ಹುಬ್ಬಳ್ಳಿ: ಅವಳಿ ನಗರದ ಮಾರುಕಟ್ಟೆಗಳಲ್ಲಿ ಸೊಪ್ಪುಗಳನ್ನು ಹೊರತು ಪಡಿಸಿದರೆ ಉಳಿದ ತರಕಾರಿಗಳು ದುಬಾರಿಯಾಗಿವೆ. ನೀರಿನ ಸಮಸ್ಯೆಯಿಂದ ಸ್ಥಳೀಯ ರೈತರು ಜವಾರಿ ತರಕಾರಿ ಬೆಳೆಯದಿರುವುದರಿಂದ ಹಾಗೂ ದುಬಾರಿ ದರದಿಂದ ನಿತ್ಯ ಸ್ಥಳೀಯ ಅಂಗಡಿಗಳಿಗೆ ತಾಜಾ ಕಾಯಿಪಲ್ಲೆ ಬರುತ್ತಿಲ್ಲ. ಇದರಿಂದ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದೆ.
ಮಾರುಕಟ್ಟೆಯಲ್ಲಿ ಚಪ್ಪರೆ ಅವರೆಕಾಯಿ ಭರ್ಜರಿಯಾಗಿ ಬಂದಿದೆ. ಆದರೆ ಬೇಡಿಕೆ ಇಲ್ಲ. ಸ್ಥಳೀಯವಾಗಿ ಬದನೆಕಾಯಿ, ಟೊಮೆಟೊ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಆದ್ದರಿಂದ ಇವುಗಳ ದರ ಕಡಿಮೆಯಾಗಿದೆ. ಇನ್ನುಳಿದಂತೆ ಸೊಪ್ಪು ಕಟ್ಟೊಂದಕ್ಕೆ ₹ 4 ಇದೆ. ಮೂಲಂಗಿ, ಎಲೆಕೋಸು ಧಾರಣೆ ಮಾತ್ರವೇ ₹ 15ರಿಂದ 20ರ ಆಸುಪಾಸಿನಲ್ಲಿದೆ.
ಉಳಿದ ತರಕಾರಿಗಳ ಧಾರಣೆಯು ₹ 50ರಿಂದ 70ಕ್ಕೆ ಮುಟ್ಟಿದೆ. ಇನ್ನು ಜವಾರಿ ದೊಣ್ಣ ಮೆಣಸಿನಕಾಯಿ ಕೆ.ಜಿ.ಗೆ ₹ 70 ತಲುಪಿದರೆ, ಚವಳಿಕಾಯಿ ₹ 80ಕ್ಕೆ ಮುಟ್ಟಿ ಅತಿ ದುಬಾರಿ ತರಕಾರಿಯಾಗಿವೆ.
ಚಳಿಗಾಲದಲ್ಲಿ ತರಕಾರಿ ಬೆಲೆ ಇಳಿಮುಖವಾಗುವುದಿಲ್ಲ. ಆದರೆ ಮುಂದಿನ ತಿಂಗಳು ಕೂಡ ದರ ಸ್ಥಿರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಇನ್ನು ಮಹಾರಾಷ್ಟ್ರದ ಈರುಳ್ಳಿ ಜೊತೆ ಸ್ಥಳೀಯ ಈರುಳ್ಳಿ ಆವಕ ಇರುವುದರಿಂದ ದರ ಸ್ಥಿರವಾಗಿದೆ.
ಬಾಳೆ ಹಣ್ಣು ದುಬಾರಿ: ಮಾರುಕಟ್ಟೆಯಲ್ಲಿ ಬಾಳೆ ಹಣ್ಣು ಕಳೆದ ತಿಂಗಳಿಗಿಂತ ಬಾರಿ ದುಬಾರಿಯಾಗಿದೆ. ಭೂಮಿಯ ಫಲವತ್ತತೆ ಹಾಳಾಗಿರುವುದು ಬಾಳೆ ಹಣ್ಣು ಇಳುವರಿ ಕುಂಠಿತಗೊಳ್ಳಲು ಕಾರಣ ಎಂದು ರೈತರು ಹೇಳುತ್ತಿದ್ದಾರೆ ಎನ್ನುತ್ತಾರೆ ಧಾರವಾಡದ ವ್ಯಾಪಾರಿ ಅಣ್ಣಪ್ಪ.
ಪಚ್ಚ ಬಾಳೆ ಹಣ್ಣು ಡಜನ್‌ಗೆ ₹ 30ರಿಂದ 35ದರವಿದೆ. ಸದ್ಯ ಆಂಧ್ರಪ್ರದೇಶ, ಹಾವೇರಿಯಿಂದ ಹಾನಗಲ್ ಕಡೆಯಿಂದ ಜಿಲ್ಲೆಗೆ ಬಾಳೆ ಹಣ್ಣು ಬರುತ್ತಿದೆ. ಆದರೆ ಆವಕ ಪ್ರಮಾಣ ಕಡಿಮೆಯಿದೆ. ಈಗಾಗಲೇ ಕೆಲ ಬಾರಿ ನಷ್ಟವು ಆಗಿದೆ ಎನ್ನುತ್ತಾರೆ ವರ್ತಕರು.
ಕ್ವಿಂಟಲ್‌ಗೆ ಯಾಲಕ್ಕಿ ಬಾಳೆ ಹಣ್ಣು ₹ 3,500, ಪಚ್ಚ ಬಾಳೆ ₹ 1,600 ಇದೆ. ಒಂದು ಟಾಟಾ ಏಸ್ ವಾಹನವನ್ನು ತುಂಬಿಸಿಕೊಳ್ಳಲು ನಾವು ಐದಾರು ಹೊಲಗಳನ್ನು ಅಲೆಯಬೇಕಾಗಿದೆ ಎನತ್ತಾರೆ ವರ್ತಕರು. ಇದನ್ನು ಹೊರತುಪಡಿಸಿದರೆ ದಾಳಿಂಬೆ ಕೆ.ಜಿ.ಗೆ ₹ 120 ತಲುಪಿದೆ.
ಹುಬ್ಬಳ್ಳಿ ಧಾರವಾಡಕ್ಕೆ ಪಂಢರಾಪುರ ಕಡೆಯಿಂದಲೂ ದಾಳಿಂಬೆ ಬರುತ್ತಿದೆ. ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ಇವರ ದಾಳಿಂಬೆ ಕೆ.ಜಿ.ಗೆ ₹ 100 ದರವಿದೆ. ಇನ್ನು ವಿವಿಧ ತಳಿಯ ಸೇಬು ₹ 120ರಿಂದ 160 ಇದೆ.
ತೊಗರಿ, ಉದ್ದು ದರ ಸ್ಥಿರ: ಕೆ.ಜಿ.ಗೆ ₹ 120ರ ತನಕ ಇದ್ದ ತೊಗರಿ ದರವು ₹ 95ಕ್ಕೆ ಬಂದು ನಿಂತಿದೆ. ಇನ್ನು ಉದ್ದು 120 ಇದೆ. ಇನ್ನು ಕಡಲೆ ಕೆ.ಜಿ.ಗೆ ₹ 120ರ ತನಕ ತಲುಪಿದೆ. ಇನ್ನುಳಿದ ದಿನಸಿ ದರಗಳು ಬಹುತೇಕ ಸ್ಥಿರವಾಗಿವೆ.
ಹೂವಿನ ದರ ಏರಿಕೆ: ಮಲ್ಲಿಗೆ, ದಲಾಟಿ ಮಾರೊಂದಕ್ಕೆ ಈ ವಾರ ₹ 10ರಿಂದ ₹20 ಇತ್ತು. ಕೆ.ಜಿ ಗುಲಾಬಿ, ಮಲ್ಲಿಗೆ, ಚೆಂಡು ಹೂವಿಗೆ ಕಳೆದ ತಿಂಗಳಿಗಿಂತ ₹ 50ರಿಂದ 100ರಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ಕೆಲ ಮದುವೆ ಸಮಾರಂಭಗಳು ಎನ್ನುತ್ತಾರೆ ವ್ಯಾಪಾರಿಗಳು.
*
ಹೊಸ ವರ್ಷದ ಮೊದಲ ವಾರದಲ್ಲೂ ಧಾರಣೆ ಏರಿಕೆಯಾಗಿತ್ತು. ಈಗಲೂ ಯಾವುದೇ ತರಕಾರಿ ಖರೀದಿಸಿದರೂ 1 ಕೆಜಿಗೆ ₹50 ರಿಂದ 60 ನೀಡಬೇಕಿದೆ.
-ಪ್ರವೀಣ ಕಲ್ಲಪ್ಪನವರ,
ಗ್ರಾಹಕ
*
ಚಿಲ್ಲರೆ ಸಮಸ್ಯೆ ಕಡಿಮೆಯಾಗಿಲ್ಲ. ಇದರ ನಡುವೆ ₹ 10ರ ನಾಣ್ಯ ರದ್ದು ವದಂತಿಯು ವ್ಯಾಪಾರದ ಮೇಲೆ ಅಡ್ಡ ಪರಿಣಾಮ ಬೀರಿದೆ. ಬ್ಯಾಂಕ್ ಕೂಡಾ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ.
-ರಫೀಕ್,
ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.