ಹುಬ್ಬಳ್ಳಿ: ಜುಬ್ಬಾ ಧರಿಸಿ ಬಂದ ಹಿರಿಯ ಜೀವಿ; ಹೆಸರಾದ ಕವಿ ಒಂದು ಕಡೆ. ಜೀನ್ಸ್ ಪ್ಯಾಂಟ್, ತೋಳು ಮಡಚಿದ ಶರ್ಟ್ ಧರಿಸಿ ಹೊಸ ತಲೆಮಾರಿನ ಪ್ರತಿನಿಧಿಯಾಗಿ ಕುಳಿತ ಯುವತಿ ಇನ್ನೊಂದು ಕಡೆ. ಇವರಿಬ್ಬರ ನಡುವಿನ `ಸಮನ್ವಯ'ಕಾರರಾಗಿ ವೇದಿಕೆ ಹಂಚಿಕೊಂಡ ವೈದ್ಯರು, ಅಂಚೆ ನೌಕರರು, ಸರ್ಕಾರಿ ಅಧಿಕಾರಿ...ಟಿ-ಶರ್ಟ್ ಧಾರಿ.
ನಗರದಲ್ಲಿ ಭಾನುವಾರ ಸಂಜೆ ನಡೆದ ಅಕ್ಷರ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಂಟು ಮಂದಿ ಕವಿಗಳೂ ವಿಭಿನ್ನ, ವಿಶಿಷ್ಟ; ಅವರ ಕವಿತೆಗಳ ವಸ್ತುಗಳು ಕೂಡ.
ಹಿರಿಯ ಕವಿ ಎಂ.ಡಿ.ಗೋಗೇರಿ ಅವರಿಂದ ಹಿಡಿದು ಯುವ ಕವಯಿತ್ರಿ ಕಾವ್ಯಾ ಕಡಮೆ ಅವರ ವರೆಗಿನ ಕವಿಗಳು ವಾಚಿಸಿದ ಕವನಗಳಲ್ಲಿ ಹಾಸ್ಯ, ರೋಷ, ಟೀಕೆ, ವಿಡಂಬನೆ ಎಲ್ಲವೂ ಇತ್ತು. ಕೆಲವು ಕವಿತೆಗಳು ಕಾವ್ಯದ ಚೌಕಟ್ಟಿನಲ್ಲಿರದೆ ಗದ್ಯದ ರೂಪದಲ್ಲೇ ಉಳಿದವು. ಕೆಲವರು ಪ್ರಯಾಸದ ಓದಿನ ಮೂಲಕ ಗದ್ಯವನ್ನು ಪದ್ಯವಾಗಿಸಲು ಪ್ರಯತ್ನಿಸಿದರು. ಮೊದಲು ಕವನ ವಾಚನ ಮಾಡಿದ ಗೋಗೇರಿ ಅವರು ದೀರ್ಘ ಕಾವ್ಯದ ನಂತರ ಚುಟುಕುಗಳನ್ನು ಓದಿ ರಂಜಿಸಿದರು. ಬಸು ಬೇವಿನ ಗಿಡದ ಎರಡು ಭಾಗಗಳಲ್ಲಿ ಓದಿದ `ಆಕಾಶದ ಗುರುತು' ಕವಿತೆ ಅವ್ವನ ಅಗಾಧ ವಾತ್ಸಲ್ಯವನ್ನು ಬಿಂಬಿಸಿತು. ಶ್ರೀಪತಿ ಕಾಶೀಕರ ಅವರ `ಯಾರು ಮಾಡಿದನು ಈ ಕುಶಲ ಮಾಟವ' ಕವಿತೆಯಲ್ಲಿ ನುಡಿಮುತ್ತುಗಳನ್ನು ಕೋದು ಮಾಡಿದ ಅಧ್ಯಾತ್ಮ ಚಿಂತನೆ ಇತ್ತು. ಚನ್ನಪ್ಪ ಅಂಗಡಿ, ಡಾ.ಗೋವಿಂದ ಹೆಗಡೆ ಮತ್ತು ಸುಶೀಲೇಂದ್ರ ಕುಂದರಗಿ ಅವರ ಕವಿತೆಗಳು ಸದ್ಯದ ಸಾಮಾಜಿಕ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿ ಅದರ ಕಾರಣಕ್ಕೆ ವಿಷಾದವನ್ನು ಹೊರಸೂಸಿದವು.
ರೂಪಾ ಜೋಶಿ ಅವರು ನವಯುಗದ ಶಿಕ್ಷಣ, ಜೀವನ ಇತ್ಯಾದಿಗಳಿಗೆ ಅಂತ್ಯಪ್ರಾಸದ ಕವಿತೆಯ ಮೂಲಕ ಕನ್ನಡಿ ಹಿಡಿದರು. ಗಾಯತ್ರಿ ಅವರ `ಸ್ವಾಭಿಮಾನ' ಕವಿತೆಯ ನಂತರ ಕಾವ್ಯಾ ಕಡಮೆ ಓದಿದ `ಇಸ್ತ್ರಿ' ಮತ್ತು `ಕಪ್ಪು' ಕವಿತೆಗಳು ಕಾವ್ಯಾತ್ಮಕ ಶೈಲಿಯ ಮೂಲಕ ಗಮನ ಸೆಳೆದವು. ಕವಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಒಗ್ಗೂಡಿಸಿ...
ಅಕ್ಷರ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದ ಬೆಂಗಳೂರಿನ ಚಿಂತಕ ಡಾ. ಬಸವರಾಜ ಕಲ್ಗುಡಿ ಮಾತನಾಡಿ ರಾಜಕಾರಣಿಗಳು ಇಂದು ಸಮಾಜವನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿ ಒಡೆದಿದ್ದಾರೆ. ಭಿನ್ನವಾದ ಸಮಾಜವನ್ನು ಒಗ್ಗೂಡಿಸುವ ಕೆಲಸ ಸಾಹಿತಿಗಳು ಹಾಗೂ ಬರಹಗಾರರಿಂದ ನಡೆಯಬೇಕಿದೆ ಎಂದು ಹೇಳಿದರು.
ದಲಿತ, ಬಂಡಾಯ ಚಳವಳಿಯ ನಂತರ ಕನ್ನಡ ಸಾಹಿತ್ಯ ವಲಯದಲ್ಲಿ ಚೈತನ್ಯ ತುಂಬುವ ಮಹತ್ವದ ಕೆಲಸಗಳು ನಡೆಯಲಿಲ್ಲ ಎಂದು ಹೇಳಿದ ಅವರು, ಇಂದು ಭಾಷೆ ಹಾಗೂ ಸಾಹಿತ್ಯ ಬಹುತೇಕ ಲಯ ಕಳೆದುಕೊಂಡಿದೆ, ಕನ್ನಡವು ಸಾಮುದಾಯಿಕ ಭಾಷೆಯಲ್ಲಿ ಉಳಿಯುವ ಲಕ್ಷಣ ಕಾಣುತ್ತಿಲ್ಲ ಎಂದರು.
`ಭಾಷೆಯನ್ನು ಇಂದು ಸಮಾಜವು ಕ್ರಿಯಾತ್ಮಕವಾಗಿ ಬಳಸಿಕೊಳ್ಳುತ್ತಿಲ್ಲ. ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಮಹತ್ವದ ಸ್ಥಾನ ಇಲ್ಲದಾಗಿದೆ. ಹೀಗಾಗಿ ಯುವ ಸಮುದಾಯ ಕನ್ನಡ ಸಾಹಿತ್ಯವನ್ನು ಓದುವಂತೆ ಹಾಗೂ ಕೇಳುವಂತೆ ಮಾಡುವ ಕೆಲಸ ಆಗಬೇಕಿದೆ. ಬರಹದಲ್ಲಿ ಕಂಡುಬರುವ ಏಕತಾನತೆಯನ್ನು ನೀಗಿಸಬೇಕಾಗಿದೆ' ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, ಹೊಸ ಬಗೆಯ ಜೀವನ ಶೈಲಿಯು ತಲ್ಲಣಗಳನ್ನು ಸೃಷ್ಟಿಸಿದೆ. ಇದರ ನಡುವೆಯೂ ಯುವ ಎಂಜಿನಿಯರ್‌ಗಳು ಹಳಗನ್ನಡ ಕಲಿಯಲು ಮುಂದಾಗುವಂಥ ಬೆಳವಣಿಗೆಗಳು ಕಂಡುಬರುತ್ತಿರುವುದು ಖುಷಿಯ ವಿಷಯ ಎಂದು ಹೇಳಿದರು. ಸಾಹಿತ್ಯ ವೇದಿಕೆಯ ಅಧ್ಯಕ್ಷ ಆರೂರು ಲಕ್ಷ್ಮಣ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ. ಪ್ರಹ್ಲಾದ ಅಗಸನಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಜಗದೀಶ ಮಂಗಳೂರುಮಠ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.