ADVERTISEMENT

ಹುಬ್ಬಳ್ಳಿ | 123 ಅಂಗವಿಕಲರಿಗೆ ಕೃತಕ ಕಾಲು ಜೋಡಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 5:07 IST
Last Updated 17 ಆಗಸ್ಟ್ 2023, 5:07 IST
ಹುಬ್ಬಳ್ಳಿಯ ಮಹಾವೀರ ಭವನದಲ್ಲಿ ಬುಧವಾರ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಸಚಿವ ಸಂತೋಷ ಲಾಡ್‌ ಕೃತಕ ಕಾಲು ಅಳವಡಿಸಿಕೊಂಡ ಮಗುವನ್ನು ಪರಿಶೀಲಿಸಿದರು
ಹುಬ್ಬಳ್ಳಿಯ ಮಹಾವೀರ ಭವನದಲ್ಲಿ ಬುಧವಾರ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಸಚಿವ ಸಂತೋಷ ಲಾಡ್‌ ಕೃತಕ ಕಾಲು ಅಳವಡಿಸಿಕೊಂಡ ಮಗುವನ್ನು ಪರಿಶೀಲಿಸಿದರು   

ಹುಬ್ಬಳ್ಳಿ: ಜೈನ ಧರ್ಮವು ದಾನ, ಧರ್ಮ, ಪುಣ್ಯದ ಕಾರ್ಯ, ಮಾನವೀಯ ಸೇವೆ ಕೈಗೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿದೆ. ಅಂಗವಿಕಲರಿಗೆ ಸ್ವಾಭಿಮಾನದ ಬದುಕು ನೀಡುವಲ್ಲಿ ಜೈನರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ, ಆಲ್ ಇಂಡಿಯಾ ಶ್ವೇತಾಂಬರ ಸ್ಥಾನಕವಾಸಿ ಜೈನ ಕಾನ್ಫರೆನ್ಸ್‌ ಧಾರವಾಡ ಜಿಲ್ಲಾ ಘಟಕ ಹಾಗೂ ಆಲ್ ಇಂಡಿಯಾ ಜೈನ್‌ ಯೂಥ್ ಫೆಡರೇಶನ್‌ನ ಮಹಾವೀರ ಲಿಂಬ್‌ ಸೆಂಟರ್‌ ವತಿಯಿಂದ ಆನಂದ ಋಷಿಜಿ ಮಹಾರಾಜ ಅವರ 123ನೇ ಜಯಂತಿ ಅಂಗವಾಗಿ ಇಲ್ಲಿಯ ಮಹಾವೀರ ಭವನದಲ್ಲಿ ಬುಧವಾರ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಅವರು ಮಾತನಾಡಿದರು.

'ಜೈನ ಮುನಿಗಳು, ಸಾಧ್ವಿಯರು ವಿಹಾರದಲ್ಲಿರುವಾಗ ಅವರ ಸುರಕ್ಷತೆಗಾಗಿ ಪೊಲೀಸ್‌ ಬಂದೋಬಸ್ತ್‌ ಮತ್ತು ರಾತ್ರಿ ತಂಗಲು ವಿಶ್ರಾಂತಿ ಗೃಹಗಳ ವ್ಯವಸ್ಥೆಯ ವಿಷಯದಲ್ಲಿ ಮೇಲಿನ ಆಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್‌ ಅವರೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಾಧ್ವಿ ಪ್ರಜ್ಞಾ ಕಿರಣ, ವಿಪುಲ ದರ್ಶನಾಜಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಪ್ರಸಾದ ಅಬ್ಬಯ್ಯ, ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ ಅಧ್ಯಕ್ಷ ಉಕಚಂದ ಭಾಫ್ನಾ, ಆಲ್ ಇಂಡಿಯಾ ಜೈನ ಯೂಥ್ ಫೆಡರೇಶನ್‌ನ ಮಹಾವೀರ ಲಿಂಬ್ ಸೆಂಟರ್‌ನ ಸಂಸ್ಥಾಪಕರಾದ ಮಹೇಂದ್ರ ಸಿಂಘಿ ಮಾತನಾಡಿದರು.

ಜೈನ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು. 

ಜೈನ ಕಾನ್ಫರೆನ್ಸ್‌ನ ಅಧ್ಯಕ್ಷ ಬಾಬುಲಾಲ ಪಾರೇಖ ಅಧ್ಯಕ್ಷತೆ ವಹಿಸಿದ್ದರು. ಕೃತಕ ಕಾಲು ಶಿಬಿರದ ಅಧ್ಯಕ್ಷ ಪಿಂಟು ಸಂಘವಿ, ಜೈನ್‌ ಕಾನ್ಫರೆನ್ಸ್‌ ಹುಬ್ಬಳ್ಳಿ ಘಟಕದ ಯುವ ಅಧ್ಯಕ್ಷರಾದ ಕಮಲೇಶ ಭಾಗರೇಚಾ, ಪ್ರಕಾಶ ಕಟಾರಿಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.