ADVERTISEMENT

ಹು–ಧಾ ಮಹಾನಗರ ಪಾಲಿಕೆ ಅಧಿಕಾರಿಗಳ ದಾಳಿ: 15 ಟನ್ ನಿಷೇಧಿತ ಪ್ಲಾಸ್ಟಿಕ್ ವಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:00 IST
Last Updated 2 ಜುಲೈ 2024, 16:00 IST
ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದ ಮೊದಲ ಹಂತದಲ್ಲಿರುವ ರಜನಿ ಪಾಲಿಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನದೊಂದಿಗೆ  ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಅಧಿಕಾರಿಗಳು
ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದ ಮೊದಲ ಹಂತದಲ್ಲಿರುವ ರಜನಿ ಪಾಲಿಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನದೊಂದಿಗೆ  ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಅಧಿಕಾರಿಗಳು   

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದ ಮೊದಲ ಹಂತದಲ್ಲಿರುವ ರಜನಿ ಪಾಲಿಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ನಿಷೇಧಿತ ಏಕಬಳಕೆಯ 15 ಟನ್‌ಗೂ ಪ್ಲಾಸ್ಟಿಕ್ ವಶಪಡಿಸಿಕೊಂಡರು‌.

ಮಂಗಳವಾರ ಮಧ್ಯಾಹ್ನ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ತಪಾಸಣೆ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡಿದರು.

ನಿಷೇಧಿಕ ಪ್ಲಾಸ್ಟಿಕ್ ಬಳಕೆ ತಡೆಗೆ ಮಾರುಕಟ್ಟೆ ಪ್ರದೇಶದಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅಲ್ಲಿ ಸಿಕ್ಕ ಪ್ಲಾಸ್ಟಿಕ್ ಎಲ್ಲಿಂದ ಪೂರೈಕೆಯಾಗಿದೆ ಎಂಬುದನ್ನು ಪರಿಶೀಲಿಸಿದಾಗ ಅದು ನಗರದಲ್ಲಿ ಉತ್ಪಾದನೆಯಾಗಿದ್ದು ಎಂಬುದು ತಿಳಿಯಿತು ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ADVERTISEMENT

ಈ ಕಂಪನಿ 2011ರಲ್ಲಿ ಆರಂಭವಾಗಿದೆ. ಗುಜರಾತ್‌ನಿಂದ ಕಚ್ಚಾ ವಸ್ತುಗಳನ್ನು ಖರೀದಿಸಿ ಇಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿದ್ದರು. ಕಂಪನಿ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಸಿಬ್ಬಂದಿ ಅಲ್ಲಿ ಉತ್ಪಾದನೆ ಮಾಡುತ್ತಿರುವ ಪ್ಲಾಸ್ಟಿಕ್‌ 50 ಮೈಕ್ರಾನ್‌ಗಿಂತ  ಹೆಚ್ಚಿದೆ ಎಂದು ಹೇಳಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕರೆಸಿ ಪರಿಶೀಲಿಸಿದಾಗ ಅವು 30-35 ಮೈಕ್ರಾನ್‌ ಇರುವುದು ತಿಳಿಯಿತು ಎಂದರು.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಕಾರ 50 ಮೈಕ್ರಾನ್‌ಗಿಂದ ಹೆಚ್ಚಿರುವ ಪ್ಲಾಸ್ಟಿಕ್ ಉತ್ಪಾದನೆ ಮಾಡಲು ಮಾತ್ರ ಅವಕಾಶ ಇದೆ. ಏಕಬಳಕೆಯ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುವುದು ಕಾನೂನುಬಾಹಿರ. ಕಂಪನಿಯಲ್ಲಿ 20 ಟನ್‌ಗೂ ಹೆಚ್ಚು ಕಚ್ಚಾವಸ್ತು ಪತ್ತೆಯಾಗಿದೆ ಎಂದು ಹೇಳಿದರು.

ಎಷ್ಟು ವರ್ಷಗಳಿಂದ ಈ ರೀತಿ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗುತ್ತಿದೆ, ಎಲ್ಲೆಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಕಂಪನಿಯ ವಾಪಾರ ಪರವಾನಗಿ (ಟ್ರೇಡ್ ಲೈಸನ್ಸ್‌) ರದ್ದು ಪಡಿಸಲು ಅವಕಾಶ ಇದ್ದು, ಈ ಬಗ್ಗೆ ಕೈಗಾರಿಕಾ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲ ಕೈಗಾರಿಕೆಗಳ ಮುಖ್ಯಸ್ಥರ ಸಭೆಯನ್ನು ಶೀಘ್ರದಲ್ಲಿ ಕರೆಯಾಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡದಂತೆ ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗುವುದು ಎಂದರು.

ಹುಬ್ಬಳ್ಳಿ ಧಾರವಾಡದಲ್ಲಿಯೂ ಕೆಲವು ಕಂಪನಿಗಳು ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಅಕ್ರಮವಾಗಿ ಪ್ಲಾಸ್ಟಿಕ್ ಉತ್ಪಾದನೆ ಪತ್ತೆಗೆ ವಲಯ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುವುದು. ಒಂದು ವೇಳೆ ನಿಷೇಧಿತ ಪ್ಲಾಸ್ಟಿಕ್ ಕಂಡು ಬಂದರೆ ದಂಡ ವಿಧಿಸುವ ಜತೆಗೆ ಟ್ರೇಡ್ ಲೈಸನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಅಧಿಕಾರಿ ಮಲ್ಲಿಕಾರ್ಜುನ ಬಿ.ಎಂ., ಇದ್ದರು.

ಏಕಬಳಕೆ ನಿಷೇಧಿತ ಪ್ಲಾಸ್ಟಿಕ್ ನಿರ್ಮೂಲನೆಗೆ ಮಹಾನಗರ ಪಾಲಿಕೆಯಿಂದ ಎಲ್ಲ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು
–ಈಶ್ವರ ಉಳ್ಳಾಗಡ್ಡಿ ಆಯುಕ್ತ ಮಹಾನಗರ ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.