ADVERTISEMENT

ಪತಿಯ ಅಭಿವೃದ್ಧಿ ಕನಸು ನನಸಾಗಿಸುವೆ: ಕುಸುಮಾವತಿ ಶಿವಳ್ಳಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 19:47 IST
Last Updated 16 ಮೇ 2019, 19:47 IST
ಕುಸುಮಾವತಿ ಶಿವಳ್ಳಿ
ಕುಸುಮಾವತಿ ಶಿವಳ್ಳಿ   

ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಆಕಸ್ಮಿಕ ನಿಧನದಿಂದಾಗಿ, ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ್ದಾರೆ. ಜೆಡಿಎಸ್ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಅವರು ಬಿಡುವಿಲ್ಲದೆ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ‘ಅನುಕಂಪದ ಅಲೆ ಜತೆಗೆ, ಪತಿ ಶಿವಳ್ಳಿ ಅವರ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆ’ ಎನ್ನುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಂತಿದೆ.

* ಆಕಸ್ಮಿಕವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದೀರಿ. ಹೇಗನ್ನಿಸುತ್ತಿದೆ?

ರಾಜಕೀಯಕ್ಕೆ ಬರುತ್ತೇನೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ಪತಿಯ ಹಿಂದಿದ್ದುಕೊಂಡು ಪೂರಕವಾಗಿ ಕೆಲ ಕೆಲಸಗಳನ್ನು ನಿರ್ವಹಿಸುತ್ತಿದ್ದೆ. ಆದರೆ, ಅವರ ಹಠಾತ್ ನಿಧನ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಕ್ಷೇತ್ರದ ಜನರ ಒತ್ತಾಸೆ ಮೇರೆಗೆ ಸ್ಪರ್ಧಿಸಿದ್ದೇನೆ. ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಜನ ಪತಿ ಬಗ್ಗೆ ಅವರು ಆಡುವ ಮೆಚ್ಚುಗೆಯ ಮಾತುಗಳು ಹಾಗೂ ನನಗೆ ತೋರುತ್ತಿರುವ ಪ್ರೀತಿ ಗೆಲುವಿನ ವಿಶ್ವಾಸವನ್ನು ಇಮ್ಮಡಿಗೊಳಿಸಿವೆ.

ADVERTISEMENT

* ಸಮ್ಮಿಶ್ರ ಸರ್ಕಾರಕ್ಕೆ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿರುವುದರಿಂದ, ನಿಮ್ಮ ಅಸ್ತಿತ್ವ ಇಲ್ಲಿ ಗೌಣವಾಗಿದೆಯಲ್ಲವೇ?

ಸರ್ಕಾರಕ್ಕಷ್ಟೇ ಅಲ್ಲ, ನನಗೂ ಈ ಚುನಾವಣೆಯ ಗೆಲುವು ಪ್ರತಿಷ್ಠೆಯ ವಿಷಯವಾಗಿದೆ. ಅದಕ್ಕಾಗಿಯೇ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಾದಿಯಾಗಿ ಸಂಪುಟದ ಸಚಿವರು ಬಂದು ಇಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನಾಯಕರು ಅವರ ಮಟ್ಟದಲ್ಲಿ ಹಾಗೂ ನಾನು ನನ್ನ ಮಟ್ಟದಲ್ಲಿ ಮತದಾರರನ್ನು ತಲುಪುತ್ತಿದ್ದೇವೆ. ಇಲ್ಲಿ, ನಾನು ಗೌಣವಾಗಿದ್ದೇನೆ ಎಂಬ ಮಾತೇ ಬರುವುದಿಲ್ಲ.

* ನೀವು ಶಿವಳ್ಳಿ ಪತ್ನಿ ಎಂಬ ಕಾರಣಕ್ಕೆ ಟಿಕೆಟ್ ಕೊಟ್ಟಿದ್ದಕ್ಕೆ ಕೆಲವರಲ್ಲಿ ಅಸಮಾಧಾನ ಇದೆ. ಇದು ನಿಮಗೆ ಮುಳುವಾಗುವುದಿಲ್ಲವೇ?

ಪತಿ ನಿಧನದ ಬಳಿಕ, ಮುಂದೇನು ಅಂದುಕೊಂಡು ನಾನು ಮನೆಯಲ್ಲಿದ್ದೆ. ಆಗ ಪಕ್ಷದವರೇ ಮನೆಗೆ ಬಂದು ಚುನಾವಣೆಗೆ ನೀನೇ ನಿಲ್ಲಬೇಕು ಎಂದು ಒತ್ತಾಯ ಮಾಡಿದರು. ಜತೆಗೆ, ಕ್ಷೇತ್ರದ ಜನರೂ ಒತ್ತಡ ಹೇರಿದರು. ಹಾಗಾಗಿ, ಚುನಾವಣೆ ಸ್ಪರ್ಧಿಸಲು ಒಪ್ಪಿಕೊಂಡೆ. ಆಕಾಂಕ್ಷಿಗಳಾಗಿದ್ದವರೊಂದಿಗೆ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ಮನವೊಲಿಸಿದ್ದಾರೆ. ಅವರೆಲ್ಲರೂ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ವಿಷಯದಲ್ಲಿ ಯಾರೂ ಮುನಿಸಿಕೊಂಡಿಲ್ಲ.

* ಶಿವಳ್ಳಿ ಅವರ ಅನುಪಸ್ಥಿತಿಯ ಅನುಕಂಪ ನಿಮ್ಮ ಕೈ ಹಿಡಿಯುವುದೇ?

ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಸುತ್ತಾಡಿದಾಗ ಜನರಿಗೆ ನನ್ನ ಮೇಲೆ ಅನುಕಂಪದ ಜತೆಗೆ, ಪತಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಅಭಿಮಾನವಿದೆ. ಹಾಗಾಗಿ, ಅನುಕಂಪದ ಜತೆಗೆ ಅಭಿವೃದ್ಧಿಯೂ ನನ್ನನ್ನು ಗೆಲುವಿನ ದಡ ಸೇರಿಸುತ್ತದೆ ಎಂಬ ವಿಶ್ವಾಸವಿದೆ.

* ಯಾವ ವಿಷಯದ ಮೇಲೆ ಮತ ಕೇಳುತ್ತಿದ್ದೀರಾ?

ಪತಿ ಶಿವಳ್ಳಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಹಗಲಿರುಳೆನ್ನದೆ ಮಾಡಿರುವ ಜನಸೇವೆಯ ಆಧಾರದ ಮೇಲೆ ಮತ ಕೇಳುತ್ತಿರುವೆ. ರಸ್ತೆಗಳ ಅಭಿವೃದ್ಧಿ, ಕೃಷಿ ಹೊಂಡಗಳು, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನಗಳ ನಿರ್ಮಾಣ, ಕ್ಷೇತ್ರಕ್ಕೆ ತಂದಿರುವ ಅನುದಾನ, ರೈತರ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದೇನೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನು?

ಪತಿಯ ಅಭಿವೃದ್ಧಿ ಕನಸುಗಳನ್ನು ನನಸು ಮಾಡುವುದೇ ನನ್ನ ಗುರಿ. ಎಪಿಎಂಸಿ ಮಾರುಕಟ್ಟೆ ಮೇಲ್ದರ್ಜೆಗೇರಿಸಿ ಕುಂದಗೋಳದಲ್ಲೇ ಮೆಣಸಿನಕಾಯಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದು. ಅರ್ಧಕ್ಕೆ ನಿಂತಿರುವ ಬಡವರ ಆಶ್ರಯ ಮನೆಗಳ ಕೆಲಸ ಪೂರ್ಣಗೊಳಿಸುವುದು. ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜನರ ಸಮ್ಮುಖದಲ್ಲೇ ನೀಡಿದ್ದಾರೆ.

* ನಿಮಗೆ ರಾಜಕೀಯದ ಗಂಧ–ಗಾಳಿ ಗೊತ್ತಿಲ್ಲ. ಹಾಗಾಗಿ, ಗೆದ್ದರೂ ಕ್ಷೇತ್ರಕ್ಕೆ ಪ್ರಯೋಜನವಾಗದು ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ?

ಜನರು ನಡುವೆ ಇದ್ದುಕೊಂಡು ಮಾಡುವ ರಾಜಕೀಯ ನನಗೆ ಹೊಸತಾಗಿರಬಹುದು. ಆದರೆ, ಕ್ಷೇತ್ರದ ಜನರ ಸಂಪರ್ಕ ಇದೆ. ಪತಿ ಪರವಾಗಿ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ. ನನಗೆ ರಾಜಕೀಯ ಗೊತ್ತು ಎಂದು ಬಿಜೆಪಿಗೆಯವರಿಗೆ ಸಾಬೀತುಪಡಿಸುವ ಅಗತ್ಯವಿಲ್ಲ. ಇಷ್ಟಕ್ಕೂ ನನ್ನ ಬೆನ್ನಿಗೆ ಸ್ಥಳೀಯ ನಾಯಕರು ಹಾಗೂ ಸಮ್ಮಿಶ್ರ ಸರ್ಕಾರವೇ ನಿಂತಿದೆ. ಅಭಿವೃದ್ಧಿ ಕೆಲಸ ಮಾಡಲು ಇನ್ನೇನು ಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.