ADVERTISEMENT

ಗುಟುಕಾ ಉಗುಳಿದರೆ ₹ 500 ದಂಡ

ಕಿಮ್ಸ್‌ ಸ್ವಚ್ಛತಾ ಜಾಗೃತಿ ಅಭಿಯಾನ, ವೈದ್ಯರಿಗೂ ದಂಡ ನಿಗದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 13:04 IST
Last Updated 4 ಜುಲೈ 2019, 13:04 IST
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಗುರುವಾರ ಆರಂಭಿಸಲಾದ ಸಂಚಾರಿ ಕಸದ ಡಬ್ಬಿ ಬಗ್ಗೆ ವೈದ್ಯಾಧಿಕಾರಿಗಳು ಜನರಿಗೆ ಮಾಹಿತಿ ನೀಡಿದರು
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಗುರುವಾರ ಆರಂಭಿಸಲಾದ ಸಂಚಾರಿ ಕಸದ ಡಬ್ಬಿ ಬಗ್ಗೆ ವೈದ್ಯಾಧಿಕಾರಿಗಳು ಜನರಿಗೆ ಮಾಹಿತಿ ನೀಡಿದರು   

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಉಗುಳುವಂತಿಲ್ಲ. ಗುಟುಕಾ ಚೀಟಿ, ಎಲೆ–ಅಡಿಕೆ ಆಸ್ಪತ್ರೆ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ತೆಗೆದುಕೊಂಡು ಹೋಗಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರೆ ನಿಮಗೆ ದಂಡ ತಪ್ಪಿದ್ದಲ್ಲ.

ಆಸ್ಪತ್ರೆಯ ಸ್ವಚ್ಛತೆ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಕಿಮ್ಸ್‌ ಸ್ವಚ್ಛತಾ ಜಾಗೃತಿ ಅಭಿಯಾನ ಆರಂಭಿಸಿದೆ. ಬೀಡಿ, ಸಿಗರೇಟು, ಗುಟುಕಾ ತರುವುದನ್ನು ನಿಷೇಧಿಸಿದೆ. ಇದರ ಬಗ್ಗೆ ಜನಜಾಗೃತಿ ಮೂಡಿಸಲು ಸಂಚಾರಿ ಕಸದ ಡಬ್ಬಿ ತಯಾರಿಸಿದೆ. ಮಾಹಿತಿ ಕೊರತೆಯಿಂದ ಗುಟುಕಾವನ್ನು ವಾರ್ಡ್‌ಗೆ ತೆಗೆದುಕೊಂಡು ಹೋಗುವವರು ತಮ್ಮ ಬಳಿ ಬರುವ ಡಬ್ಬಿಯಲ್ಲಿ ಅದನ್ನು ಹಾಕಬೇಕು. ಇಲ್ಲವಾದರೆ ₹ 500 ದಂಡ ಹಾಕಲಾಗುತ್ತದೆ.

ಈ ಡಬ್ಬಿಗೆ ಗುರುವಾರ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ ಚಾಲನೆ ನೀಡಿದರು. ಗುಟುಕಾ ಒಳಗೆ ತೆಗೆದುಕೊಂಡು ಹೋಗುವ ವೈದ್ಯರಿಗೆ ₹ 2,000, ಸಿಬ್ಬಂದಿಗೆ ₹ 1,000 ಮತ್ತು ಒಳಗಡೆ ಚಹಾ, ತಿಂಡಿ ಮಾರುವವರಿಗೆ ₹ 5,000 ದಂಡವನ್ನು ಆಸ್ಪತ್ರೆ ನಿಗದಿ ಮಾಡಿದೆ.

ADVERTISEMENT

ಕಿಮ್ಸ್‌ ದಂಡಾಧಿಕಾರಿ ವೈ.ಕೆ. ಹೂಗಾರ ‘ಈಗ ಪ್ರಾಯೋಗಿಕವಾಗಿ ಸಂಚಾರಿ ಕಸದ ಡಬ್ಬಿಗೆ ಚಾಲನೆ ನೀಡಲಾಗಿದೆ. ಮೊದಲು ಜನರಲ್ಲಿ ಜಾಗೃತಿ ಮೂಡಿಸಲು ಆಸ್ಪತ್ರೆಯ ಎಲ್ಲ ಮಹಡಿಗಳಲ್ಲಿ ಮೈಕ್‌ ಇಡಲಾಗುವುದು. ಮುಂದೆ ಮೂರು ಕಡೆ ಡಬ್ಬಿ ಇಟ್ಟು ಕಸ ಸಂಗ್ರಹಿಸಲಾಗುವುದು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರ ತನಕ ಇದಕ್ಕಾಗಿಯೇ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ’ ಎಂದರು.

‘ಕಿಮ್ಸ್‌ನಲ್ಲಿ 2009ರಿಂದಲೇ ದಂಡ ಹಾಕಲು ಆರಂಭಿಸಲಾಗಿದೆ. ನಡುವೆ ದಂಡ ವಿಧಿಸುವುದು ನಿಂತು ಹೋಗಿದ್ದರಿಂದ ಸ್ವಚ್ಛತೆ ಹಾಳಾಗಿತ್ತು. ಆದ್ದರಿಂದ ಕಡ್ಡಾಯವಾಗಿ ದಂಡ ವಿಧಿಸುವುದನ್ನು ಮತ್ತೆ ಆರಂಭಿಸಿದ್ದೇವೆ. ಹತ್ತು ವರ್ಷಗಳಲ್ಲಿ ಸಂಗ್ರಹಿಸಿದ ₹ 3.75 ಲಕ್ಷ ಹಣವನ್ನು ಆಸ್ಪತ್ರೆಗೆ ಸ್ವಚ್ಛತೆಗೆ ಬಳಸಲಾಗುವುದು’ ಎಂದು ತಿಳಿಸಿದರು.

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಸಿ. ಅರುಣ ಕುಮಾರ್‌, ಸಿಇಒ ಬಸವರಾಜ ಸೋಮಣ್ಣನವರ, ಡಾ. ಮ್ಯಾಗೇರಿ, ಮಾಗೇಶ ಡಾ. ದೇಸೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.