ಹುಬ್ಬಳ್ಳಿ: ಸಾರ್ವಜನಿಕ ಗ್ರಂಥಾಲಯ ಪರಿಚಯಿಸಿರುವ (e- sarvajanika Granthalaya) ಧಾರವಾಡ ಜಿಲ್ಲಾ ಇ–ಸಾರ್ವಜನಿಕ ಗ್ರಂಥಾಲಯ ಆ್ಯಪ್‌ಗೆ ಇಲ್ಲಿಯವರೆಗೆ 1.50 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ.
2020ರಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಓದುಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆ್ಯಪ್ ಪರಿಚಯಿಸಲಾಗಿತ್ತು. ಇದು ಆನ್‌ಲೈನ್ ಓದುಗರು, ಯುವಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ವರದಾನವಾಗಿದೆ.
ಮೊಬೈಲ್‌ನಲ್ಲಿ ಆ್ಯಪ್‌ನ ಮೂಲಕ ಓದುವುದಷ್ಟೇ ಅಲ್ಲದೆ, ಧಾರವಾಡದ ಕೇಂದ್ರ ಗ್ರಂಥಾಲಯ, ಸಪ್ತಾಪುರ ಸಾರ್ವಜನಿಕ ಗ್ರಂಥಾಲಯ ಹಾಗೂ ಹುಬ್ಬಳ್ಳಿಯ ಹೈಟೆಕ್ ಸಾರ್ವಜನಿಕ ಗ್ರಂಥಾಲಯದಲ್ಲಿಯೂ ಆನ್‌ಲೈನ್‌ನ ಮೂಲಕ ಓದಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕ ಉಚಿತವಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಇರುವುದರಿಂದ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ನಿತ್ಯ 50 ಸಾವಿರ ಜನ ಬಳಕೆ: ನಿತ್ಯ ಆ್ಯಪ್‌ನ ಮೂಲಕ 50 ಸಾವಿರ ಜನರು ಪುಸ್ತಕ ಓದುತ್ತಿದ್ದಾರೆ. ಕೆಲವೊಮ್ಮೆ ಇದರ ಬಳಕೆ ಹೆಚ್ಚಾಗಿಯೂ ಇರುತ್ತದೆ. ಡೌನ್‌ಲೋಡ್ ಮಾಡಿಕೊಂಡವರೆಲ್ಲ ಭಳಸುತ್ತಾರೆ ಎಂದು ಹೇಳಲು ಬರುವುದಿಲ್ಲ. ಆದರೆ, ಬಳಸುವವರ ಸಂಖ್ಯೆ ಉತ್ತಮವಾಗಿದೆ ಎನ್ನುತ್ತಾರೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕಾರಿಗಳು.
ಸ್ಪರ್ಧಾತ್ಮಕ ವಿಷಯ: ಆ್ಯಪ್‌ನ ಮೂಲಕ ಯಾವ ಪುಸ್ತಕಗಳನ್ನು ಓದುತ್ತಾರೆ ಎನ್ನುವುದು ನಿಖರವಾಗಿ ತಿಳಿಯುವುದಿಲ್ಲ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಹೆಚ್ಚು ಓದುತ್ತಾರೆ ಎಂದು ಜಿಲ್ಲಾ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಎಂ.ಬಿ. ಕರಿಗಾರ ಹೇಳಿದರು.
‘ಕೆಎಎಸ್, ಐಎಎಸ್, ಪಿಎಸ್‌ಐ, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್, ಪಿಡಿಒ, ಬಿಇಡಿ ಮತ್ತು ಡಿಇಡಿ ಅಧ್ಯಯನಕ್ಕೆ ಪೂರಕವಾದ ಪಠ್ಯಗಳು ಆ್ಯಪ್‌ನಲ್ಲಿ ಲಭ್ಯ ಇವೆ’ ಎಂದು ಹೇಳಿದರು.
ಓದುಗರ ಸಂಖ್ಯೆ ಇಳಿಕೆ ಆಗಿಲ್ಲ: ಆನ್‌ಲೈನ್ ಆ್ಯಪ್ ಪರಿಚಯಿಸಿದ ನಂತರವೂ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವವರ ಸಂಖ್ಯೆಯಲ್ಲಿ ಇಳಿಕೆ ಆಗಿಲ್ಲ. ಧಾರವಾಡದ ಕೇಂದ್ರ ಗ್ರಂಥಾಲಯಕ್ಕೆ ನಿತ್ಯ ಸಾವಿರ ಜನ ಓದುಗರು ಬರುತ್ತಾರೆ. ಆ್ಯಪ್ ಪರಿಚಯಿಸಿದ ಮೇಲೆ ಹೊಸ ಓದುಗರು ಸೃಷ್ಟಿ ಆಗಿದ್ದಾರೆ. ಇದು ಪರೋಕ್ಷವಾಗಿ ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಲು ಸಹ ಕಾರಣವಾಗಿದೆ.
ಮತ್ತಷ್ಟು ಸೌಲಭ್ಯದ ನಿರೀಕ್ಷೆ: ಆನ್‌ಲೈನ್ ಸೇವೆ ಲಭ್ಯವಿರುವ ಮೂರು ಗ್ರಂಥಾಲಯಗಳಲ್ಲಿ ತಲಾ 4 ಟ್ಯಾಬ್ ಹಾಗೂ ಎರಡು ಕಂಪ್ಯೂಟರ್ ಸೌಲಭ್ಯ ನೀಡಲಾಗಿದೆ. ಓದುಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಸೌಲಭ್ಯ ಕಲ್ಪಿಸುವ ಅವಶ್ಯಕತೆ ಇದೆ ಎಂದು ಎಂ.ಬಿ. ಕರಿಗಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಆ್ಯಪ್ ಡೌನ್‌ಲೋಡ್ ಹೇಗೆ?
https://www.karnatakadigitalpubliclibrary.org ಎಂದು ಟೈಪ್ ಮಾಡಿ ಲಾಗಿನ್ ಅಥವಾ ರಿಜಿಸ್ಟರ್ ಬಟನ್ ಆಯ್ಕೆ ಮಾಡಬೇಕು. ನಂತರ ‘ಈಗ ರಚಿಸಿ’ ಕ್ಲಿಕ್ ಮಾಡಿ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ. ಡ್ರಾಪ್ ಡೌನ್ ಪರಿವಿಡಿಯಿಂದ ಗ್ರಂಥಾಲಯವನ್ನು(ಕನಿಷ್ಠ ಒಂದನ್ನು ಆರಿಸಿ) ಆಯ್ಕೆ ಮಾಡಿ, ಸಲ್ಲಿಸು ಬಟನ್ ಕ್ಲಿಕ್ ಮಾಡಿದ ನಂತರ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಬೇಕು. ನಂತರ ನಿಮ್ಮ ಪಾಸ್‌ವರ್ಡ್ (ಕೇವಲ 4 ಅಕ್ಷರಗಳು) ನಮೂದಿಸಬೇಕು. ನಂತರ ಮೊಬೈಲ್ ಆ್ಯಪ್‌ನಿಂದಲೂ ಇದೇ ಲಾಗಿನ್ ಮತ್ತು ಪಾಸ್‌ವರ್ಡ್ ಬಳಸಿ ಡಿಜಿಟಲ್ ಲೈಬ್ರರಿಯನ್ನು ಉಪಯೋಗಿಸಬಹುದು. ಪ್ಲೇ ಸ್ಟೋರ್‌ನಲ್ಲಿ ‘e-Sarvajanika Granthalaya’ ಎಂದು ಟೈಪ್ ಮಾಡಿದರೆ ಆ್ಯಪ್ ಲಭ್ಯವಾಗಲಿದೆ.
*
ಇ– ಸಾರ್ವಜನಿಕ ಗ್ರಂಥಾಲಯ ಆ್ಯಪ್‌ಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ಒದಗಿಸಲಾಗುವುದು.
-ಎಂ.ಬಿ. ಕರಿಗಾರ, ಉಪ ನಿರ್ದೇಶಕ, ನಗರ ಕೇಂದ್ರ ಗ್ರಂಥಾಲಯ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.