ಹುಬ್ಬಳ್ಳಿ: `ದ.ರಾ. ಬೇಂದ್ರೆ ಅವರ ಕಾವ್ಯಗಳಲ್ಲಿ ಇರುವ ಮಾನವೀಯತೆಯನ್ನು ನಾವು ಅನ್ವೇಷಿಸಬೇಕಿದೆ' ಎಂದು ಹಿರಿಯ ಸಾಹಿತಿ ಡಾ. ಕೆ. ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.
ನಗರದ ಬೇಂದ್ರೆ ಸಂಶೋಧನಾ ಸಂಸ್ಥೆಯು ಮಂಗಳವಾರ ಆಯೋಜಿಸಿದ್ದ ಡಾ. ದ.ರಾ. ಬೇಂದ್ರೆ ಅವರ 118ನೇ ಜನ್ಮದಿನಾಚರಣೆ ಹಾಗೂ ಡಾ. ಸದಾನಂದ ನಾಯಕ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಮೋದಲಕ್ಷ್ಮಿ ಧಾರವಾಡಕರ್ ಅವರು ಅನುವಾದಿಸಿದ, ಡಾ. ಸದಾನಂದ ನಾಯಕ್ ಅವರ `ಬೇಂದ್ರೆ ಕಾವ್ಯ-ಜೀವನ' ಕೃತಿಯ ಇಂಗ್ಲಿಷ್ ಅನುವಾದ `ಬೇಂದ್ರೆ: ಪೊಯಟ್ರಿ-ಲೈಫ್' ಕೃತಿಯನ್ನು ಅವರು ಬಿಡುಗಡೆ ಮಾಡಿದರು.
ಕೃಷ್ಣಾಜಿ ಕುರ್ತುಕೋಟಿ ಅವರ `ಬೇಂದ್ರೆ ಸಂಗೀತ ಪ್ರವೇಶಿಕಾ' ಕೃತಿ ಬಿಡುಗಡೆ ಮಾಡಿದ ಹಿರಿಯ ಭಾಷಾತಜ್ಞ ಡಾ. ಬಿ.ಬಿ. ಪುರೋಹಿತ್ `ಬೇಂದ್ರೆ ಕಾವ್ಯಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಕುರ್ತುಕೋಟಿ ಸಂಗೀತಕ್ಕೆ ಹೊಸ ಕೊಡುಗೆ ನೀಡಿದ್ದಾರೆ' ಎಂದರು.
ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ಶರ್ಮಾ, ಸಹ ನಿರ್ದೇಶಕ ಡಾ. ವಾಮನ ಬೇಂದ್ರೆ, ಲೇಖಕರಾದ ಕೃಷ್ಣಾಜಿ ಕುರ್ತುಕೋಟಿ, ಪ್ರಮೋದಲಕ್ಷ್ಮಿ ಧಾರವಾಡಕರ್, ಡಾ. ಸದಾನಂದ ನಾಯಕ್ ಅವರ ಪತ್ನಿ ಸರೋಜಿನಿ ನಾಯಕ್ ಇತರರು ಹಾಜರಿದ್ದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರಭಾ ಪೂಜಾರ್ ಹಾಗೂ ಭಾರತಿ ಜೋಶಿ ಬೇಂದ್ರೆ ಕಾವ್ಯಗಳನ್ನು ಹಾಡಿದರು. ಆಶಾ ರಮೇಶಭಟ್ ಹಾರ್ಮೋನಿಯಂನಲ್ಲಿ ಹಾಗೂ ಅಝಿಲ್ ಭಾತ್‌ಖಂಡೆ ತಬಲಾ ಸಾಥ್ ನೀಡಿದರು. ಗೀತಾ ದೀಪಕ್ ಆಲೂರು ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದರು. ಅನಂತ ದೇಶಪಾಂಡೆ ಏಕಪಾತ್ರಾಭಿನಯ ಮಾಡಿದರು. ಪ್ರೊ. ರವೀಂದ್ರ ಶಿರೋಳ್ಕರ್ ನಿರೂಪಿಸಿದರು. ಸಂಜಯ್ ಪ್ರಸಾದ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.