ADVERTISEMENT

2018ರ ಹಿನ್ನೋಟ: ಧಾರವಾಡದಲ್ಲಿ ಮಹದಾಯಿ ಸಿಹಿ; ‘ಚಿಗರಿ’ ಓಡಾಟದ ಖುಷಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 10:20 IST
Last Updated 31 ಡಿಸೆಂಬರ್ 2018, 10:20 IST
ಮಹದಾಯಿ ನ್ಯಾಯಮಂಡಳಿ ತೀರ್ಪಿನಿಂದ ಖುಷಿಗೊಂಡ ಜನರ ಸಂಭ್ರಮಾಚರಣೆ -ಚಿತ್ರಗಳು: ತಾಜುದ್ದೀನ್‌ ಆಜಾದ್‌/ಈರಪ್ಪ ನಾಯ್ಕರ್
ಮಹದಾಯಿ ನ್ಯಾಯಮಂಡಳಿ ತೀರ್ಪಿನಿಂದ ಖುಷಿಗೊಂಡ ಜನರ ಸಂಭ್ರಮಾಚರಣೆ -ಚಿತ್ರಗಳು: ತಾಜುದ್ದೀನ್‌ ಆಜಾದ್‌/ಈರಪ್ಪ ನಾಯ್ಕರ್   

ಧಾರವಾಡ ಜಿಲ್ಲೆಯ ಎರಡು ಪ್ರಮುಖ ಬೇಡಿಕೆಗಳಾದ ಮಹದಾಯಿ ನದಿ ನೀರನ್ನು ಜಿಲ್ಲೆ ಹರಿಸುವುದು ಹಾಗೂ ಕಾಮಗಾರಿ ವಿಳಂಬದಿಂದಾಗಿ ದುಃಸ್ವಪ್ನವಾಗಿ ಕಾಡುತ್ತಿದ್ದ ಬಿಆರ್‌ಟಿಎಸ್‌ ಸಾರಿಗೆ ಆರಂಭಗೊಂಡಿದ್ದು ಹರ್ಷದಾಯಕ ಸಂಗತಿಗಳು.

ಮಹದಾಯಿ ನ್ಯಾಯಮಂಡಳಿಯು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಮಧ್ಯೆ ನೀರನ್ನು ಹಂಚಿಕೆ ಮಾಡಿದ್ದು, ರಾಜ್ಯದ ಪಾಲಿಗೆ ಒಟ್ಟು 13.07 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಆ ಪೈಕಿ 5.5 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿಯು ಆಗಸ್ಟ್‌ ತಿಂಗಳ ಮಧ್ಯಭಾಗದಲ್ಲಿ ಅವಕಾಶ ಕಲ್ಪಿಸಿದೆ.

ಮೂರು ವರ್ಷಗಳಿಂದಲೂ ನರಗುಂದ, ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮಹದಾಯಿ ನೀರು ಹರಿಸಲು ಒತ್ತಾಯಿಸಿ ಸರಣಿ ಧರಣಿ ಪ್ರತಿಭಟನೆ, ಹರತಾಳಗಳು ನಡೆದಿದ್ದವು. ತೀರ್ಪಿನಿಂದಾಗಿ ಈ ಭಾಗದ ರೈತರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ADVERTISEMENT

ಅವಳಿ ನಗರದ ಜನತೆಗೆ ಸಂಬಂಧಪಟ್ಟಂತೆ ಇನ್ನೊಂದು ಮಹತ್ವದ ವಿಚಾರವೆಂದರೆ, ಬಿಆರ್‌ಟಿಎಸ್‌ ಕಾರ್ಯಾರಂಭ ಮಾಡಿದ್ದು. ಸುಮಾರು ₹ 900 ಕೋಟಿ ಮೊತ್ತದ ಯೋಜನೆಯು ಆರು ವರ್ಷಗಳಿಂದ ತೆವಳುತ್ತಲೇ ಇತ್ತು. ಎರಡು ವರ್ಷಗಳಲ್ಲೇ ಮುಕ್ತಾಯವಾಗಬೇಕಿದ್ದ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆದ ವಿಳಂಬ, ನಾಗರಿಕರ ವಿರೋಧ ಹಾಗೂ ಗುತ್ತಿಗೆದಾರರ ಅಸಹಕಾರದಿಂದಾಗಿ ಕುಂಟುತ್ತಲೇ ಸಾಗಿತ್ತು. ಅಂತಿಮವಾಗಿ ಕಾಮಗಾರಿ ಒಂದು ಹಂತದ ಮುಕ್ತಾಯಕ್ಕೆ ಬಂದಾಗ ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಾಯಿತು.

ಒಟ್ಟು 130 ಚಿಗರಿ ಬಸ್‌ಗಳ ಪೈಕಿ ಪ್ರಸ್ತುತ 80 ಬಸ್‌ಗಳು ಅವಳಿ ನಗರದ ಮಧ್ಯೆ ಓಡಾಡುತ್ತಿವೆ. ಹಂತಹಂತವಾಗಿ ಇನ್ನಷ್ಟು ಬಸ್‌ಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಲಾಗಿದೆ. ಮೊದಲು ಅವಳಿ ನಗರದ ನಾಗರಿಕರು ಐಷಾರಾಮಿ ಎ.ಸಿ. ಬಸ್‌ಗಳಿಗೆ ಹೊಂದಿಕೊಳ್ಳಲು ನಾಗರಿಕರು ಪರದಾಡಿದರು. ಆದರೆ, ನಿರ್ವಹಣೆಯಲ್ಲಿ ದಕ್ಷತೆ ತೋರಿದ್ದರಿಂದಾಗಿ ಅತಿ ಕಡಿಮೆ ಸಮಯದಲ್ಲಿ ಪ್ರಯಾಣಿಕರು ತಮ್ಮ ಗಮ್ಯ ಸ್ಥಾನಗಳನ್ನು ತಲುಪಲು ಸಾಧ್ಯವಾಗಿದೆ.

ಅವಳಿ ನಗರದ ನಡುವೆ ‘ಚಿಗರಿ’ ಬಸ್‌ ಓಡಾಟದ ಖುಷಿ

ಮೊದಲ ಹಂತದಲ್ಲಿ ಯುವ ಸಮುದಾಯವನ್ನು ಆಕರ್ಷಿಸಲು ಬಿಆರ್‌ಟಿಎಸ್‌ನವರು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದು ಸಹ ಚಿಗರಿ ಬಸ್‌ ಜನಪ್ರಿಯವಾಗಲು ಕಾರಣವಾಯಿತು. ಮತ್ತೊಂದೆಡೆ ನಿತ್ಯ ಸಂಚರಿಸುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 40 ಬಸ್‌ಗಳನ್ನು ಅವಳಿ ನಗರದ ಮಧ್ಯದ ಸೇವೆಯಿಂದ ಹಿಂದಕ್ಕೆ ಪಡೆಯಲಾಯಿತು. ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದವರು ಸಹ ಚಿಗರಿಯಲ್ಲೇ ಬರಲು ಆರಂಭಿಸಿದ್ದಾರೆ. ಹೀಗಾಗಿ ನಿತ್ಯ 40 ಸಾವಿರಕ್ಕೂ ಅಧಿಕ ಪ್ರಯಾಣಿಕರು‘ಚಿಗರಿ’ ಏರುತ್ತಿದ್ದಾರೆ.

ಉಡಾನ್‌: ಮುಗಿಲ ತುಂಬ ವಿಮಾನಗಳ ಬಿಂಬ
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ನಿರಂತರ ಬಿಜಿಯಾಗಿರಿಸಿದ್ದು ಈ ವರ್ಷವೇ. ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಲ್ಲಿ ಹುಬ್ಬಳ್ಳಿಯನ್ನು ಆಯ್ಕೆ ಮಾಡಿತು. ಹೀಗಾಗಿ, ಇಂಡಿಯನ್‌ ಏರ್‌ಲೈನ್ಸ್‌, ಇಂಡಿಗೊ, ಸ್ಪೈಸ್‌ ಜೆಟ್‌ ಸಂಸ್ಥೆಗಳು ಬೆಂಗಳೂರು, ಮುಂಬೈ, ಹೈದರಾಬಾದ್‌, ಅಹಮದಾಬಾದ್‌, ಕೊಚ್ಚಿನ್‌, ಚೆನ್ನೈಗೆ ನೇರ ವಿಮಾನ ಸಂಪರ್ಕಗಳನ್ನು ಕಲ್ಪಿಸಿದೆ. ಉಡಾನ್‌ನಡಿ ಅರ್ಧದಷ್ಟು ಸೀಟುಗಳ ಅರ್ಧ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವುದರಿಂದ ಕಡಿಮೆ ದರದಲ್ಲಿ ಪ್ರಯಾಣಿಕರು ವಿಮಾನ ಹತ್ತುವಂತಾಯಿತು.


ಮೇ ತಿಂಗಳಲ್ಲಿ ಸ್ಪೈಸ್‌ ಜೆಟ್‌ ಆ ಬಳಿಕ ಇಂಡಿಗೊ ವಿಮಾನಯಾನ ಸೇವೆ ಆರಂಭವಾದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಯಾಯಿತು. ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ವಿಮಾನಗಳ ಸೇವೆ ಪಡೆದಿದ್ದು, ಈ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣ ಹೊಸ ದಾಖಲೆ ಸೃಷ್ಟಿಸಿದೆ. ರನ್‌ ವೇ ವಿಸ್ತರಣೆ ಮಾಡಿದ ಪರಿಣಾಮ ಬೋಯಿಂಗ್‌ ಸರಣಿಯ ದೊಡ್ಡ ವಿಮಾನಗಳೂ ಇಳಿಯುವಂತಾಗಿದೆ. ಇನ್ನಷ್ಟು ನಗರಗಳಿಗೆ ವಿಮಾನ ಸೇವೆ ಕಲ್ಪಿಸಲು ವಿಮಾನಯಾನ ಸಂಸ್ಥೆಗಳು ಪೈಪೋಟಿ ಆರಂಭಿಸಿವೆ.

ಜಿಲ್ಲೆಗೆ ದಕ್ಕಿದ ಸಚಿವ ಸ್ಥಾನ
ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ಧಾರವಾಡ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ, ವಾರದ ಹಿಂದೆ ನಡೆದ ಸಂಪುಟ ವಿಸ್ತರಣೆಯಲ್ಲಿ ಕುಂದಗೋಳ ಶಾಸಕ, ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಸ್‌.ಶಿವಳ್ಳಿ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದ್ದು, ಪೌರಾಡಳಿತ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಜಿಲ್ಲೆಗೆ ಪ್ರಾತಿನಿಧ್ಯವನ್ನು ಕಲ್ಪಿಸಲಾಗಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸಂತೋಷ ಲಾಡ್‌ ಹಾಗೂ ವಿನಯ ಕುಲಕರ್ಣಿ ಜಿಲ್ಲೆಯಿಂದ ಸಚಿವರಾಗಿದ್ದರು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಆರು ತಿಂಗಳ ಬಳಿಕ ಶಿವಳ್ಳಿ ಅವರಿಗೆ ಸಚಿವ ಸ್ಥಾನ ದೊರೆಯುವ ಮೂಲಕ ಜಿಲ್ಲೆ ಒಬ್ಬ ಸಚಿವರನ್ನು ಪಡೆದಂತಾಗಿದೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಜನರ ನೀರೀಕ್ಷೆ ಹೆಚ್ಚಿಸಿರುವ ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.