ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ: ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಶೇ 97ರಷ್ಟು ಪೂರ್ಣ

ಬಿ.ಜೆ.ಧನ್ಯಪ್ರಸಾದ್
Published 5 ಜುಲೈ 2024, 5:27 IST
Last Updated 5 ಜುಲೈ 2024, 5:27 IST
<div class="paragraphs"><p>ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದಲ್ಲಿ ರೈತರು ಕೃಷಿ ಕಾಯಕಕ್ಕೆ ಚಕ್ಕಡಿಯಲ್ಲಿ ತೆರಳುತ್ತಿರುವುದು </p></div>

ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದಲ್ಲಿ ರೈತರು ಕೃಷಿ ಕಾಯಕಕ್ಕೆ ಚಕ್ಕಡಿಯಲ್ಲಿ ತೆರಳುತ್ತಿರುವುದು

   

 – ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ

ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.70 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಈ ಪೈಕಿ ಈವರೆಗೆ 2.63 ಲಕ್ಷ (ಶೇ 97) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಲವೆಡೆ ಹದ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ADVERTISEMENT

ರೈತರು ಈ ಬಾರಿ ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ. ಈ ಬೆಳೆ ಬಿತ್ತನೆ ಗುರಿ 67 ಸಾವಿರ ಹೆಕ್ಟೇರ್‌ ಇದ್ದರೆ, 97 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ನವಲಗುಂದ ತಾಲ್ಲೂಕಿನಲ್ಲಿ ಅತೀ ಹೆಚ್ಚು 38 ಸಾವಿರ ಹೆಕ್ಟೇರ್‌, ಅಣ್ಣಿಗೇರಿ ತಾಲ್ಲೂಕಿನಲ್ಲಿ 19 ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ. ಮುಸುಕಿನ ಜೋಳ, ಸೋಯಾಬಿನ್‌, ಹತ್ತಿ ಹೆಚ್ಚು ಬಿತ್ತನೆ ಮಾಡಿದ್ದಾರೆ.

‘ಹೆಸರು ಕಡಿಮೆ ಅವಧಿ (70 ದಿನ) ಬೆಳೆ. ಈ ಬಾರಿ ಬೇಗ ಮಳೆಯಾಗಿದೆ. ಇದು ಸುಲಭದ ಬೆಳೆ. ಹಿಂಗಾರು ಹಂಗಾಮು ಬಿತ್ತನೆಗೆ ಅನುಕೂಲವಾಗುತ್ತದೆ ಎಂದು ಹಲವು ರೈತರು ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ. ಈಗ ಹೆಸರಿಗೆ ಬೆಲೆ ಚೆನ್ನಾಗಿದೆ. ಕನಿಷ್ಠ ಬೆಂಬಲ ಬೆಲೆಯೂ ಚೆನ್ನಾಗಿದೆ. ಹೀಗಾಗಿ, ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ’ ಎಂದು ಕೃಷಿ ಜಂಟಿ ನಿರ್ದೇಶಕ ಕಿರಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಏಕದಳ ಧಾನ್ಯ (ಭತ್ತ, ಜೋಳ, ರಾಗಿ, ಮುಸುಕಿನ ಜೋಳ...) 59 ಸಾವಿರ ಹೆಕ್ಟೇರ್‌, ದ್ವಿದಳ ಧಾನ್ಯ (ಹೆಸರು, ಉದ್ದು, ತೊಗರಿ, ಹುರುಳಿ...) 1.09 ಲಕ್ಷ ಹೆಕ್ಟೇರ್‌, ಎಣ್ಣೆಕಾಳು (ಶೇಂಗಾ, ಸೋಯಾಬೀನ್‌, ಎಳ್ಳು..) 54 ಸಾವಿರ ಹೆಕ್ಟೇ‌ರ್‌, ವಾಣಿಜ್ಯ ಬೆಳೆ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮುಂಗಾರು ಪೂರ್ವದಲ್ಲಿ ಸ್ವಲ್ಪ ಮಳೆಯಾಗಿತ್ತು. ಜೂನ್‌ನಲ್ಲಿ ಹುಬ್ಬಳ್ಳಿ ನಗರ ಮತ್ತು ಅಳ್ನಾವರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಿದೆ. ಬಾಕಿ 6 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕೊಂಚ ಜಾಸ್ತಿ ಸುರಿದಿದೆ.

ಕೆಲವು ರೈತರು ಮೇ ಅಂತ್ಯದಲ್ಲಿ, ಇನ್ನು ಕೆಲವರು ಜೂನ್‌ನಲ್ಲಿ ಬಿತ್ತನೆ ಮಾಡಿದ್ದಾರೆ. ಪೈರುಗಳು ಹುಲಸಾಗಿ ಚಿಗುರಿವೆ. ಕೆಲ ದಿನಗಳಿಂದ ಆಗಾಗ್ಗೆ ಸಾಧಾರಣವಾಗಿ ಮಳೆಯಾಗುತ್ತಿದೆ. ಕಳೆ ಕೀಳುವುದು, ಗೊಬ್ಬರ ಹಾಕುವುದು, ಕೀಟ ನಾಶಕ ಸಿಂಪಡಿಸುವುದು, ಎಡೆಕುಂಟೆ ಹೊಡೆಯುವುದು ಮೊದಲಾದ ಚಟುವಟಿಕೆಗಳಲ್ಲಿ ರೈತರು ನಿರತರಾಗಿದ್ದಾರೆ.

‘ಹೆಸರು ಬಿತ್ತಿ ಒಂದು ತಿಂಗಳಾಗಿದೆ. ಪೈರು ಚೆನ್ನಾಗಿದೆ. ಈ ಬಾರಿ ಈ ಬೆಳೆ ಕೈಹಿಡಿಯುವ ನಿರೀಕ್ಷೆ ಇದೆ. ಆದರೆ, ಈಗ ಮಳೆ ಇಲ್ಲ. ಗಾಳಿ ರಭಸವಾಗಿ ಬೀಸುತ್ತದೆ. ಇನ್ನು 10 ದಿನಗಳಲ್ಲಿ ಹದ ಮಳೆಯಾಗದಿದ್ದರೆ ಬೆಳೆ ಕುಂ‌ಠಿತವಾಗುತ್ತದೆ’ ಎಂದು ನವಲಗುಂದ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಕೃಷಿಕ ಚನ್ನಬಸವನಗೌಡ ಪಾಟೀಲ ತಿಳಿಸಿದರು.

ಧಾರವಾಡ ತಾಲ್ಲೂಕಿನ ಮರೆವಾಡ ಗ್ರಾಮದ ಹೊಲವೊಂದರಲ್ಲಿ ರೈತರು ಕೃಷಿ ಕೆಲಸ ‌ಮಾಡಿ ಊಟ ಮಾಡುತ್ತಿರುವುದು – ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಮುಂಗಾರು ಹಂಗಾಮಿಗೆ 18 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿತ್ತು. ಈವರೆಗೆ 15 ಸಾವಿರ ಕ್ವಿಂಟಲ್‌ ಮಾರಾಟವಾಗಿದೆ. 65 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರ ದಾಸ್ತಾನು ಮಾಡಲಾಗಿತ್ತು. 37 ಸಾವಿರ ಮೆಟ್ರಿಕ್‌ ಟನ್‌ ಮಾರಾಟವಾಗಿದೆ.
-ಕಿರಣಕುಮಾರ, ಜಂಟಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.