019, 15:50 IST
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರಕಂಬಾರ ಅವರ ಭಾವಚಿತ್ರದ ಕಲಾಕೃತಿಯನ್ನು ಬಿಡುಗಡೆ ಮಾಡಿದರು.– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರಕಂಬಾರ ಅವರ ಭಾವಚಿತ್ರದ ಕಲಾಕೃತಿಯನ್ನು ಬಿಡುಗಡೆ ಮಾಡಿದರು.– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್   

ಮಂಗಳೂರು: ‘ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ನಮ್ಮ ಸರ್ಕಾರ ಪ್ರಬಲ ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಉತ್ತರ ಕರ್ನಾಟಕದ ಜನರು ರಾಜ್ಯ ಸರ್ಕಾರದ ಬಗೆಗೆ ಸಂಶಯಪಡುವುದು ಬೇಡ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆರಂಭವಾದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಎರಡೂ ನೀರಾವರಿ ಯೋಜನೆಗಳಿಗೆ ಒಂದಷ್ಟು ತೊಡಕುಗಳಿವೆ. ಅವುಗಳನ್ನು ನಿವಾರಣೆ ಮಾಡಿದರೆ ಮಾತ್ರ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸಲು ಸಾಧ್ಯ. ಆ ದಿಸೆಯಲ್ಲಿ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.

ಮಹದಾಯಿ ನದಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿ ಐತೀರ್ಪು ನೀಡಿದೆ. ಆದರೆ, ಅದನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥ ಆಗುವವರೆಗೂ ಐತೀರ್ಪು ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಂತಿಲ್ಲ. ಅದು ಅಗದಿದ್ದರೆ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳುವುದು ಅಸಾಧ್ಯ. ಈ ಕಾರಣದಿಂದ ಗೋವಾ ಸರ್ಕಾರದ ಅರ್ಜಿಯ ತೆರವಿಗೆ ಪ್ರಬಲ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕೃಷ್ಣಾ ನದಿ ನೀರಿನ ಹಂಚಿಕೆ ಸಂಬಂಧ 2010ರಲ್ಲಿ ತೀರ್ಪು ಬಂದಿತು. ಈವರೆಗೂ ರಾಜ್ಯದ ಪಾಲಿನ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲು ಆಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಭೂಸ್ವಾಧೀನಕ್ಕಾಗಿಯೇ ₹ 65,000 ಕೋಟಿ ಬೇಕಿದೆ. ಇಡೀ ಯೋಜನೆಗೆ ₹ 1.50 ಲಕ್ಷ ಕೋಟಿ ಅಗತ್ಯವಿದೆ. ರಾಜ್ಯ ಸರ್ಕಾರ ಈಗ ನೀರಾವರಿ ಯೋಜನೆಗಳಿಗೆ ಒದಗಿಸುತ್ತಿರುವ ಅನುದಾನದ ಪ್ರಮಾಣ ಆಧರಿಸಿ ಹೇಳುವುದಾದರೆ 50 ವರ್ಷ ಕಳೆದರೂ ಯೋಜನೆ ಮುಗಿಯುವುದಿಲ್ಲ ಎಂದರು.

‘ಕೇಂದ್ರ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಹೆಚ್ಚಿನ ಅನುದಾನ ದೊರೆಯುತ್ತದೆ. ಉತ್ತರ ಕರ್ನಾಟಕದ ಜನರಿಗೆ ಸ್ವಾಭಿಮಾನದ ಬದುಕನ್ನು ನೀಡುವ ಉದ್ದೇಶದಿಂದ ಅಂತಹ ಘೋಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಇತ್ತೀಚೆಗೆ ಭೇಟಿ ಮಾಡಿದ್ದಾಗ ಮನವಿ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಹೆಸರು: ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿದ್ಧಾರೂಢ ಸ್ವಾಮೀಜಿಯವರ ಹೆಸರು ಇಡಬೇಕೆಂಬ ಒತ್ತಾಯವಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಕಲಬುರ್ಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಸಿದ್ಧವಾಗಿವೆ. ಅಲ್ಲಿಂದ ಹೆಚ್ಚಿನ ವಿಮಾನಗಳ ಹಾರಾಟ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಿಜಯಪುರ ಮತ್ತು ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿ ತ್ವರಿತವಾಗಿ ನಡೆಯುತ್ತಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಗಳನ್ನು ಸ್ಥಾಪಿಸಿ, ಬಡವರಿಗೆ ಒಳ್ಳೆಯ ಚಿಕಿತ್ಸೆ ಕೈಗೆಟುಕುವಂತೆ ಮಾಡುವ ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯವಿಲ್ಲದೇ ಅಖಂಡ ಕರ್ನಾಟಕ ಸಮೃದ್ಧವಾಗಬೇಕು ಎಂಬ ವಿಶ್ವಾಸದಿಂದ ತಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ಸಿ.ಎಸ್‌.ಶಿವಳ್ಳಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮೇಯರ್ ಸುಧೀರ್ ಸರಾಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಅರವಿಂದ ಬೆಲ್ಲದ, ಅಬ್ಬಯ್ಯ ಪ್ರಸಾದ, ಅಮೃತ ದೇಸಾಯಿ, ಶ್ರೀನಿವಾಸ ಮಾನೆ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ.ನಿಂಬಣ್ಣವರ್‌, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ್‌ ಶೆಟ್ಟರ್, ಎಸ್‌.ವಿ.ಸಂಕನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಬಿ.ಬಸವರಾಜು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಪತಿ ಡಾ.ಎಂ.ಬಿ.ಚೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.