ADVERTISEMENT

‘ಆಮದು ಸಿದ್ಧಾಂತ ಸಾಹಿತ್ಯಕ್ಕೆ ಸಲ್ಲ’

90ನೇ ವರ್ಷಕ್ಕೆ ಕಾಲಿಟ್ಟ ಡಾ.ಜಿ.ಎಸ್.ಆಮೂರರಿಗೆ ಧಾರವಾಡದಲ್ಲಿ ಅಭಿನಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜೂನ್ 2015, 6:00 IST
Last Updated 1 ಜೂನ್ 2015, 6:00 IST
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಜಿ.ಎಸ್‌.ಆಮೂರ ಅವರಿಗೆ ಅಭಿನಂದಿಸಲಾಯಿತು. ಚಿತ್ರದಲ್ಲಿ ಡಾ.ಎಚ್.ಎಸ್.ರಾಘವೇಂದ್ರ ರಾವ್, ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ಡಾ.ವೀಣಾ ಶಾಂತೇಶ್ವರ, ಡಾ.ಜಿ.ಎಂ.ಹೆಗಡೆ, ಡಾ.ಚೆನ್ನವೀರ ಕಣವಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಎಂ.ಎಸ್‌.ಆಶಾದೇವಿ, ಸಮೀರ ಜೋಶಿ ಇದ್ದಾರೆ
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಜಿ.ಎಸ್‌.ಆಮೂರ ಅವರಿಗೆ ಅಭಿನಂದಿಸಲಾಯಿತು. ಚಿತ್ರದಲ್ಲಿ ಡಾ.ಎಚ್.ಎಸ್.ರಾಘವೇಂದ್ರ ರಾವ್, ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ಡಾ.ವೀಣಾ ಶಾಂತೇಶ್ವರ, ಡಾ.ಜಿ.ಎಂ.ಹೆಗಡೆ, ಡಾ.ಚೆನ್ನವೀರ ಕಣವಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಎಂ.ಎಸ್‌.ಆಶಾದೇವಿ, ಸಮೀರ ಜೋಶಿ ಇದ್ದಾರೆ   

ಧಾರವಾಡ: ‘ತಂತ್ರಜ್ಞಾನದಂತೆ ಸಿದ್ಧಾಂತವನ್ನೂ ನಾವು ಪಾಶ್ಚಾತ್ಯರಿಂದ ಆಮದು ಮಾಡಿಕೊಂಡಿದ್ದೇವೆ. ಇದರ ಪರಿಣಾಮದಿಂದಾಗಿ ನಾವು ಹಾಗೂ ನಮ್ಮ ಸಾಹಿತ್ಯ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ’ ಎಂದು ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ಹೇಳಿದರು.

ಡಾ.ಅಣ್ಣಾಜಿರಾವ್‌ ಸಿರೂರ ರಂಗ ಮಂದಿರ ಪ್ರತಿಷ್ಠಾನ ಹಾಗೂ ಡಾ. ಜಿ.ಎಸ್‌.ಆಮೂರ ಅಭಿನಂದನಾ ಸಮಿತಿ ಭಾನುವಾರ ನಗರದ ಸೃಜನಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಈ ಹಿಂದಿನ 20ನೇ ಶತಮಾನದಲ್ಲಿ ಸಂಪ್ರದಾಯ ಹಾಗೂ ಆಧುನಿಕತೆ ಕುರಿತ ಚರ್ಚೆಗಷ್ಟೇ ಸಾಹಿತ್ಯ ವಲಯ ಸೀಮಿತ ವಾಯಿತು. ಈಗಲೂ ವಸಾಹತುಶಾಹಿಯ ಮೊದಲಿನ ಹಾಗೂ ನಂತರದ ವಿಷಯಗಳ ಕುರಿತ ಚರ್ಚೆಯಲ್ಲಿ ಮುಳುಗಿ ದ್ದಾರೆ. ನಾನು ರಚನಾ ಕೆಲಸದಲ್ಲಿ ತೊಡಗಿದ್ದೇನೆ. ಹೆಚ್ಚು ವೈಭವೀಕರಣ ವಿಲ್ಲದೆ ನನ್ನ ಮಿತಿಯಲ್ಲಿ ನಾನು ಕೃತಿಗಳನ್ನು ರಚಿಸಿದ್ದೇನೆ’ ಎಂದರು.

‌‌ಕಾರ್ಯಕ್ರಮದಲ್ಲಿ ‘ಸ್ವೀಕೃತಿ’, ‘ಕುವೆಂಪು ಯುಗದ ಕವಿ’ ಹಾಗೂ ‘ನೀರ ಮೇಲಣ ಗುಳ್ಳೆ’ ಎಂಬ ಮೂರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃತಿ ಪರಿಚಯ ಮಾಡಿದ ಡಾ.ಎಂ.ಎಸ್‌. ಆಶಾದೇವಿ, ‘ವಿಮರ್ಶೆಯ ವಿಶ್ವಾಸಾರ್ಹತೆ ಹೆಚ್ಚಿಸಿದವರು ಆಮೂರ ಅವರು. ಕನ್ನಡ ಸಾಹಿತ್ಯವನ್ನು ಪುನರ್‌ ರಚಿಸಿದ್ದರಿಂದಾಗಿ ಓದಿಸುವ ಕೆಲಸವನ್ನು ಮಾಡಿದರು.

ಇವರ ವಿಮರ್ಶಾ ಕೃತಿಗಳ ಓದಿನಿಂದ ಕನ್ನಡ ಸಾಹಿತ್ಯದ ಪ್ರದಕ್ಷಿಣೆ ಹಾಗೂ ಕನ್ನಡ ಸಾಹಿತ್ಯ ಮಹತ್ವದ ಪರಿಚಯ ವಾಗುತ್ತದೆ’  ಎಂದರು. ನಂತರ ಮಾತನಾಡಿದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಒಂದು ಸಾಹಿತ್ಯ ಪರಂಪರೆ ನಿಷ್ಕ್ರಿಯವಾಗದಂತೆ ಅದನ್ನು ಜೀವಂತವಾಗಿಡುವ ಉದ್ದೇಶದಿಂದ ಕಾಲದಿಂದ ಕಾಲಕ್ಕೆ ಪುನರ್‌ ವಿಮರ್ಶೆ ಮಾಡಿದವರು ಆಮೂರರು.

ಆಮೂರರ ಕನ್ನಡ ಕೃತಿಗಳು ಪ್ರಶಂಸೆಗೆ ಒಳಗಾದಷ್ಟು ಇಂಗ್ಲಿಷ್‌ ಕೃತಿಗಳ ಕುರಿತು ಚರ್ಚೆ ನಡೆಯದಿರುವುದೂ ಬೇಸರದ ಸಂಗತಿ’ ಎಂದು ವಿಷಾದಿಸಿದರು. ನಂತರ ಆಮೂರರ ಆತ್ಮಕಥೆ ‘ನೀರ ಮೇಲನ ಗುಳ್ಳೆ’ ಕುರಿತು ಮಾತನಾಡಿದ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ‘ಆತ್ಮಕಥೆ ಎಂದರೆ ಅದು ನನ್ನ ಬಗೆಗೆ ಮಾತ್ರ ಬರೆದುಕೊಳ್ಳುವುದಲ್ಲ.

ನಮ್ಮ ಬಗೆಗೆ ಬರೆದುಕೊಳ್ಳುವುದೆಂದರೆ ಅದು ಅಸಹ್ಯ. ಆದರೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪೋಷಕರು, ಗುರುಗಳು, ಸ್ನೇಹಿತರು, ಕುಟುಂಬ ವರ್ಗದವರನ್ನು ಈ ಮೂಲಕ ನೆನಪಿಸಿಕೊಳ್ಳಬಹುದು ಎಂದು ಆಮೂರರು ಹೇಳುವ ಮೂಲಕ ಪ್ರತಿಯೊಬ್ಬರೂ ಆತ್ಮಕಥೆಯನ್ನು ರಚಿ ಸಲು ಪ್ರೇರೇಪಿಸಿದ್ದಾರೆ’ ಎಂದರು.

ಡಾ.ಎಚ್‌.ಎಸ್‌.ರಾಘವೇಂದ್ರರಾವ್‌ ಅಭಿನಂದನಾ ಪರ ಮಾತುಗಳನ್ನಾಡಿ, ‘ಧಾರವಾಡದಿಂದ ಬೇರೆ ಬೇರೆ ಕಾರಣಗಳಿಗೆ ವಲಸೆ ಹೋದ ಸಾಹಿತಿ, ಶಿಕ್ಷಕರು ಅನೇಕರು. ಆದರೆ ಹೀಗೆ ಹೋದವರಲ್ಲಿ ಆಮೂರರು ‘ಘರ್ ವಾಪಸಿ’ಯಂತೆ ಮರಳಿ ಬಂದಿದ್ದು ಸಾಹಿತ್ಯ ಲೋಕದ ಅದೃಷ್ಟ.

ಕಟು ವಿಮರ್ಶೆ ಎಂದೆನಿಸಿಕೊಂಡಿರುವ ಆಮೂ ರರ ಕೃತಿಗಳಲ್ಲಿ ಅಭಿಪ್ರಾಯ, ಭಿನ್ನಾಭಿ ಪ್ರಾಯ, ಟೀಕೆ ಇತ್ಯಾದಿಗಳನ್ನು ಹುಡುಕು ವಂತೆ ಅಡಗಿಸಿಡುವ ಅವರ ಕಲೆ ಅನನ್ಯ. ಉತ್ತರ ಕರ್ನಾಟಕದವರಾದ ಆಮೂ ರರು ವಚನಗಳ ವಿಮರ್ಶೆ ಮಾಡಲಿಲ್ಲ ವೇಕೆ ಎಂಬ ಪ್ರಶ್ನೆ ಎದುರಾದಾಗ ಅವರು ಮೌನಕ್ಕೆ ಶರಣಾಗುತ್ತಾರೆ’ ಎಂದರು. ಡಾ.ಚೆನ್ನವೀರ ಕಣವಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.