ಭಾವಕವಿ ಡಾ.ಡಿ.ಎಸ್.ಕರ್ಕಿ ಮಹಾವೇದಿಕೆ (ಹುಬ್ಬಳ್ಳಿ): ‘ಅನ್ಯ ಭಾಷಿಕರನ್ನು ಕನ್ನಡದ ಕೊಳಕ್ಕೆ ಎಳೆದುಕೊಂಡು ಈಜಲು ಕಲಿಸಬೇಕು. ಅಂದಾಗ ಮಾತ್ರ ಕನ್ನಡ ಒಂದು ಶಕ್ತಿಯಾಗಿ ಬೆಳೆಯಲು ಸಾಧ್ಯ’ ಎಂದು ಸಾಹಿತಿ ಡಾ. ಶಿವಾನಂದ ಗಾಳಿ ಅಭಿಪ್ರಾಯಪಟ್ಟರು.
ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯಭವನದಲ್ಲಿ ಸೋಮವಾರ ಆರಂಭಗೊಂಡ, ಎರಡು ದಿನ ನಡೆಯಲಿರುವ ಧಾರವಾಡ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತಮಿಳು, ಬಂಗಾಳಿ, ತೆಲುಗು, ಹಿಂದಿ ಶಕ್ತಿಗಳಾಗಿವೆ. ಇವುಗಳ ಮಧ್ಯೆ ಕನ್ನಡ ನಿಃಶಕ್ತ ಆಗಿದೆ’ ಎಂದರು.
‘ತಮಿಳಿನಂತಹ ಭಾಷೆಗೆ ಸರ್ಕಾರವನ್ನೇ ಬಗ್ಗಿಸುವ ಶಕ್ತಿ ಇದೆ. ಅಲ್ಲಿನ ಜನ ತಮ್ಮ ಭಾಷೆಯನ್ನು ಅಷ್ಟರಮಟ್ಟಿಗೆ ಅಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಹಾಗಾಗಿಲ್ಲ. ಅನ್ಯರಿಗೆ ಕನ್ನಡ ತಿಳಿಯುವುದಿಲ್ಲ ಎಂದರೆ ನಾವು ಸಲೀಸಾಗಿ ಇಂಗ್ಲಿಷಿಗೆ ಜಾರಿ ಬಿಡುತ್ತೇವೆ. ಹಾಗಾಗಬಾರದು’ ಎಂದರು. ಮುದ್ರಿತ ಭಾಷಣವನ್ನು ಗಾಳಿ ಓದಿದರು.
‘ಕನ್ನಡದ ಕೂಗಿಗೆ ದೆಹಲಿ ಮಟ್ಟದಲ್ಲಿ ಬೆಲೆ ಸಿಗುತ್ತಿಲ್ಲ ಎಂಬ ಕೊರಗು ನನ್ನಲ್ಲೂ ಇದೆ. ತಮಿಳು, ತೆಲುಗು, ಹಿಂದಿ ಭಾಷೆಗಳು ಕನ್ನಡವನ್ನು ತುಳಿಯುತ್ತಿವೆ. ನಮ್ಮ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಮಟ್ಟಿಗಾದರೂ ಅದಕ್ಕೆ ಅವಕಾಶ ಸಿಗದಂತೆ ಕನ್ನಡಿಗರೆಲ್ಲರೂ ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ಈಗಲೂ ಪ್ರಸ್ತುತವಾಗಿರುವ ಉಪನ್ಯಾಸವನ್ನು ಬಿ.ಎಂ. ಶ್ರೀಯವರು ನೀಡಿದ್ದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ. ಅಲ್ಲಿ ಅವರು ತೋರಿದ ಹಾದಿಯನ್ನು ಕನ್ನಡಿಗರು ಅನುಸರಿಸಲಿಲ್ಲ. ಅನುಸರಿಸುತ್ತಿದ್ದರೆ ಕನ್ನಡ ಒಂದು ಶಕ್ತಿಯಾಗಿ ಎದ್ದು ನಿಲ್ಲುತ್ತಿತ್ತು. ಆಗ ಸರ್ಕಾರ ಹೆದರುತ್ತಿತ್ತು. ಕನ್ನಡದ ವಿರುದ್ಧ ಮಾತನಾಡಲು ಯಾವ ರಾಜಕಾರಣಿಯೂ ಧೈರ್ಯ ಮಾಡುತ್ತಿರಲಿಲ್ಲ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
‘ಕನ್ನಡವನ್ನು ಒಂದು ಶಕ್ತಿಯಾಗಿಸಲು ಧಾರವಾಡ ಸಾಕಷ್ಟು ಶ್ರಮಿಸಿದೆ. ಗೋಕಾಕ ಚಳವಳಿ ಬಿರುಸು ಪಡೆದದ್ದೇ ಧಾರವಾಡ ಪರಿಸರದಿಂದ. ಅನಂತರವೇ ಮೈಸೂರು ಕಡೆಯವರು ಅದನ್ನು ಗಂಭೀರವಾಗಿ ಪರಿಗಣಿಸಿ ಚಳವಳಿ ಕೈಗೆತ್ತಿಕೊಂಡರು.
ನಿಜಾಂ ರಾಜ್ಯಕ್ಕೆ ಸೇರಿದ ಕನ್ನಡ ಜಿಲ್ಲೆಗಳ ಜನ ಕನ್ನಡವನ್ನು ಉಳಿಸಲು ಅದೆಷ್ಟು ಹೆಣಗಿದವರೆಂಬುವುದನ್ನು ನಾವು ನೆನೆಯಬೇಕು. ಮುಂಬೈ ರಾಜ್ಯಕ್ಕೆ ಸೇರಿದ್ದ ಕನ್ನಡ ಜಿಲ್ಲೆಗಳಲ್ಲಿ ಕನ್ನಡವನ್ನು ಉಳಿಸಲು ಇಲ್ಲಿ ಸ್ಥಾಪಿತವಾದ ವೀರಶೈವ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿವಿ ನೀಡಿದ ಕೊಡುಗೆ ಅನನ್ಯ’ ಎಂದು ಸ್ಮರಿಸಿದರು.
‘ಒಳ್ಳೆಯ ಕನ್ನಡ ಸಾಹಿತ್ಯ ಕೃತಿಗಳು ಪ್ರಕಟಗೊಳ್ಳಬೇಕಾದುದು ಅಗತ್ಯವಾಗಿದೆ. ಈ ಕಾರಣಕ್ಕೆ ಸುಂದರ ಮತ್ತು ದರ್ಪಣ ಎಂಬ ಎರಡು ಪುಸ್ತಕ ಪ್ರಕಾಶನ ಸ್ಥಾಪಿಸಿ ಈ ಭಾಗದ ನೂರಾರು ಲೇಖಕರ ಕೃತಿಗಳನ್ನು ಪ್ರಕಟಿಸಿದೆ. ಹೀಗಾಗಿ ಮನೆ ಪುಸ್ತಕ ಗೋದಾಮು ಆಗಿದೆ. ಈಗ ಹೆಚ್ಚು ಓಡಾಡಲು ಸಾಧ್ಯವಾಗದೇ ಇರುವುದರಿಂದ ಪುಸ್ತಕ ಪ್ರಕಟಣೆ ಸೀಮಿತಗೊಳಿಸಿದ್ದೇನೆ’ ಎಂದರು.
‘ಸಾಹಿತ್ಯ ಸಂಸ್ಕೃತಿಯ ಪ್ರತಿಬಿಂಬವಷ್ಟೇ ಅಲ್ಲ; ಗತಿಬಿಂಬವೂ ಹೌದು. ನಮ್ಮ ಸಂಸ್ಕೃತಿಗೊಂದು ಉಜ್ವಲ ಶೋಭೆ ಕೊಡುವ, ನೊಂದ ಮನಸ್ಸನ್ನು ಸಂತೈಸುವ ಸುಂದರ ವಸ್ತು ಸಾಹಿತ್ಯ. ಆದ್ದರಿಂದಲೇ ಈ ಸೃಜನಶೀಲ ಪ್ರತಿಭೆ, ವಿದ್ವತ್ತು ಹೊಂದಿರುವವರ ಬಗ್ಗೆ ಅಪಾರ ಗೌರವ ನನ್ನಲ್ಲಿ ವಿದ್ಯಾರ್ಥಿ ದೆಸೆಯಿಂದಲೂ ಬೆಳೆದುಬಂತು. ಕನ್ನಡದ ಎಲ್ಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡದ್ದು ನನ್ನ ಆತ್ಮ ಸಂತೋಷಕ್ಕಾಗಿ.
ಕುಟುಂಬಕ್ಕಾಗಿ ನಾನು ಮೀಸಲಿಟ್ಟ ಸಮಯಕ್ಕಿಂತಲೂ ಕನ್ನಡಾಂಬೆಯ ತೇರು ಎಳೆಯುವ ಕಾಯಕಕ್ಕೆ ವ್ಯಯ ಮಾಡಿದ ಸಮಯವೇ ಹೆಚ್ಚು. ಇದು ಆತ್ಮನಿವೇದನೆಯೇ ವಿನಃ ಆತ್ಮಸ್ತುತಿ ಅಲ್ಲ’ ಎಂದರು.
‘ಎಪ್ಪತ್ತು ವರ್ಷದ ಬದುಕಿನುದ್ದಕ್ಕೂ ನಾನು ಉಂಡು, ಉಸಿರಾಡಿದ್ದು ಕನ್ನಡವನ್ನು. ಹಚ್ಚಿದ್ದು ಕನ್ನಡದ ಹಣತೆಗಳನ್ನು. ಬೆಳೆಸಿದ್ದು ಕನ್ನಡದ ಕೆಲವು ಸಸಿಗಳನ್ನು. ನನಗೆ ಸಿಕ್ಕಿದ ವೇದಿಕೆಯನ್ನು ಕನ್ನಡದ ಕೆಲಸಕ್ಕೆ ಬಳಸಿಕೊಂಡಿದ್ದೇನೆ. ಹೀಗೆ ನನ್ನಿಂದ ಸಾಧ್ಯವಾದಷ್ಟನ್ನು ಕನ್ನಡಕ್ಕಾಗಿ ನೀಡಿದ ಆತ್ಮತೃಪ್ತಿ ಪಡೆದಿದ್ದೇನೆಯೇ ಹೊರತು ಇನ್ನೇನನ್ನೂ ತೆಗೆದುಕೊಂಡಿಲ್ಲ ಎಂಬ ಸಮಾಧಾನವಿದೆ’ ಎಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.