ADVERTISEMENT

ಹುಬ್ಬಳ್ಳಿ: 10,780 ನಕಲಿ ಕಾರ್ಮಿಕ ಕಾರ್ಡ್‌ ರದ್ದು

ಗೋವರ್ಧನ ಎಸ್‌.ಎನ್‌.
Published 27 ಫೆಬ್ರುವರಿ 2024, 7:29 IST
Last Updated 27 ಫೆಬ್ರುವರಿ 2024, 7:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರಲ್ಲದೆಯು ನೋಂದಣಿ ಮಾಡಿಕೊಂಡ ಧಾರವಾಡ ಜಿಲ್ಲೆಯ 10,780 ಮಂದಿಯನ್ನು ಪತ್ತೆ ಮಾಡಿ, ಅವರಿಗೆ ನೀಡಿದ್ದ ಕಾರ್ಮಿಕ ಕಾರ್ಡ್‌ಗಳನ್ನು ಕಾರ್ಮಿಕ ಇಲಾಖೆ ರದ್ದು ಮಾಡಿದೆ.

‘ಕಾರ್ಮಿಕರೆಂದು ಸುಳ್ಳು ಮಾಹಿತಿ ನೀಡಿ ಕೆಲವರು ನೋಂದಾಯಿಸಿಕೊಂಡಿದ್ದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಅವರು ಸರ್ಕಾರದ ಯೋಜನೆಗಳನ್ನು ಪಡೆಯುವ ಮುನ್ನವೇ ಕಾರ್ಮಿಕ ಕಾರ್ಡ್‌ ರದ್ದು ಮಾಡಲಾಗಿದೆ’ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

‘ಕಟ್ಟಡ ಕಾರ್ಮಿಕರಿಗಾಗಿ ಇಲಾಖೆಯಿಂದ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇವು ಅರ್ಹರಿಗೆ ಸಿಗಬೇಕೆಂದು ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇಷ್ಟರ ನಡುವೆಯೂ, ಕೆಲವರು ಸುಳ್ಳು ಮಾಹಿತಿ ನೀಡಿ, ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳ ಪರಿಶೀಲನೆ, ದೂರವಾಣಿ ಮೂಲಕ ನಡೆಸಿದ ವಿಚಾರಣೆ ವೇಳೆ ಇವರು ಕಾರ್ಮಿಕರಲ್ಲವೆಂದು ತಿಳಿದುಬಂದಿದೆ. ಒಂದು ವೇಳೆ, ಇವರು ಸರ್ಕಾರದಿಂದ ಅನುಕೂಲ ಪಡೆದ ಫಲಾನುಭವಿಗಳಾಗಿದ್ದರೆ, ಎಫ್‌ಐಆರ್‌ ದಾಖಲಿಸಲಾಗುತ್ತಿತ್ತು. ಅವರು ಪಡೆದ ನೆರವನ್ನು ವಾಪಸ್‌ ಪಡೆಯುವ ಅವಕಾಶವೂ ಇದೆ’ ಎಂದು ವಿವರಿಸಿದರು.

ಹೊಸ ಸಾಫ್ಟ್‌ವೇರ್‌: ‘ಕಟ್ಟಡ ಕಾರ್ಮಿಕರು ಈ ಹಿಂದೆ ಸೇವಾ ಸಿಂಧು ಪೋರ್ಟ‌ಲ್ ಮೂಲಕ ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಈಗ ಕಾರ್ಮಿಕ ಇಲಾಖೆಗಾಗಿಯೇ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಮೂರು ತಿಂಗಳಿಂದ ಇದು ಕಾರ್ಯನಿರ್ವಹಿಸುತ್ತಿದೆ. ಇನ್ಮುಂದೆ ಯಾರಾದರೂ ಕಾರ್ಮಿಕರೆಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ, ಅವರ ಆಧಾರ್‌ ಕಾರ್ಡ್‌ ಮಾಹಿತಿ ದಾಖಲಿಸಿ, ಮತ್ತೊಮ್ಮೆ ಅರ್ಜಿ ಸಲ್ಲಿಸದಂತೆ ತಡೆಹಿಡಿಯಬಹುದು’ ಎಂದು ಅವರು ಮಾಹಿತಿ ನೀಡಿದರು.

ಸಿಬ್ಬಂದಿ ಕೊರತೆ: ‘ಕಾರ್ಮಿಕ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಅರ್ಹ ಕಾರ್ಮಿಕರನ್ನು ಗುರುತಿಸಲು ಹೆಚ್ಚಿನ ಸಂದರ್ಭಗಳಲ್ಲಿ ಸ್ಥಳ ಪರಿಶೀಲನೆ ನಡೆಸಬೇಕಿದೆ. ಸಿಬ್ಬಂದಿ ಕೊರತೆಯಿಂದ ಇದು ಕಷ್ಟವಾಗಿದೆ. ನಿಜ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸಿಗಬೇಕಾದರೆ, ಇಲಾಖೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ನಿಯೋಜಿಸಬೇಕು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.