ಧಾರವಾಡ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜುಲೈ 29 ರಿಂದ ಆಗಸ್ಟ್ 14 ರ ವರೆಗೆ ಜಿಲ್ಲೆಯಲ್ಲಿ ಕುಷ್ಠ ರೋಗ ಪ್ರಕರಣ ಪತ್ತೆ ಅಭಿಯಾನ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಂದಾಜು 21.48 ಲಕ್ಷ ಜನಸಂಖ್ಯೆ ಇದೆ. ಅಭಿಯಾನದಲ್ಲಿ ಸುಮಾರು 4.29 ಲಕ್ಷ ಮನೆಗಳಿಗೆ ಭೇಟಿ ನೀಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ 1535 ತಂಡ ರಚಿಸಲಾಗಿದೆ ಒಟ್ಟು. 153 ಮೇಲ್ವಿಚಾರಕರು, 3070 ಸಿಬ್ಬಂದಿ ತಂಡಗಳಲ್ಲಿ ಇದ್ಧಾರೆ ಎಂದರು.
ಅಭಿಯಾನದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಜಿಲ್ಲೆಯ 21.48 ಲಕ್ಷ ಜನರನ್ನು ಪರೀಕ್ಷಿಸುವ ಗುರಿ ಇದೆ. ಕುಷ್ಠರೋಗಿಗಳನ್ನು ಗುರುತಿಸುವುದು ಸಮೀಕ್ಷೆಯ ಉದ್ದೇಶ. ಜಿಲ್ಲೆಯನ್ನು ಕುಷ್ಠರೋಗ ಮುಕ್ತವನ್ನಾಗಿಸಲು ಎಲ್ಲ ಇಲಾಖೆಗಳ ಸಹಭಾಗಿತ್ವದ ಅಗತ್ಯ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಟೀಲ ಶಶಿ ಮಾತನಾಡಿ, ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.
ಸ್ವಾತಂತ್ರ್ಯೋತ್ಸವ ಪಾಕ್ಷಿಕ: ‘ಆಗಸ್ಟ್ 1 ರಿಂದ 14 ರವರೆಗೆ ಜಿಲ್ಲಾಡಳಿತದ ವತಿಯಿಮದ ಜಿಲ್ಲೆಯ ಐತಿಹಾಸಿಕ ಹಿನ್ನೋಟ, ಭವ್ಯ ಭವಿಷ್ಯದ ಮುನ್ನೋಟ ಆಶಯದಲ್ಲಿ ಸ್ವಾತಂತ್ಯೋತ್ಸವದ ಪಾಕ್ಷಿಕ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ಧಾರವಾಡ ಜಿಲ್ಲೆಯ ಹೆಜ್ಜೆ ಗುರುತುತಗಳು ದಾಖಲಾಗಿವೆ. ಸ್ವಾತಂತ್ರ್ಯ ಚಳವಳಿಗಳಲ್ಲಿ (ಅಸಹಕಾರ ಚಳವಳಿ, ಚಲೇ ಜಾವ್ ಚಳವಳಿ...) ಜಿಲ್ಲೆಯ ಅನೇಕ ಮಹನೀಯರು ಭಾಗವಹಿಸಿದ್ದಾರೆ. ಅನೇಕ ಸಂಸ್ಥೆಗಳು, ಹುತಾತ್ಮರ ಸ್ಮಾರಕಗಳು ಜಿಲ್ಲೆಯಲ್ಲಿವೆ. ಅವುಗಳ ಕುರಿತು ಬೆಳಕು ಚೆಲ್ಲುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಪತ್ರಾಗಾರ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಮಾತನಾಡಿ, ಇಲಾಖೆಯಿಂದ ವಿಶೇಷ ವಸ್ತು ಮತ್ತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ರೂಪಕ ಪ್ರದರ್ಶಿಸಲಾಗುವುದು ಎಂದರು.
‘ಹೆಚ್ಚು ಹಣ ವಸೂಲಿ; ಲೈಸೆನ್ಸ್ ರದ್ದು’
ಧಾರವಾಡ: ಡೆಂಗಿ ಪರೀಕ್ಷೆಗೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಆ ಆಸ್ಪತ್ರೆ ಪ್ರಯೋಗಾಲಯದ ಲೈಸೆನ್ಸ್ ರದ್ದತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಾಯಗಳಲ್ಲಿ ಡೆಂಗಿ ಪರೀಕ್ಷೆಗೆ ದರ ನಿಗದಿಪಡಿಸಲಾಗಿದೆ. ಎಲಿಸಾ ಎನ್‍ಎಸ್ 1 ಮತ್ತು ಎಲಿಸಾ ಐಜಿಎಂ ಪರೀಕ್ಷೆಗೆ ತಲಾ ₹ 300 ಹಾಗೂ ರ‍್ಯಾಪಿಡ್ ಕಾರ್ಡ್ ಪರೀಕ್ಷೆಗೆ ₹ 250 ನಿಗದಿಪಡಿಸಲಾಗಿದೆ. ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ರರೆ ಪರಿಶೀಲನೆ ಮಾಡಬೇಕು ಖಾತ್ರಿಯಾದರೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.