ADVERTISEMENT

ಶರಣ ಸಾಹಿತ್ಯ ಸಮ್ಮೇಳನ ಡಿ 13ರಿಂದ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2013, 8:03 IST
Last Updated 21 ಅಕ್ಟೋಬರ್ 2013, 8:03 IST

ಹುಬ್ಬಳ್ಳಿ: 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಡಿಸೆಂಬರ್ 13,14 ಹಾಗೂ 15ರಂದು ಧಾರವಾಡದಲ್ಲಿ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಗುರುಶಾಂತಯ್ಯ ವೀರಭದ್ರಯ್ಯ ತಿಳಿಸಿದರು.

ನಗರದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ತಾಲ್ಲೂಕು ಘಟಕದ ವತಿಯಿಂದ ನಡೆದ ಚಿಂತನ ಗೋಷ್ಠಿಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿಂದಿನ ಸಮ್ಮೇಳನ ಮುಂಬೈನಲ್ಲಿ ನಡೆದಿದ್ದು, ಈ ಬಾರಿ ಧಾರವಾಡದ ಮುರುಘಾಮಠದ ಆತಿಥ್ಯದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಆತ್ಮಕ್ಕೆ ಆನಂದ ಮತ್ತು ಸಂಸ್ಕಾರ ನೀಡುವುದೇ ಸಾಹಿತ್ಯ.  ಸಮಾಜದಲ್ಲಿ ಸುಧಾರಣೆ ಹಾಗೂ ಪರಿವರ್ತನೆ ತರುವುದು ಶರಣ ಸಾಹಿತ್ಯದ ಮುಖ್ಯ ಆಶಯವಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡ ಭಾಷೆ ನೀಡಿದ ಶ್ರೇಷ್ಠ ಕೊಡುಗೆ ಎಂದರೆ ಶರಣ ಸಾಹಿತ್ಯ. ಶರಣರ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಪರಿಷತ್ ಮಾಡುತ್ತಿದ್ದೆ. ಇನ್ನು ಮುಂದೆ ಪ್ರತೀ ತಿಂಗಳು ಮೂರನೇ ಭಾನುವಾರ ಚಿಂತನಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದರು.

ಕಾಯಕ–ದಾಸೋಹ, ಸಮಾನತೆಯ ತತ್ವವನ್ನು ಸಾರಿ ನುಡಿದಂತೆ ನಡೆದವರು ಶರಣರು. ಎಲ್ಲಾ ಜಾತಿ,ಧರ್ಮ, ವರ್ಗದವರಿಗೂ ಪರಿಷತ್‌ ನ ಆಜೀವ ಸದಸ್ಯತ್ವ ನೀಡಲಾಗುವುದು. ಪರಿಷತ್ ನಲ್ಲಿ ಈಗಾಗಲೇ 450 ದತ್ತಿಗಳು ಇವೆ ಎಂದು ತಿಳಿಸಿದರು.

ಸಮಾರಂಭದ ಸಾನಿಧ್ಯವನ್ನು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಪೀಠದ ಸಂಯೋಜಕ ಡಾ.ವೀರಣ್ಣ ರಾಜೂರ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಚೌಶೆಟ್ಟಿ, ಕಾರ್ಯದರ್ಶಿ ಡಾ.ಶಂಭು ಹೆಗಡಾಳ, ಕಾರ್ಯಾಧ್ಯಕ್ಷ ಚಂದ್ರಕಾಂತ ಹುಬ್ಬಳ್ಳಿ, ಕಾರ್ಯದರ್ಶಿ ಶಿವಪುತ್ರಪ್ಪ ಆಶಿ, ಸಾಹಿತಿ ನಿರಂಜನ ವಾಲಿಶೆಟ್ಟರ, ಸಿದ್ದಣ್ಣ ಮೆಣಸಿನಕಾಯಿ ಹಾಜರಿದ್ದರು.

ಗಾಯತ್ರಿ ದೇಶಪಾಂಡೆ ತಂಡದವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.