ADVERTISEMENT

‘ಸದಾ ಪರಿಪೂರ್ಣತೆಯೇ ಬೇಂದ್ರೆ ಕಾವ್ಯದೃಷ್ಟಿ’

120ನೇ ಜನ್ಮದಿನದಂದು ವರಕವಿಯ ಅರ್ಥಪೂರ್ಣ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2015, 6:31 IST
Last Updated 5 ಫೆಬ್ರುವರಿ 2015, 6:31 IST

ಹುಬ್ಬಳ್ಳಿ: ‘ವರಕವಿ ಬೇಂದ್ರೆ ಅವರ ಕಾವ್ಯವನ್ನು ವಿಮರ್ಶಿಸುವುದು ಕೆರೆ–ಹಳ್ಳಗಳಲ್ಲಿ ಈಜಾಡುವವರು ತುಂಬಿ ಹರಿಯುವ ಹೊಳೆ ಹೊಕ್ಕಂತೆ’ ಎಂದು ಹಿರಿಯ ಉಪನ್ಯಾಸಕ ಡಾ.ಬಿ.ವಿ.ಶಿರೂರ ಅಭಿಪ್ರಾಯಪಟ್ಟರು.


ಇಲ್ಲಿನ ವಿಶ್ವಶ್ರಮ ಚೇತನದ ಆವರಣದಲ್ಲಿ ಬೇಂದ್ರೆ ಸಂಶೋಧನೆ ಸಂಸ್ಥೆ ವತಿಯಿಂದ ಬುಧವಾರ ನಡೆದ ವರಕವಿಯ 120ನೇ ಜನ್ಮ ದಿನಾಚರಣೆಯಲ್ಲಿ ‘ಅರಳು ಮರಳು’ ಕೃತಿಯ ಆರನೇ ಆವೃತ್ತಿಯನ್ನು ಬಿಡುಗಡೆ ಮಾಡಿ ಉಪನ್ಯಾಸ ನೀಡಿದರು.

‘ಅಂಬಿಕಾತನಯ ಕಟ್ಟಿದ ಕಗ್ಗ, ಜಗ್ಗಬೇಡ ನೀ ಹಿಗ್ಗಾಮುಗ್ಗ, ಹುರಿ ಐತಿ ಒಳಗ, ಬರೀದಲ್ಲ ಹಗ್ಗ’ ಎಂದು ತಮ್ಮ ಕಾವ್ಯ ವಿಮರ್ಶಿಸುವವರಿಗೆ ಪಂಥಾಹ್ವಾನ ನೀಡುತ್ತಿದ್ದ ಬೇಂದ್ರೆ ಪರಿಯೇ ವಿಶೇಷ. ಕನ್ನಡ ಸಾರಸ್ವತ ಲೋಕದಲ್ಲಿ ರನ್ನ ಕವಿಯ ನಂತರ ಹೀಗೆ ವಿಮರ್ಶಕರಿಗೆ ಎಚ್ಚರಿಕೆಯನ್ನು ನೀಡಿದವರು ಬೇಂದ್ರೆ ಮಾತ್ರ. ಕಾವ್ಯ ರಚನೆಯ ವೇಳೆ ಕವಿಯ ಸಂದೇಶ, ಉದ್ದೇಶ ಅರಿಯುವ ಬದಲು ವಿಮರ್ಶಕರು ತಮ್ಮ ವಿಚಾರ ಹೇರಬಾರದು ಎಂಬುದು ಕವಿಯ ಈ ಎಚ್ಚರಿಕೆ ಹಿಂದಿನ ಉದ್ದೇಶ ಎಂದರು.

ಋಷಿಯ ಮನಸ್ಥಿತಿ ಇಲ್ಲದವರಿಗೆ ಕಾವ್ಯ ರಚನೆ ಅಸಾಧ್ಯ. ಬೇಂದ್ರೆ ಸ್ವತಃ ಋಷಿಯಾಗಿದ್ದರು. ತಮ್ಮೊಳಗೆ ಅರಳುವ ಪರಿಗೆ ಕಾವ್ಯದ ಸ್ಪರ್ಶ ನೀಡುತ್ತಿದ್ದರು. ಇದರಿಂದ ಸಾಮಾನ್ಯ ರೂಪಕದಿಂದ ಅಸಾಮಾನ್ಯ ಸಂದೇಶ ನೀಡುವುದು ಕವಿಗೆ ಸಾಧ್ಯವಾಗಿತ್ತು. ಶಬ್ದಕ್ಕೆ ಕಾವ್ಯದ ಶಕ್ತಿ ತುಂಬಿದ ಬೇಂದ್ರೆ ‘ಕಟ್ಟುವವರೆಲ್ಲ ಕವಿಗಳಲ್ಲ, ಹುಟ್ಟುವವರೆಲ್ಲ ಭವಿಗಳಲ್ಲ, ಮುಟ್ಟಿದ್ದೆಲ್ಲಾ ಚಿನ್ನ ಅಂತಾ ತಿಳಿದುಕೊಳ್ಳದೆ ಭಾವ ಅರ್ಥ ತಿಳಿದುಕೋ ಹುಡುಗ’ ಎಂದು ಹೇಳಿದ್ದು, ಬರೀ ಪದಗಳ ಅಲಂಕಾರಕ್ಕೆ ಕಟ್ಟುಬಿದ್ದವರಿಗೆ ಹೇಳಿದ ಕಿವಿಮಾತಿನಂತಿದೆ. ಬೇಂದ್ರೆ ಭಾವಾಂತರಕ್ಕೆ ಒತ್ತು ನೀಡುತ್ತಿದ್ದರು ಹೊರತು ಭಾಷಾಂತರಕ್ಕೆ ಅಲ್ಲ ಎಂದರು.

ಬೇಂದ್ರೆ ಸಂಶೋಧನೆ ಸಂಸ್ಥೆಯ ಸಹ ನಿರ್ದೇಶಕ ಡಾ.ವಾಮನಬೇಂದ್ರೆ ಮಾತನಾಡಿ, ‘ನನ್ನ ತಂದೆ ಅಂಬಿಕಾತನಯದತ್ತರು 1944ರಿಂದ 56ರವರೆಗೆ ಸೊಲ್ಲಾಪುರದಲ್ಲಿ ಉಪನ್ಯಾಸಕರಾಗಿದ್ದ ವೇಳೆ ಅರಳು–ಮರಳು ಕಾವ್ಯ ಬರೆದರು.

ಈ ಕೃತಿ ಬಂದಾಗ ಅವರಿಗೆ 60 ವರ್ಷವಾಗಿತ್ತು. ‘ಕಾವ್ಯದ ಒರತೆ ಬತ್ತಿದ ನಂತರ ಬೇಂದ್ರೆ ಕೃತಿ ಬರೆದಿದ್ದಾರೆ’ ಎಂದು ಟೀಕಿಸಿದ್ದರು. ಅದಕ್ಕೆ ಅವರು, ‘ನನ್ನಲ್ಲಿನ ಕಾವ್ಯ ಶಕ್ತಿ ಮರಳಿ ಮರಳಿ ಅರಳುತ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದರು’ ಎಂಬುದನ್ನು ಸ್ಮರಿಸಿದರು.

ಬೇಂದ್ರೆ ಅವರ ದೃಷ್ಟಿ ಸದಾ ಪರಿಪೂರ್ಣತೆಯ ಕಡೆಗೆ ಇರುತ್ತಿತ್ತು. ಅದನ್ನು ಅವರ ಕಾವ್ಯದಲ್ಲಿ ಕಾಣಬಹುದು. 1958ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೆ ಪಾತ್ರವಾದ ಈ ಕೃತಿ ತೆಲುಗಿಗೂ ಅನುವಾದಗೊಂಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೇಂದ್ರೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಶರ್ಮಾ, ತಲೆಯಲ್ಲಿರುವ ವಿಚಾರದಲ್ಲಿ ಆಚರಣೆಗೆ ಬರಬೇಕು ಎಂಬುದು ಕವಿಯ ಧ್ಯೇಯವಾಗಿತ್ತು. ಮಾರ್ಕ್ಸ್ ವಾದದ ದೃಷ್ಟಿ ಸಿದ್ಧಾಂತ ಮತ್ತು ಆಚರಣೆಯನ್ನು ಅವರ ಕಾವ್ಯದಲ್ಲಿ ಕಾಣಬಹುದಾಗಿತ್ತು ಎಂದರು.

ಸಮಾರಂಭಕ್ಕೆ ಮುನ್ನ ಬೇಂದ್ರೆ ಕವನಗಳನ್ನು ಕೃಷ್ಣಾಜಿ ಕುರ್ತಕೋಟಿ ಅವರ ಶಿಷ್ಯರಾದ ವಿದ್ಯಾ ಜೋಶಿ ಹಾಗೂ ಸುಮಾ ಭಟ್ ಹಾಡಿ ಕವಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದರು.
ಹಿರಿಯ ಸಾಹಿತಿ ಡಾ.ಜಿ.ವಿ.ಕುಲಕರ್ಣಿ ಬೇಂದ್ರೆ ಗುರುಗಳೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಡಾ.ಕೆ.ರಾಘವೇಂದ್ರರಾವ್ ಸಮಾರೋಪ ನುಡಿಯ ಮೂಲಕ ಕವಿಗೆ ನಮನ ಸಲ್ಲಿಸಿದರು. ಡಾ.ಶ್ಯಾಮಸುಂದರ ಬಿದರಕುಂದಿ, ಸುಮಿತ್ರಾ ಪೋತ್ನೀಸ್, ಪುನರ್ವಸು ಬೇಂದ್ರೆ, ಸುಲೋಚನಾ ಪೋತ್ನಿಸ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT