ಹುಬ್ಬಳ್ಳಿ: ಧಾರವಾಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಮಾರ್ಚ್ 6 ಮತ್ತು 7ರಂದು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲು ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರವು ಕನ್ನಡ ಬಾವುಟ ಹಾಗೂ ತಳಿರು, ತೋರಣದೊಂದಿಗೆ ಸಿಂಗಾರಗೊಂಡಿದೆ.
ಸಾಹಿತ್ಯ ಸಮ್ಮೇಳನವನ್ನು ಸರಳ, ಅರ್ಥಪೂರ್ಣವಾಗಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಕಲ ಸಿದ್ಧತೆ ಮಾಡಿಕೊಂಡಿದೆ. ಸಮ್ಮೇಳನಕ್ಕೆ ಬರುವವರನ್ನು ‘ಡಾ.ರಾ.ಯ.ಧಾರವಾಡಕರ ಪ್ರವೇಶದ್ವಾರ’, ‘ಪ್ರೊ.ಸಿ.ವಿ.ಕೆರಿಮನಿ ಮುಖ್ಯದ್ವಾರ’ ಸ್ವಾಗತಿಸುತ್ತವೆ. ಸಭಾಂಗಣಕ್ಕೆ ’ಡಾ.ನ.ವಜ್ರಕುಮಾರ ಸಭಾಂಗಣ’ ಹೆಸರಿಡಲಾಗಿದೆ. ಮುಖ್ಯ ವೇದಿಕೆಗೆ ’ಪ್ರೊ.ಹಸನಬಿ ಎಂ.ಬೀಳಗಿ ವೇದಿಕೆ’ ಎಂದು ಹೆಸರಿಸಲಾಗಿದೆ.
‘ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಬೋಧಕರು, ಸಿಬ್ಬಂದಿಗೆ ಕಾರ್ಯನಿಮಿತ್ತ (ಒಒಡಿ) ರಜೆ ವ್ಯವಸ್ಥೆ ಮಾಡಲಾಗಿದೆ. ಸೌಲಭ್ಯ ಬಳಸಿಕೊಂಡು ಶಿಕ್ಷಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಹಿತ್ಯ ಚಿಂತನೆಗೆ ಆದ್ಯತೆ: ‘ಸಮ್ಮೇಳನದಲ್ಲಿ ಸಾಹಿತ್ಯ ಚಿಂತನಾ ಗೋಷ್ಠಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಾಹಿತ್ಯ ವೆಂಕಟೇಶ ಮಾಚಕನೂರು, ಸಿದ್ದಲಿಂಗ ಪಟ್ಟಣಶೆಟ್ಟಿ, ಧರಣೇಂದ್ರ ಕುರಕುರಿ, ಶಾಂತಿನಾಥ ದಿಬ್ಬದ, ಶ್ರೀನಿವಾಸ ವಾಡಪ್ಪಿ, ಸುರೇಶ ಕುಲಕರ್ಣಿ ಸೇರಿ ಹಲವು ಸಾಹಿತಿಗಳು ಭಾಗವಹಿಸುವರು’ ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ₹5 ಲಕ್ಷ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ₹1.75ಲಕ್ಷ ಅನುದಾನ ನೀಡಿದೆ. ಇದರಲ್ಲಿಯೇ ಎಲ್ಲವನ್ನೂ ನಿಭಾಯಿಸಬೇಕು.ಲಿಂಗರಾಜ ಅಂಗಡಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ
‘ಎರಡು ದಿನ ನಡೆಯುವ ಸಾಹಿತ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಾಹಿತ್ಯ ಗೋಷ್ಠಿಗಳೊಂದಿಗೆ ಆವರಣದಲ್ಲಿ ಹಿರಿಯ, ಕಿರಿಯ ಸಾಹಿತಿಗಳ ಕನ್ನಡ ಪುಸ್ತಕಗಳ ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ’ ಎಂದರು.
ಮತ್ತೆ ಮತ್ತೆ ಓದಬೇಕೆನ್ನುವ ಬೇಂದ್ರೆ....
ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ... ‘ಇದು ದ.ರಾ.ಬೇಂದ್ರೆ ಅವರು ರಚಿಸಿರುವ ‘ಒಂದೇ ಒಂದೇ ಕರ್ನಾಟಕ ಒಂದೇ’ ಪದ್ಯದ ಸಾಲುಗಳು.. ಕರ್ನಾಟಕ ಒಂದೇ ಎನ್ನುವಾಗನಾಡಿನ ಭಾಷೆ ಧಾರ್ಮಿಕ ವೈವಿಧ್ಯತೆಗಳು ಸಹಜ ಸಮನ್ವಯತೆಯ ಸಾಕ್ಷಿಗಳಾಗಬೇಕು. ಬೇಂದ್ರೆಯವರ ಇಂತಹ ನಾಡಿನ ಅಭಿಮಾನ ಸಾಮಾಜಿಕ ಚಿಂತನೆಗಳನ್ನು ಬದುಕಿನುದ್ದಕ್ಕೂ ರೂಢಿಸಿಕೊಂಡು ಬೆಳೆದು ಬಂದವನು ನಾನು’ ಎಂದು ಬೇಂದ್ರೆ ಅವರ ರಚಿಸಿದ ಪದ್ಯವನ್ನು ಹೇಳುವ ಮೂಲಕ ಕೆ.ಎಸ್.ಶರ್ಮಾ ’ಪ್ರಜಾವಾಣಿ’ಗೆ ತಿಳಿಸಿದರು.
‘ನನ್ನ ಶಿಷ್ಯರೆಲ್ಲರೂ ಸೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ನನಗೆ ಸಂತಸ ತಂದಿದೆ. ಬೇಂದ್ರೆಯವರ ಸಾಮಾಜಿಕ ಪರಿವರ್ತನೆಯ ಸಾಹಿತ್ಯವನ್ನು ಮತ್ತೊಮ್ಮೆ ಅನಾವರಣ ಮಾಡಲು ದೊರೆತ ದೊಡ್ಡ ಸುರ್ವಣಾವಕಾಶ’ ಎಂದರು.
‘ದ.ರಾ.ಬೇಂದ್ರೆ ಅವರೊಂದಿಗೆ 20ಕ್ಕೂ ಹೆಚ್ಚು ವರ್ಷ ಒಡನಾಡಿಯಾಗಿದ್ದೆ. ಅವರ ಸಾಹಿತ್ಯದ ಎಲ್ಲಾ ಮಗ್ಗಲು ಅರಿತಿದ್ದೇನೆ. ಸಾಮಾಜಿಕ ಚಿಂತನೆಯ ಹಿನ್ನೆಲೆಯಲ್ಲಿ ಅವರು ಹಲವಾರು ಕೃತಿ ಕವನಗಳನ್ನು ರಚಿಸಿದ್ದಾರೆ. ಡಾ.ವಾಮನ ಬೇಂದ್ರೆ ನೇತೃತ್ವದ ’ಶ್ರೀಮಾತಾ ಪ್ರಕಾಶನ’ ಮತ್ತು ಡಾ.ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆಯಡಿ ಬೇಂದ್ರೆ ಅವರ ಕೃತಿ ಕವನಗಳನ್ನು ಮರು ಮುದ್ರಣ ಮಾಡುವ ಮೂಲಕ ಅವರನ್ನು ಮತ್ತೆ ಓದುವ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಹೇಳಿದರು.
ಉಪ್ಪಿಟ್ಟು ಶಿರಾ ಗೋಧಿ ಹುಗ್ಗಿ ಅನ್ನ ಸಂಬಾರು...
ಸಾಹಿತ್ಯಾಭಿಮಾನಿಗಳ ಊಟದ ಅಭಿರುಚಿ ತಣಿಸಲು ಮಾರ್ಚ್ 6ರಂದು ಬೆಳಿಗ್ಗೆ ಶಿರಾ ಉಪ್ಪಿಟ್ಟು ಉಪಾಹಾರ ಇರಲಿದೆ. ಮಧ್ಯಾಹ್ನ ಗೋಧಿ ಹುಗ್ಗಿ ಬದನೆಕಾಯಿ ಪಲ್ಯಾ ಅನ್ನ ಸಂಬಾರು. ಸಂಜೆ 5ಕ್ಕೆ ಮಿರ್ಚಿ ಒಗ್ಗರಣೆ ಮಂಡಕ್ಕಿ. ಮಾರ್ಚ್ 7ರಂದು ಬೆಳಿಗ್ಗೆ ಶ್ಯಾವಿಗೆ ಉಪ್ಪಿಟ್ಟು ಬಜಿ. ಮಧ್ಯಾಹ್ನ ಪುಲಾವು ಶಿರಾ. ಸಂಜೆ ಅವಲಕ್ಕಿ ಬಜ್ಜಿ ಇರಲಿದೆ.
ಸಮ್ಮೇಳನದಲ್ಲಿ ಇಂದು...
ಬೆಳಿಗ್ಗೆ 8.30: ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಂದ ರಾಷ್ಟ್ರ ಧ್ವಜಾರೋಹಣ. ಸಾಹಿತಿ ವೆಂಕಟೇಶ ಮಾಚಕನೂರು ಅವರಿಂದ ಕನ್ನಡ ಧ್ವಜಾರೋಹಣ. ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಅವರಿಂದ ಪರಿಷತ್ ಧ್ವಜಾರೋಹಣ. ಬೆಳಿಗ್ಗೆ 9.30: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರಿಂದ ‘ಕನ್ನಡಕ್ಕಾಗಿ ನಡಿಗೆ’ ಮೆರವಣಿಗೆಗೆ ಚಾಲನೆ. ಇದೇ ವೇಳೆ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮೆರವಣಿಗೆಯ ಮೂಲಕ ಸಭಾಂಗಣದ ವೇದಿಕೆಗೆ ಕರೆತರಲಾಗುವುದು. 10.30: ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಧರಣೇಂದ್ರ ಕುರಕುರಿ ಮಾತನಾಡುವರು. ಸಮ್ಮೇಳನದ ಅಧ್ಯಕ್ಷ ಕೆ.ಎಸ್.ಶರ್ಮಾ ಮಾತನಾಡುವರು. ಮಧ್ಯಾಹ್ನ 2: ಸಾಹಿತ್ಯ ಚಿಂತನೆ ಗೋಷ್ಠಿ ನಡೆಯಲಿದೆ. ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿಗಳು ವಿವಿಧ ಸಾಹಿತ್ಯ ವಿಷಯಗಳ ಕುರಿತು ಮಾತನಾಡುವರು. ಮಧ್ಯಾಹ್ನ 3.30: ’ಬೇಂದ್ರೆ ಸಾಹಿತ್ಯದ ಒಳನೋಟಗಳು’. ಸಂಜೆ 5ಕ್ಕೆ ’ಇಂದಿನ ಯುವಕರ ಹವ್ಯಾಸಗಳು– ವ್ಯಕ್ತಿತ್ವ’ ಗೋಷ್ಠಿಗಳು ನಡೆಯಲಿವೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.