ADVERTISEMENT

NWKRTC ಬಸ್‌ಗಳಿಂದ ಎಂಟು ತಿಂಗಳಲ್ಲಿ 208 ಅಪಘಾತ!

2022ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 53 ಗಂಭೀರ ಅಪಘಾತ

ಮಹಮ್ಮದ್ ಶರೀಫ್ ಕಾಡುಮಠ
Published 24 ಡಿಸೆಂಬರ್ 2022, 4:37 IST
Last Updated 24 ಡಿಸೆಂಬರ್ 2022, 4:37 IST
NWKRTC
NWKRTC    

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಎಂಟು ತಿಂಗಳಲ್ಲೇ 208 ಅಪಘಾತಗಳು ಸಂಭವಿಸಿವೆ. 2022ರ ಏಪ್ರಿಲ್‌ನಿಂದ ನವೆಂಬರ್‌ ವರೆಗೆ 53 ಗಂಭೀರ ಅಪಘಾತ ಹಾಗೂ 155 ಸಾಮಾನ್ಯ ಮತ್ತು ಗಂಭೀರ ಅಪಘಾತಗಳಾಗಿವೆ.

ಇಂಧನ ಬೆಲೆ ಏರಿಕೆ ಹಾಗೂ ಕಡಿಮೆ ಪ್ರಯಾಣ ದರ, ಉಚಿತ ಬಸ್‌ ಪಾಸ್‌ಗಳು ಈಗಾಗಲೇ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಏರುಪೇರಾಗಿಸಿವೆ. ಗಾಯಗೊಂಡ ಕುಟುಂಬಗಳಿಗೆ, ಬಸ್ ಚಾಲಕರ ಚಿಕಿತ್ಸೆಗೆ ಸಂಸ್ಥೆ ಹಣ ವ್ಯಯಿಸಬೇಕಾಗುವುದರಿಂದ ಆರ್ಥಿಕ ಹೊಡೆತಕ್ಕೆ ಅಪಘಾತವೂ ಕಾರಣವಾಗುತ್ತಿದೆ.

‘ಎದುರಿನಿಂದ ಬಂದ ವಾಹನಗಳು ಡಿಕ್ಕಿಯಾಗಿ 52 ಅಪಘಾತ ಸಂಭವಿಸಿದರೆ, 145 ಅಪಘಾತ ವಾಹನದ ಹಿಂಬದಿ ಹಾಗೂ ಪಕ್ಕದಿಂದ ತಾಗಿ ಸಂಭವಿಸಿವೆ. ಬಹುತೇಕ ಎಲ್ಲ ಅಪಘಾತಗಳೂ ಹಗಲಿನಲ್ಲಿಯೇ ಸಂಭವಿಸಿವೆ’ ಎಂದು ಮಾಹಿತಿ ನೀಡುತ್ತಾರೆ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್.

ADVERTISEMENT

ಒಟ್ಟು ಅಪಘಾತಗಳ ಪೈಕಿ ಶೇ 50ರಷ್ಟು ಅಪಘಾತಗಳಿಗೆ ದ್ವಿಚಕ್ರ ವಾಹನ ಚಾಲಕರ ಅಸುರಕ್ಷಿತ ಚಾಲನೆ ಕಾರಣ
ವಾಗಿದ್ದು, ಶೇ 30ರಷ್ಟು ಅಪಘಾತಗಳಿಗೆ ಸಂಸ್ಥೆಯ ಚಾಲಕರು ನೇರ ಹೊಣೆಗಾರರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

2021-22ರಲ್ಲಿ 300 ಅಪಘಾತ: 2021–22ರಲ್ಲಿಯೇ ಸಂಸ್ಥೆಯ ಬಸ್‌ಗಳಿಗೆ 300 ಅಪಘಾತ ಪ್ರಕರಣಗಳು ಸಂಭವಿಸಿದ್ದವು. ಅಂದಾಜು ₹40 ಕೋಟಿಯಷ್ಟು ಪರಿಹಾರವನ್ನು ಸಂಸ್ಥೆ ಒದಗಿಸಲಾಗಿದ್ದು, ಆರ್ಥಿಕ ಹೊರೆಗೆ ಬರೆಎಳೆದಂತಾಗಿದೆ.

ಗಂಭೀರ ಅಪಘಾತಗಳಲ್ಲಿ ಪ್ರಯಾಣಿಕರು,‌ ಚಾಲಕ ಗಾಯಗೊಳ್ಳುವುದರ ಜೊತೆಗೆ ಬಸ್ಸಿಗೂ ಹಾನಿಯಾಗುವುದರಿಂದ ಹೊರೆ ಎನಿಸುತ್ತವೆ. ಸಾವು ಸಂಭವಿಸುವಂತಹ ಅಪಘಾತ ನಡೆದರೆ ಅದನ್ನು ಭೀಕರ ಅಪಘಾತ ಎಂದು ಪರಿಗಣಿಸಲಾಗುತ್ತದೆ.

ಅಪಘಾತ ನಿಯಂತ್ರಣಕ್ಕೆ ಕ್ರಮ: ಚಾಲಕರು, ನಿರ್ವಾಹಕರು, ಮೇಲ್ವಿಚಾರಕರು, ಅಧಿಕಾರಿಗಳಿಗೂ ಸೇರಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ನುರಿತರನ್ನು ಕರೆಯಿಸಿ ಆಗಾಗ ತರಬೇತಿ ನೀಡಲಾಗುತ್ತದೆ. ಅಪಘಾತ ಸಂಭವಿಸಿದ ಬಸ್‌ಗಳ ಚಾಲಕರಿಗೆ ಪ್ರತ್ಯೇಕವಾಗಿ ಹೆಚ್ಚಿನ ತರಬೇತಿಯನ್ನೂ ನೀಡಲಾಗುತ್ತದೆ ಎಂದುಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಮಾಹಿತಿ ನೀಡಿದರು.

ಸಂಸ್ಥೆಯಲ್ಲಿ ಚಾಲಕರನ್ನು ಆಯ್ಕೆ ಮಾಡುವಾಗ ಚಾಲನಾ ವೃತ್ತಿ ಪರೀಕ್ಷೆ ನಡೆಸಲಾಗುತ್ತದೆ. ನೇಮಕಾತಿ ನಂತರವೂ ಚಾಲಕರಿಗೆ ಸುರಕ್ಷಿತ ಚಾಲನೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಸುರಕ್ಷಿತ ಚಾಲನೆಯಿಂದ ಸಂಸ್ಥೆಯ ಚಾಲಕರಿಂದಾಗಿ ಅಪಘಾತ ಸಂಭವಿಸಿದರೆ ಅಂತಹ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.