ADVERTISEMENT

ಶಿವಾನಂದ ಗಾಳಿ ಸಾಹಿತ್ಯ ಸಮ್ಮೇಳನಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 11:20 IST
Last Updated 7 ಏಪ್ರಿಲ್ 2014, 11:20 IST

ಧಾರವಾಡ: ಇಲ್ಲಿಯ ಸುಂದರ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾಲ್ಕು ಅವಧಿಗೆ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಡಾ.ಶಿವಾನಂದ ಗಾಳಿ ಅವರನ್ನು ಒಂಬತ್ತನೇ     ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ   ಮಾಡಲಾಗಿದೆ.

ಸಮ್ಮೇಳನವು ಬರುವ ಮೇ 5–6ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರ ನೇತೃತ್ವದಲ್ಲಿ ಭಾನುವಾರ ಗಾಳಿ ಅವರ ಧಾರವಾಡಕ್ಕೆ ನಿವಾಸಕ್ಕೆ ಬಂದ ಕಸಾಪ ಪದಾಧಿಕಾರಿಗಳು ಹಾಗೂ ಹಿರಿ ಕಿರಿಯ ಸಾಹಿತಿಗಳನ್ನು ಗಾಳಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು.

ಇತ್ತೀಚೆಗೆ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹುಬ್ಬಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್‌.ಕೌಜಲಗಿ ಅವರು ಗಾಳಿ ಅವರ ಹೆಸರನ್ನು ಸೂಚಿಸಿದ್ದರು. ಸಭೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಡಾ.ವೀಣಾ ಶಾಂತೇಶ್ವರ, ಬಿ.ಎಸ್‌.ಸೊಪ್ಪಿನ, ಮೋಹನ ನಾಗಮ್ಮನವರ, ಅನಿಲ ದೇಸಾಯಿ, ಎಂ.ಡಿ.ಒಕ್ಕುಂದ ಸೇರಿದಂತೆ ಹಲವರು ಗಾಳಿ ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.

ನರಗುಂದದ ಸಿದ್ಧೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು, ಧಾರವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕರ್ನಾಟಕ ವಿ.ವಿ.ಯ ಡಾ.ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರವಾಚಕರಾಗಿ, ಜೈನಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕರಾಗಿ, ಪ್ರಸಾರಾಂಗದ ಪ್ರಭಾರ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸುಂದರ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ ಹಲವು ಮೌಲಿಕ ಕೃತಿಗಳನ್ನು ಹೊರತಂದಿದ್ದಾರೆ. ಗಾಳಿ ಅವರು ಮೂಲತಃ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.