ADVERTISEMENT

ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ

ಮಾಧ್ವ ತತ್ವಜ್ಞಾನ ಸಮ್ಮೇಳನದ ಸಮಾರೋಪದಲ್ಲಿ ಪೇಜಾವರಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 5:25 IST
Last Updated 19 ಸೆಪ್ಟೆಂಬರ್ 2022, 5:25 IST
ಹುಬ್ಬಳ್ಳಿ ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ನ್ಯಾಯಸುಧಾ ಮಂಗಲೋತ್ಸವದ ಸಮಾರೋಪದಲ್ಲಿ ವಿಶ್ವಪಥ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಉಡುಪಿ ಪೇಜಾವರಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ
ಹುಬ್ಬಳ್ಳಿ ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ನ್ಯಾಯಸುಧಾ ಮಂಗಲೋತ್ಸವದ ಸಮಾರೋಪದಲ್ಲಿ ವಿಶ್ವಪಥ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಉಡುಪಿ ಪೇಜಾವರಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ   

ಶ್ರೀ ವಿಶ್ವೇಶತೀರ್ಥ ವೇದಿಕೆ(ಹುಬ್ಬಳ್ಳಿ): ‘ಭಾರತೀಯ ಸಂವಿಧಾನಕ್ಕೆ ತಲೆಬಾಗಿ ನಡೆಯುವವನೇ ನಿಜವಾದ ದೇಶಭಕ್ತ’ ಎಂದುಉಡುಪಿ ಪೇಜಾವರಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮಾಧ್ವ ಮಹಾಮಂಡಲದ 29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ನ್ಯಾಯಸುಧಾ ಮಂಗಲೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ದೇಶಭಕ್ತಿ ಎಂದರೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದುಕುವುದು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಇನ್ನಿತರ ರಾಷ್ಟ್ರೀಯ ಹಬ್ಬಗಳು ದೇಶಭಕ್ತಿಯ ಸಂಕೇತ. ಅವು ಆ ದಿನಕ್ಕೆ ಮುಕ್ತಾಯವಾಗುತ್ತವೆ’ ಎಂದರು.

ADVERTISEMENT

‘ಭಗವಂತನ ಚಿಂತನೆಯಿಂದ ಪ್ರತಿಯೊಬ್ಬರೂ ಉತ್ತಮ ನಾಗರಿಕರಾಗಬೇಕು. ಯಾರಲ್ಲಿ ದೋಷವಿಲ್ಲವೋ ಅವನೇ ಭಗವಂತ. ಅವನನ್ನು ಯಾವ ಹೆಸರಿನಿಂದಾದರೂ ಕರೆಯಬಹುದು. ಅವನನ್ನು ಸ್ಮರಿಸಿ ತಲೆಬಾಗುವುದೆಂದರೆ ಸದ್ಗುಣಗಳನ್ನು ಮೈಗೂಡಿಸಿಕೊಂಡು ದುರ್ಗಣಗಳನ್ನು ದೂರ ಮಾಡುವುದು ಎಂದರ್ಥ. ಇದರಿಂದ ಅವನ ಆರಾಧನೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ದೇಶ ಒಗ್ಗಟ್ಟಾಗಿ ಇರಬೇಕಾದರೆ ಸಮಾಜದಲ್ಲಿರುವ ಜಾತಿ ಮತ್ತು ಮೇಲು–ಕೀಳು ಭಾವನೆಯನ್ನು ಕಿತ್ತೊಗೆಯಬೇಕು. ಎಲ್ಲಾ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡಿರುವ ಉದಾರ ಚರಿತ್ರೆ ಹೊಂದಿರುವ ದೇಶ ನಮ್ಮದು’ ಎಂದು ಅಭಿಪ್ರಾಯಪಟ್ಟರು.

‘ಭಾರತೀಯ ತತ್ವಜ್ಞಾನ ಎಂದರೆ ಜೀವನ ಆಚರಣೆಯ ಒಂದು ಭಾಗ. ಒತ್ತಾಯಪೂರ್ವಕವಾಗಿ ನಾವ್ಯಾರೂ ಮತಾಂತರ ಮಾಡಲು ಹೋಗಿಲ್ಲ. ತತ್ವ–ಸಿದ್ಧಾಂತಗಳು ಬೇರೆಯಾಗಿದ್ದರೂ ಆತ್ಮವಿಶ್ವಾಸ, ನಂಬಿಕೆಯಿಂದ ಒಬ್ಬರನ್ನೊಬ್ಬರು ಅರಿತು ಬಾಳಬೇಕಿದೆ. ನಮ್ಮಲ್ಲಿರುವ ಯೋಗ, ತತ್ವಜ್ಞಾನ, ಆಹಾರ ಪದ್ಧತಿ, ಕುಟುಂಬ ಪದ್ಧತಿ, ಜ್ಞಾನ ಭಂಡಾರವನ್ನು ಜಗತ್ತಿಗೆ ಹಂಚಿ ಪ್ರೀತಿಯಿಂದ ಬದುಕಬೇಕಿದೆ. ಜಗತ್ತಿಗೆ ಹಿರಿಯಣ್ಣ ಆಗುವ ಬದಲು, ವಿಶ್ವಕ್ಕೆ ಗುರುವಾಗಬೇಕು’ ಎಂದರು.

ವೇದಿಕೆ ಮೇಲಿದ್ದ ಗಣ್ಯರು ಹಾಗೂ ಸ್ವಾಮೀಜಿಗಳು ವಿಶ್ವಪಥ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಡಾ. ಎಚ್. ಸತ್ಯನಾರಾಯಣಾಚಾರ್ಯ, ವಿದ್ವಾನ್ ಪ್ರದ್ಯುಮ್ನಾಚಾರ್ಯ ಜೋಶಿ, ವಿದ್ವಾನ್ ವಿಜಯೀಂದ್ರಾಚಾರ್ಯ ಉಪನ್ಯಾಸ ನೀಡಿದರು.

ದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸಾಚಾರ್ಯ ವರಖೇಡಿ, ಸಮ್ಮೇಳನದ ಗೌರವಾಧ್ಯಕ್ಷ ಶ್ರೀಕಾಂತ ಕೆಮ್ತೂರ್, ಸಂಚಾಲಕ ಸಿ. ಬದರೀನಾಥಾಚಾರ್ಯ, ಶ್ರೀಪಾದ ಸಿಂಗನಮಲ್ಲಿ, ಅನಂತರಾಜ ಭಟ್, ಎ.ಸಿ. ಗೋಪಾಲ, ಸದಾನಂದ ಕಾಮತ, ಗೋಪಾಲ ಕುಲಕರ್ಣಿ, ಸುನೀಲ ಗುಮಾಸ್ತೆ, ಆರ್.ಪಿ. ಕುಲಕರ್ಣಿ, ಕೇಶವ ಬಾದನಟ್ಟಿ, ಸಂಜೀವ ಕುಲಕರ್ಣಿ, ದಿಲೀಪಾಚಾರ್ಯ ಸಾಹುಕಾರ, ಡಾ. ಸತ್ಯಮೂರ್ತಿ ಆಚಾರ್ಯ, ವಿಶ್ವನಾಥ ಕುಲಕರ್ಣಿ, ಸುಶೀಲೇಂದ್ರ ಕುಂದರಗಿ, ಕೆ.ಕೆ. ಕುಲಕರ್ಣಿ ಇದ್ದರು.

‘ಇಹ–ಪರಕ್ಕೆ ದಾರಿ ತೋರುವ ಮತ’

‘ಕನಕದಾಸರು ಸಹ ಆಚಾರ್ಯ ಮಧ್ವರ ಮತದಲ್ಲಿನ ಔನ್ನತ್ಯವನ್ನು ಕಂಡುಕೊಂಡು ಅದರಲ್ಲಿಯೇ ಸಾಕ್ಷಾತ್ಕಾರ ಪಡೆದರು. ಇಹ–ಪರಗಳಲ್ಲಿಯೂ ದಾರಿ ತೋರುವ ಮತ ಇದಾಗಿದೆ’ ಎಂದು ಪಂ. ಬ್ರಹ್ಮಣ್ಯಆಚಾರ್ಯ ಅಭಿಪ್ರಾಯಪಟ್ಟರು.

‘ಹರಿದಾಸರು ಕಂಡ ಮಧ್ವ ಸಿದ್ಧಾಂತ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧ್ವವು ಶಾಸ್ತ್ರಸಮ್ಮತವಾದ ಮತವಾಗಿದೆ. ಹರಿ ಸರ್ವೋತ್ತಮ ತತ್ವವನ್ನು ಹೇಳುತ್ತದೆ. ಸಮಸ್ತ ಹರಿದಾಸರು ಒಪ್ಪಿಕೊಂಡಿರುವ ಇದರಲ್ಲಿ ಭಕ್ತಿ ಮತ್ತು ಜ್ಞಾನಕ್ಕೆ ಮಹತ್ವ ನೀಡಲಾಗಿದೆ’ ಎಂದರು.

ಪಂ. ವ್ಯಾಸನಕೆರೆ ಪ್ರಭಂಜನಾಚಾರ್ಯ ಮಾತನಾಡಿ, ‘ಸಮಾಜವಾದ ಎಂದರೆ ಎಲ್ಲ ಸಮಾಜವನ್ನು ಸಮಾನಾಗಿ ಕಾಣುವುದು. ಆಚಾರ್ಯ ಮಧ್ವರ ಸಿದ್ಧಾಂತದಲ್ಲಿ ಸಮದರ್ಶಿತ್ವದ ಬಗ್ಗೆ ಹೇಳಲಾಗಿದೆ. ಜಗತ್ತಿನಲ್ಲಿರುವ ಎಲ್ಲರನ್ನೂ ಪ್ರೀತಿಯಿಂದ ನೋಡಬೇಕು ಎಂದೇ ಆಚಾರ್ಯರು ಹೇಳಿದ್ದಾರೆ’ ಎಂದು ತಿಳಿಸಿದರು.

ಪಂ. ಬದರಿನಾಥಾಚಾರ್ಯ ನಿರೂಪಿಸಿದರು. ಪೇಜಾವರದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.