ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ 2024–25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹಲವು ಪ್ರಸ್ತಾವಗಳನ್ನು ಘೋಷಿಸಿದ್ದು, ಈ ಭಾಗದ ಉದ್ದಿಮೆದಾರರಿಗೆ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ’ ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಸಂಶಿಮಠ ತಿಳಿಸಿದ್ದಾರೆ.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು– ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿಯಲ್ಲಿ ಧಾರವಾಡ ಸಮೀಪ ಸುಮಾರು 6 ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ನೋಡಲ್ ವಲಯವನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಕುರಿತು ಪ್ರಸ್ತಾವ ಮಾಡಿರುವುದು ಸ್ವಾಗತಾರ್ಹವಾಗಿದೆ‘ ಎಂದಿದ್ದಾರೆ.
10 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ:
‘ಕಿತ್ತೂರು ಕರ್ನಾಟಕ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪನೆಯನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸುವ ಪ್ರಸ್ತಾವನೆಯಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದಿದ್ದಾರೆ.
‘ನಮ್ಮ ಸಂಸ್ಥೆಯು ಸಲ್ಲಿಸಿದ ಪ್ರಸ್ತಾವಗಳಲ್ಲಿ ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ ವಿಶ್ವದರ್ಜೆಗೆ ಉನ್ನತಿಕರಿಸಲು ಮೂಲಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪೇರಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯು ಈ ಆಯವ್ಯಯದಲ್ಲಿ ಸೇರಿಸಲಾಗಿದೆ. ಇದೊಂದು ಸಂಸ್ಥೆಗೆ ಹೆಮ್ಮೆ ತರುವ ಅಂಶವಾಗಿದೆ‘ ಎಂದಿದ್ದಾರೆ.
‘ಜವಳಿ ಪಾರ್ಕ್‌ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿ ಅನ್ವಯ ಸಹಾಯಧನವನ್ನು ನೀಡಲಾಗುವ ಪ್ರಸ್ತಾವನೆಯು ಸಹ ಸ್ವಾಗತಾರ್ಹವಾಗಿದೆ. ಒಟ್ಟಾರೆ ಈ ಮೇಲಿನ ಅಂಶಗಳು ಕೈಗಾರಿಕಾ ವಲಯಕ್ಕೆ ಸಮಾಧಾನ ತರುವ ಮತ್ತು ಕೈಗಾರಿಕಾ ವಲಯವನ್ನು ಉತ್ತೇಜಿಸುವ ಕ್ರಮಗಳಾಗಿವೆ‘ ಎಂದು ತಿಳಿಸಿದ್ದಾರೆ.
ಗೌರವ ಕಾರ್ಯದರ್ಶಿ ರವೀಂದ್ರ ಎಸ್.ಬಳಿಗಾರ, ಜಂಟಿ ಗೌರವ ಕಾರ್ಯದರ್ಶಿ ಮಹೇಂದ್ರ ಎಚ್.ಸಿಂಘಿ ಮಾಜಿ ಅಧ್ಯಕ್ಷ ವಸಂತ ಲದವಾ, ತೆರಿಗೆ ಸಮಿತಿ ಚೇರ್ಮನ್ ಕಾರ್ತಿಕ ಶೆಟ್ಟಿ , ಸಿಎ ಚನ್ನವೀರ ಮುಂಗರವಾಡಿ, ಸಿಎ ಕಪಿಲ ಭಂಡಾರಕರ, ಸಿಎ ಗುಲಾಬ ಛಜ್ಜೇಡ, ಸದಸ್ಯರಾದ ಅಶೋಕ ಲದವಾ, ವಿಶ್ವನಾಥ ಹಿರೇಗೌಡರ, ವಿದ್ಯಾಧರ ಯಲಗಚ್ಛ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.