ADVERTISEMENT

ಬದುಕನ್ನು ಸಂಭ್ರಮಿಸುವುದರಲ್ಲಿದೆ ಕಿಕ್: ನಟ ಶಿವರಾಜ್ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 6:02 IST
Last Updated 26 ನವೆಂಬರ್ 2024, 6:02 IST
   

ಹುಬ್ಬಳ್ಳಿ: 'ಬದುಕನ್ನು ಸಂಭ್ರಮಿಸುವುದರಲ್ಲೇ ಕಿಕ್‌ ಇದೆ. ಅದನ್ನು ಬಿಟ್ಟು ಮಾದಕವಸ್ತು ವ್ಯಸನಕ್ಕೆ ಯಾರೂ ದಾಸರಾಗಬಾರದು' ಎಂದು ನಟ ಶಿವರಾಜ್ ಕುಮಾರ್ ಸಲಹೆ ನೀಡಿದರು.

ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹು-ಧಾ ಪೊಲೀಸ್ ಕಮಿಷನರೇಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಾದಕ ವ್ಯಸನ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

'ಶಬ್ದವೇದಿ ಸಿನಿಮಾದಲ್ಲಿ ಅಪ್ಪಾಜಿ (ರಾಜ್ ಕುಮಾರ್) ಮಾದಕಪದಾರ್ಥ ವ್ಯಸನದ ವಿರುದ್ಧ ಹೋರಾಡಿದ ಕಥಾನಕವಿದೆ. ಈ ಬಗ್ಗೆ ಅರಿವು ಮೂಡಿಸುವಲ್ಲಿ ಸಿನಿಮಾ ರಂಗದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ' ಎಂದರು.

ADVERTISEMENT

'ಜನ್ಮ ದೇವರು ನೀಡುವ ಅಮೂಲ್ಯವಾದ ಉಡುಗೊರೆ. ಅದನ್ನು ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಮಾದಕವಸ್ತು ವ್ಯಸನದಿಂದ ದೂರವಿರುವುದು ಒಳ್ಳೆಯದು. ನೀವು ಎಚ್ಚೆತ್ತುಕೊಂಡು, ಸ್ನೇಹಿತರಿಗೂ ಜಾಗೃತಿ ಮೂಡಿಸಬೇಕು. ಅಗತ್ಯ ಸಂದರ್ಭದಲ್ಲಿ ಪೊಲೀಸರಿಗೂ ಮಾಹಿತಿ ನೀಡಬೇಕು' ಎಂದರು.

'ನಶೆಯನ್ನು ಯಾವುದೋ ವಸ್ತುವಿನಲ್ಲಿ ಹುಡುಕುವ ಬದಲು ಗೆಳೆತನ, ಸಂಬಂಧ, ಓದು, ಕ್ರೀಡೆಯಲ್ಲಿ ಹುಡುಕಬೇಕು. ಪ್ರಾಮಾಣಿಕವಾಗಿ ಬದುಕುವ ರೀತಿಯಲ್ಲೂ ನಶೆ ಇದೆ. ಮಾದಕ ವಸ್ತು ವ್ಯಸನದಿಂದ ಬದುಕು ಹಾಳಾಗುತ್ತದೆ. ತಂದೆ-ತಾಯಿ ಆಸೆ ಈಡೇರಿಸಲು ಶ್ರಮಿಸಬೇಕು. ಒಳ್ಳೆತನಕ್ಕೆ ಹೋರಾಡಬೇಕು. ಸಂತೋಷದಿಂದ ಬದುಕಬೇಕು' ಎಂದು ಕಿವಿಮಾತು ಹೇಳಿದರು.

ಹಾಡು ಹಾಡಿ, 'ಟಗರು' ಹಾಡಿಗೆ ನೃತ್ಯ ಮಾಡಿ ರಂಜಿಸಿದರು. ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, 'ಮಾದಕ ವಸ್ತು ವ್ಯಸನವೆಂಬುದು ಗೆದ್ದಲಹುಳದಂತೆ ವ್ಯಕ್ತಿಯ ಬದುಕನ್ನೇ ನಾಶ ಮಾಡುತ್ತದೆ' ಎಂದರು.

ಗೀತಾ ಶಿವರಾಜ್ ಕುಮಾರ್, ಕಾಲೇಜಿನ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.