ಧಾರವಾಡ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ತಡರಾತ್ರಿ ಮಲಗಿ ನಾಲ್ಕು ಗಂಟೆಗಳ ನಿದ್ರೆಯ ನಂತರ ಬುಧವಾರ ಬೆಳಿಗ್ಗೆ ನಸುಕಿನಲ್ಲಿ ಎದ್ದು ಪ್ರಚಾರ ಕಾರ್ಯಕ್ಕೆ ಸಿದ್ಧಗೊಂಡಿದ್ದರು. ಹುರುಪಿನಲ್ಲಿದ್ದ ಅವರ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಿಂತಲೂ ಮೊದಲೇ ಇಲ್ಲಿನ ಸಾಧನಕೇರಿ ಬಳಿ ಇರುವ ಅವರ ಮನೆ ಮುಂದಿನ ಹಜಾರದಲ್ಲಿ, ಕೆಲವರು ಹುಲ್ಲು ಹಾಸಿನ ಮೇಲೆ ಹಾಕಲಾಗಿದ್ದ ಕುರ್ಚಿಯಲ್ಲಿ ಕುಳಿತು ಪತ್ರಿಕೆಗಳನ್ನು ಓದುತ್ತಾ ಚುನಾವಣೆ ಲೆಕ್ಕಾಚಾರ ಹಾಕುತ್ತಿದ್ದರು.
ಸ್ನಾನ, ಪ್ರಾರ್ಥನೆ ನಂತರ ಉಪಾಹಾರ ಮುಗಿಸಿದ ತಮಟಗಾರ, ನೇರವಾಗಿ ತಮ್ಮ ಕೋಣೆ ಸೇರಿಕೊಂಡರು. ಕೋಣೆಯೊಳಗೆ ಐದಾರು ಜನ ಇದ್ದರು. ಕೆಲವರು ಇಂದು ಹೋಗಬೇಕಾದ ಪ್ರದೇಶಗಳ ಕುರಿತು ಮಾಹಿತಿ ನೀಡುತ್ತಿದ್ದರು. ಇನ್ನೂ ಕೆಲವರು ತಾವು ವಹಿಸಿಕೊಂಡಿದ್ದ ಪ್ರಚಾರ ಕಾರ್ಯ ಕೆಲಸಗಳ ಕುರಿತು ವರದಿ ಒಪ್ಪಿಸುತ್ತಿದ್ದರು.
ಅದರ ನಡುವೆಯೇ ಬಂದ ವ್ಯಕ್ತಿಯೊಬ್ಬರು ತಮ್ಮ ಬಡಾವಣೆ ದೇವಸ್ಥಾನಕ್ಕೆ ಹೆಚ್ಚುವರಿ ಹಣ ನೀಡುವಂತೆ ಬೇಡಿಕೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ತಮಟಗಾರ, ‘ದೇವಸ್ಥಾನಕ್ಕೆ ಈ ಹಿಂದೆ ಸಾಕಷ್ಟು ಹಣ ನೀಡಲಾಗಿದೆ. ಚುನಾವಣೆ ಹೊತ್ತಿನಲ್ಲಿ ಹಣ ನೀಡುವುದು ಸರಿಯಾಗುವುದಿಲ್ಲ. ನಂತರ ಈ ಕುರಿತು ತೀರ್ಮಾನಿಸಲಾಗುವುದು' ಎಂದು ಹೇಳಿ ಕಳುಹಿಸಿದರು.
ಪತಿಯ ಕ್ಷೇತ್ರ ಪ್ರಚಾರಕ್ಕೆ ಬೇಕಾದ ಸಾಮಗ್ರಿಗಳನ್ನು ಪತ್ನಿ ಪೂರ್ಣಿಮಾ (ರುಖಯಾ) ಸಿದ್ಧಪಡಿಸಿ ಕಾರು ಚಾಲಕನಿಗೆ ನೀಡಿದರು. ಜತೆಗೆ ತಾವೂ ಮತಪ್ರಚಾರಕ್ಕೆ ಸಿದ್ಧಗೊಂಡರು. ತಮ್ಮ ಇಕ್ಬಾಲ್ ಅಣ್ಣನ ಪ್ರಚಾರ ಕಾರ್ಯಕ್ಕೆ ಸಕಲ ಸಿದ್ಧತೆ ನಡೆಸಿದರು. ಮನೆಯಿಂದ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರ ಜಯಘೋಷ ಮೊಳಗಿತು. ಕಾರ್ಯಕರ್ತರ ಕೆಲ ತಂಡಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ತಮಟಗಾರ, ಪ್ರತಿಯೊಬ್ಬರಿಂದಲೂ ಮಾಹಿತಿ ಸಂಗ್ರಹಿಸಿದರು. ಪ್ರತಿ ವಾರ್ಡ್‌ನ ಪ್ರತಿಯೊಂದು ಮನೆಗೂ ಭೇಟಿ ನೀಡುವಂತೆ ಸೂಚನೆ ನೀಡಿದರು.
ಈ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸ್ವಚ್ಛ ಹಾಗೂ ಸುಂದರ ನಗರ ಮಾಡಬೇಕು ಎಂಬುದೇ ನನ್ನ ಕನಸು. ಮೈಸೂರು ಹಾಗೂ ಮಂಗಳೂರು ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದುಕೊಂಡಿದ್ದೇನೆ. ಸೂಪರ್ ಮಾರುಕಟ್ಟೆ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳುತ್ತಲೇ ಸಾಕಷ್ಟು ವರ್ಷಗಳಾದವು. ಆದರೆ ಅಲ್ಲಿಯ ಕೆಲವರ ವಿರೋಧದಿಂದಾಗಿ ಅದು ನೆನೆಗುದಿಗೆ ಬಿದ್ದಿದೆ. ಮುಂದಿನ ಬಾರಿ ನಾನು ಸೋತರೂ ಪರವಾಗಿಲ್ಲ, ಹುಬ್ಬಳ್ಳಿ ಧಾರವಾಡವನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ. ಎಂಥದ್ದೇ ವಿರೋಧವಿದ್ದರೂ ಸೂಪರ್ ಮಾರುಕಟ್ಟೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದು ಶತಃಸಿದ್ಧ’ ಎಂದರು.
ಕಾರು ಏರಿದವರೇ ನೇರವಾಗಿ ಕೆಲಗೇರಿಗೆ ತೆರಳಿ ಅಲ್ಲಿನ ಬಡಾವಣೆಗಳಲ್ಲಿ ಮತಯಾಚಿಸಿದರು. ಮಾಳಮಡ್ಡಿಗೆ ತೆರಳಿ ರಾಯರ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಅಲ್ಲಿನ ಭಕ್ತರು, ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಮತಯಾಚಿಸಿದರು. ರಾಯರ ಮಠದಲ್ಲಿ ಕೆಲ ಹೊತ್ತು ಕೂತು ಗೆಲುವಿಗಾಗಿ ಪ್ರಾರ್ಥನೆ ಮಾಡಿಕೊಂಡರು.
ಅಲ್ಲೇ ಪಕ್ಕದಲ್ಲಿರುವ ಗೌಳಿಗಲ್ಲಿಗೆ ಭೇಟಿ ನೀಡಿದ ಅವರು ಗೌಳಿ ಸಮುದಾಯದ ಬೆಂಬಲ ಕೋರಿದರು. ಅಲ್ಲಿಂದ ಸೈದಾಪುರ, ಮರಾಠ ಕಾಲೋನಿ, ಕೊಂಡವಾಡ ಗಲ್ಲಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಭೇಟಿ ನೀಡಿದರು. ಬಹಿರಂಗ ಪ್ರಚಾರ ಕೊನೆಗೆ ಒಂದು ದಿನ ಮಾತ್ರ ಬಾಕಿ ಇದ್ದುದರಿಂದ ಪ್ರಚಾರ ಕಾರ್ಯದಲ್ಲಿ ವೇಗ ಪಡೆದುಕೊಂಡಿತ್ತು. ಕ್ರೀಡಾಪಟುವಾಗಿರುವ ತಮಟಗಾರ ಕೂಡ ಕಾಲಿಗೆ ವೇಗ ನೀಡಿದ್ದರು. ಇಂದೊಂದು ಬಾರಿ ತನಗೆ ಆಶೀರ್ವಾದ ಮಾಡಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.
ನಂತರ ಕಿಲ್ಲಾದಲ್ಲಿರುವ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿ ಮಂಗಳಾರತಿ ಮಾಡಿಸಿದರು. ಅಲ್ಲಿ ಸೇರಿದ್ದ ಭಕ್ತರಲ್ಲಿ ಮತಯಾಚಿಸಿದರು. ಹಾಗೆಯೇ ಪ್ರಚಾರ ಕಾರ್ಯ ಭರದಿಂದ ಸಾಗಿತ್ತು. ಸಂಜೆಯಾದರೂ ತಮಟಗಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪುಟಿದೇಳುತ್ತಿದ್ದರು.
**
ಅಮಿತ್ ಶಾ ಮೇಲೂ ಆರೋಪಗಳಿವೆ
‘ನನ್ನ ಮೇಲೆ ಹಲವು ಆರೋಪಗಳಿವೆ ಎಂದು ವಿರೋಧಿಗಳು ಹೇಳುತ್ತ ಮತ ಕೇಳುತ್ತಿದ್ದಾರೆ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಲೂ ಸಾಕಷ್ಟು ಆರೋಪಗಳಿವೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ರಾಜ್ಯ ಘಟಕದ ನಾಯಕರ ಮೇಲೂ ಮೊಕದ್ದಮೆಗಳಿವೆ. ಹೀಗಿರುವಾಗಿ ಅವರದ್ದನ್ನು ಹೇಳಿಕೊಳ್ಳುವುದನ್ನು ಬಿಟ್ಟು ನನ್ನ ವಿರುದ್ಧ ಹೇಳುವುದು ಇವರ ಸೋಲಿನ ಭೀತಿಯನ್ನು ತೋರಿಸುತ್ತದೆ’ ಎಂದು ತಮಟಗಾರ ಆಕ್ರೋಶದಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.