ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 14 ವರ್ಷದೊಳಗಿನ 458 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ನಡೆಸಿದ ಸಮೀಕ್ಷೆಯಿಂದ ಪತ್ತೆಯಾಗಿದೆ.
ಪ್ರತಿ ವರ್ಷದಂತೆ ಈ ವರ್ಷ ಸಹ ಇಲಾಖೆಯು, ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಜನವರಿಯಲ್ಲಿ ಕೈಗೊಂಡಿತ್ತು. ಇದರಲ್ಲಿ ದೊರೆತ ಮಾಹಿತಿಯಂತೆ 26 ಮಕ್ಕಳು ಶಾಲೆಗೆ ದಾಖಲಾಗಿಲ್ಲ. ಕೆಲವು ಮಕ್ಕಳು ಪೋಷಕರೊಂದಿಗೆ ಜಿಲ್ಲೆಗೆ ವಲಸೆ ಬಂದು, ತಾತ್ಕಾಲಿಕವಾಗಿ ಇಲ್ಲಿನ ಶಾಲೆಗಳಲ್ಲಿ ಶಿಕ್ಷಣ ಪಡೆದು, ವಾಪಸ್ಸಾಗಿದ್ದಾರೆ. ಉಳಿದಂತೆ ವಿವಿಧ ಕಾರಣಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
‘ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ 2,125 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು ಪತ್ತೆಯಾಗಿತ್ತು. ಅದು ಕೋವಿಡ್ ಸಮಯವಾಗಿದ್ದರಿಂದ ಹಲವು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಅವರನ್ನು ಸಹ ಶಾಲೆಯಿಂದ ಹೊರಗುಳಿದವರು ಎಂದು ಮಾಹಿತಿ ದಾಖಲಿಸಲಾಗಿತ್ತು. ವಾಸ್ತವದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಕಡಿಮೆಯಿತ್ತು’ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಜಿ.ಎನ್. ಮಠಪತಿ ತಿಳಿಸಿದರು.
ಕ್ರಮೇಣ ಇಳಿಕೆ: ‘ಶಾಲೆಗೆ ಮಕ್ಕಳನ್ನು ದಾಖಲಿಸದಿರುವುದು ಅಥವಾ ದಾಖಲಾದ ಮಕ್ಕಳನ್ನು ಶಾಲೆ ಬಿಡಿಸಲು ಬಹುತೇಕ ಪೋಷಕರು ಮುಂದಾಗುವುದಿಲ್ಲ. ಮನೆ, ಹೊಲದ ಕೆಲಸ, ಓದಿನಲ್ಲಿ ನಿರಾಸಕ್ತಿ, ಶಿಕ್ಷಣ ಕೊಡಿಸಲು ಪೋಷಕರ ನಿರ್ಲಕ್ಷ್ಯ ವಹಿಸುವ ಕಾರಣದಿಂದ ಕೆಲವು ಮಕ್ಕಳಷ್ಟೇ ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿವೇತನ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಸೌಲಭ್ಯಗಳು ಸಿಗುವುದಲ್ಲದೆ, ಪೋಷಕರು ಹಾಗೂ ಮಕ್ಕಳಿಗೆ ಶಿಕ್ಷಣದ ಮಹತ್ವವೇನೆಂದು ತಿಳಿದಿದೆ’ ಎಂದು ಅವರು ವಿವರಿಸಿದರು.
ಕಡ್ಡಾಯ ಶಿಕ್ಷಣ ಕಾನೂನಿನ ಅರಿವು: ‘ಶಾಲೆಗೆ ದಾಖಲಾದ ಮಕ್ಕಳು ಯಾವುದಾದರೂ ಕಾರಣದಿಂದ ಒಂದು ವಾರದವರೆಗೆ ಗೈರುಹಾಜರಾದರೂ, ಮುಖ್ಯಶಿಕ್ಷಕರು ಆ ಮಗುವಿನ ಮನೆಗೆ ತೆರಳಿ, ವಿಚಾರಿಸುತ್ತಾರೆ. ಶಾಲೆಗೆ ಮರಳಿ ಕಳುಹಿಸಲು ಪೋಷಕರಿಗೆ ಮನವಿ ಮಾಡುತ್ತಾರೆ. 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂಬ ಕಾನೂನಿನ ಅರಿವು ಮೂಡಿಸಿ, ಕಾನೂನು ಉಲ್ಲಂಘಿಸಿದರೆ ವಿಧಿಸಲಾಗುವ ಶಿಕ್ಷೆ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಹುಬ್ಬಳ್ಳಿಯೊಂದರಲ್ಲೇ 200 ವಿದ್ಯಾರ್ಥಿಗಳ ಮನೆಗೆ ಹೋಗಿ, ಪೋಷಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಜಿ.ಎನ್. ಮಠಪತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.