ADVERTISEMENT

ಸುರಕ್ಷತೆಗಾಗಿ ಖರೀದಿಸಿದ್ದ ಚಾಕುವಿನಿಂದ ಕೊಲೆ: ಆರೋಪಿಗಳ ತೀವ್ರ ವಿಚಾರಣೆ

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 23:30 IST
Last Updated 10 ಜುಲೈ 2022, 23:30 IST
ಚಂದ್ರಶೇಖರ ಗುರೂಜಿ
ಚಂದ್ರಶೇಖರ ಗುರೂಜಿ   

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಚಾಕುಗಳನ್ನು ಕೆಲ ವರ್ಷಗಳ ಹಿಂದೆಯೇ ಖರೀದಿಸಿದ್ದರು. ಅತ್ಯಂತ ಹರಿತವಾದ ಈ ಚಾಕುಗಳನ್ನು ಸುರಕ್ಷತೆಗಾಗಿ ಇಬ್ಬರೂ ಸದಾ ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದರು ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಸಂಸ್ಥೆಯ ಉಪಾಧ್ಯಕ್ಷನಾಗಿದ್ದ ಪ್ರಮುಖ ಆರೋಪಿ ಮಹಾಂತೇಶ ಶಿರೂರ ಮುಂಬೈನಲ್ಲಿ ಕೆಲಸ ಮಾಡುವಾಗ, 2014ರಲ್ಲಿ ತನ್ನ ಸುರಕ್ಷತೆಗಾಗಿ ಚಾಕು ಖರೀದಿಸಿದ್ದ. ಮತ್ತೊಬ್ಬ ಆರೋಪಿ ಮಂಜುನಾಥ ಮರೇವಾಡ, ಗುಜರಾತ್‌ನಲ್ಲಿ ಕೆಲ ತಿಂಗಳು ಕೆಲಸಕ್ಕಿದ್ದಾಗ ಚಾಕು ಖರೀದಿ ಮಾಡಿದ್ದ.

ಗ್ರೂಪ್ ಮಾಡಿಕೊಂಡಿದ್ದರು:ವಂಚನೆ ಕಾರಣಕ್ಕಾಗಿ ಸಂಸ್ಥೆಯಿಂದ ಗುರೂಜಿ ಕೆಲಸಕ್ಕೆ ತೆಗೆದಿದ್ದವರದ್ದೇ ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಕೂಡ ಇತ್ತು. ಅದಕ್ಕೆ ಮಹಾಂತೇಶ ಸೇರಿದಂತೆ ಕೆಲವರು ಅಡ್ಮಿನ್‌ಗಳಾಗಿದ್ದರು. ಗ್ರೂಪ್‌ ಮೂಲಕವೇ, ಸಂಸ್ಥೆ ವಿರುದ್ಧ ಆರೋಪಿ ಹಿಂದೆ ಪ್ರತಿಭಟನೆಗೆ ಮಾಜಿ ಉದ್ಯೋಗಿಗಳನ್ನು ಸಂಘಟಿಸಿದ್ದ. ಅದರಲ್ಲಿದ್ದ ಸದಸ್ಯರೆಲ್ಲರೂ ಗುರೂಜಿಯಿಂದ ತಮಗೆ ಅನ್ಯಾಯವಾಗಿದೆ ಎಂದು ದ್ವೇಷ ಕಾರುತ್ತಿದ್ದರು.

ADVERTISEMENT

ಅದೇ ಕಾರಣಕ್ಕಾಗಿ ಹಲವರನ್ನು ವಿಚಾರಣೆ ಕೂಡ ನಡೆಸಲಾಗಿದೆ. ಈ ಪೈಕಿ, ಮಹಾಂತೇಶನ ಜೊತೆ ಹೆಚ್ಚು ಆತ್ಮೀಯವಾಗಿದ್ದವರು ಕೊಲೆಯ ಹಿಂದೆ ಇದ್ದಾರೆಯೇ ಎಂಬ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ. ಕೈವಾಡ ಇರುವುದರು ಖಚಿತವಾದರೆ ಅವರನ್ನು ಸಹ ಬಂಧಿಸಲಾಗುವುದು. ಸದ್ಯ ಆರೋಪಿಗಳ 6 ದಿನಗಳ ಪೊಲೀಸ್ ಕಸ್ಟಡಿ ಅವಧಿ ಜುಲೈ 12ರಂದು ಅಂತ್ಯಗೊಳ್ಳಲಿದೆ. ಅಂದು ಇಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಲಾಗವುದು. ಅಗತ್ಯವಿದ್ದರೆ, ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.