ADVERTISEMENT

ಮಾಸ್ಕ್‌ ಧರಿಸದಿದ್ದರೆ ₹200 ದಂಡ

ಹಾಟ್‌ ಸ್ಪಾಟ್‌ ಘೋಷಣೆಯಾದ ಎರಡೇ ದಿನದಲ್ಲಿ ಹೆಚ್ಚಿದ ಓಡಾಟ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 15:28 IST
Last Updated 17 ಏಪ್ರಿಲ್ 2020, 15:28 IST
ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಪೊಲೀಸ್
ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಪೊಲೀಸ್   

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಅವಳಿ ನಗರದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ತುರ್ತು ಅಗತ್ಯದ ಸಂದರ್ಭದಲ್ಲಿಷ್ಟೇ ಹೊರಗೆ ಬರುವವರು ಮಾಸ್ಕ್‌ ಧರಿಸಬೇಕು. ಇಲ್ಲವಾದರೆ ಮೊದಲ ಸಲ ₹200 ದಂಡ ವಿಧಿಸಲಾಗುವುದು. ಇದೇ ತಪ್ಪು ಎರಡನೇ ಬಾರಿ ಮುಂದುವರಿದರೆ ₹300 ದಂಡ ಹಾಕಲಾಗುವುದು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ಉಗುಳಿದರೆ ಮೊದಲ ಬಾರಿಗೆ ₹200, ಎರಡನೇ ಬಾರಿ ಉಗುಳಿದರೆ ₹300 ದಂಡ ವಿಧಿಸಲಾಗುತ್ತಿದೆ. ಬಯಲಿನಲ್ಲಿ ಶೌಚ ಮಾಡಿದರೂ ಇಷ್ಟೇ ದಂಡ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವಾಹನ ಓಡಾಟ ಹೆಚ್ಚಳ: ಸೋಂಕು ಸಮೂಹದಲ್ಲಿ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಜಿಲ್ಲೆಯನ್ನು ಹಾಟ್‌ ಸ್ಪಾಟ್‌ ಎಂದು ಘೋಷಣೆ ಮಾಡಿದ್ದರೂ ಶುಕ್ರವಾರ ವಾಹನಗಳ ಓಡಾಟ ಹೆಚ್ಚಳವಾಗಿತ್ತು.

ಚನ್ನಮ್ಮ ವೃತ್ತ, ಕೇಶ್ವಾಪುರ ವೃತ್ತ, ರೈಲ್ವೆ ನಿಲ್ದಾಣದ ಬಳಿ, ಸರ್ಕಿಟ್‌ ಹೌಸ್‌ ಸಮೀಪ ಮತ್ತು ವಿದ್ಯಾನಗರದಲ್ಲಿ ವಾಹನಗಳ ಓಡಾಟ ಹೆಚ್ಚಳವಿತ್ತು. ಹುಬ್ಬಳ್ಳಿಯಲ್ಲಿ ಕೋವಿಡ್‌ 19 ಪ್ರಕರಣಗಳು ದೃಢಪಟ್ಟ ಬಳಿಕ ಪ್ರಮುಖ ಸ್ಥಳಗಳಲ್ಲಿ ಚೆಕ್‌ ಪೋಸ್ಟ್‌ ಹಾಕಲಾಗಿದೆ. ಇದನ್ನೂ ತಪ್ಪಿಸಿ ಒಳರಸ್ತೆಗಳಲ್ಲಿ ಸಂಚರಿಸುತ್ತಿದ್ದ ಚಿತ್ರಣ ಕಂಡು ಬಂತು.

ಸಂಕಷ್ಟದಲ್ಲಿ ಭಿಕ್ಷಕರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಅಲ್ಲಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆಯಾದರೂ, ನಗರದಲ್ಲಿ ಶುಕ್ರವಾರ ಅಲ್ಲಲ್ಲಿ ಭಿಕ್ಷಕರು ಊಟಕ್ಕಾಗಿ ಪರದಾಡಿದರು. ನ್ಯೂ ಇಂಗ್ಲಿಷ್‌ ಶಾಲೆ ಮತ್ತು ಮೂರುಸಾವಿರ ಮಠದ ಕಾಂಪ್ಲೆಕ್ಸ್‌ನ ಅಂಗಡಿಯೊಂದರೆ ಮುಂದೆ ಕಾಂತಾಬಾಯಿ ಹಾಗೂ ಅವಿ ಕಳದ ಎಂಬುವರು ತಂಗಿದ್ದಾರೆ. ಶಾಲೆ ಮುಂದೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಸಮೀಪ ಭಿಕ್ಷಕರು ಅಂಗಡಿ ಮುಂದೆಯೇ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದರು.

ಬಡಾವಣೆಗೆ ಬೇಲಿ: ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ‌ನಗರ ಪ್ರದೇಶಗಳಲ್ಲಿಯೂ ಆಯಾ ಬಡಾವಣೆಗಳ ಜನ ಬೇಲಿ ಹಾಕುತ್ತಿದ್ದಾರೆ. ಮೂರು ಸಾವಿರ ಮಠದ ಮುಂಭಾಗದ ರಸ್ತೆಯಲ್ಲಿ ಪೊಲೀಸರೇ ಬ್ಯಾರಿಕೇಡ್‌ ಹಾಕಿದ್ದರೆ, ದಾಜೀಬಾನ್ ಪೇಟೆಗೆ ಹೋಗುವ ದಾರಿಯಲ್ಲಿ ಬಡಾವಣೆಯ ಜನ ಅಡ್ಡಲಾಗಿ ಕಟ್ಟಿಗೆಗಳನ್ನು ಕಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.